ಸುದ್ದಿಗಳು

ತೃತೀಯ ಲಿಂಗಿ ವ್ಯಕ್ತಿಯ ಎನ್‌ಸಿಸಿ ಸೇರ್ಪಡೆ ಕೋರಿಕೆಗೆ ಅನುಮತಿ ನೀಡಿದ ಕೇರಳ ಹೈಕೋರ್ಟ್‌

Bar & Bench

ನ್ಯಾಷನಲ್‌ ಕೆಡೆಟ್‌ ಕೋರ್‌ಗೆ‌ (ಎನ್‌ ಸಿಸಿ) ಸೇರ್ಪಡೆಗೊಳ್ಳಲು ತನ್ನ ಲಿಂಗತ್ವದ ಸ್ವಯಂ ಗ್ರಹಿಕೆಯ ಗುರುತಿನ ಆಧಾರದಲ್ಲಿ ತೃತೀಯ ಲಿಂಗಿ ವ್ಯಕ್ತಿಗೆ ಹಕ್ಕಿದೆ ಎಂದು ಸೋಮವಾರ ಕೇರಳ ಹೈಕೋರ್ಟ್ ಮಹತ್ವದ‌ ತೀರ್ಪು ನೀಡಿದೆ (ಹೀನಾ ಹನೀಫಾ @ ಮುಹಮ್ಮದ್‌ ಆಸಿಫ್‌ ಅಲಿನ್‌ ವರ್ಸಸ್‌ ಕೇರಳ ಸರ್ಕಾರ).

ಹೀನಾ ಹನೀಫಾ ಎನ್ನುವ ತೃತೀಯ ಲಿಂಗಿ ಮಹಿಳೆ 1948ರ ನ್ಯಾಷನಲ್‌ ಕೆಡೆಟ್ ಕೋರ್‌ ಕಾಯಿದೆಯ ಸೆಕ್ಷನ್‌ 6 ಅನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ಕುರಿತಾದ ತೀರ್ಪನ್ನು ನ್ಯಾ. ಅನು ಶಿವರಾಮನ್‌ ಅವರಿದ್ದ ಪೀಠವು ಇಂದು ನೀಡಿದೆ. ಕಾಯಿದೆಯ ಅನ್ವಯ ಕೇವಲ ಪುರುಷ ಅಥವಾ ಸ್ತ್ರೀಯರು ಮಾತ್ರವೇ ಎನ್‌ಸಿಸಿ ಸೇರಬಹುದಾಗಿದೆ.

ಎನ್‌ಸಿಸಿಯಲ್ಲಿ ತೃತೀಯ ಲಿಂಗಿಗಳಿಗೆ ಅವಕಾಶವಿಲ್ಲವಾದ ಕಾರಣಕ್ಕೆ ಹೀನಾ ಹನೀಫಾ ಅವರು ‘ಸ್ತ್ರೀ’ ಎನ್ನುವ ತಮ್ಮ ಲಿಂಗತ್ವದ ಸ್ವಯಂ ಗ್ರಹಿಕೆಯ ಗುರುತಿನ ಹಿನ್ನೆಲೆಯಲ್ಲಿ ಎನ್‌ಸಿಸಿ ಸೇರ್ಪಡೆಗೆ ಅರ್ಜಿ ಸಲ್ಲಿಸಿದ್ದರು.

Petitioner Hina Haneefa

“ಸ್ತ್ರೀ ಲಿಂಗತ್ವವನ್ನು ಆಯ್ಕೆ ಮಾಡಿಕೊಂಡಿರುವ ಅರ್ಜಿದಾರರು ತಮ್ಮ ಸ್ವಯಂ ಲಿಂಗತ್ವ ಗ್ರಹಿಕೆಯನ್ನು ಸಮರ್ಥಿಸಲು ಲಿಂಗತ್ವ ಮಾರ್ಪಾಟು ಚಿಕಿತ್ಸೆಗೂ ಒಳಗಾಗಿದ್ದು ಅವರು ಖಂಡಿತವಾಗಿಯೂ ತೃತೀಯ ಲಿಂಗಿಯಾಗಿ ಹಾಗೂ ಸ್ತ್ರೀ ಎನ್ನುವ ತಮ್ಮ ಲಿಂಗತ್ವದ ಸ್ವಯಂ ಗ್ರಹಿಕೆಯ ಗುರುತಿನ ಆಧಾರದಲ್ಲಿ ಎನ್‌ಸಿಸಿಯಲ್ಲಿ ದಾಖಲಾಗುವ ಹಕ್ಕು ಹೊಂದಿದ್ದಾರೆ ಎನ್ನುವುದು ನನ್ನ ಅಭಿಪ್ರಾಯವಾಗಿದೆ,” ಎಂದು ನ್ಯಾಯಮೂರ್ತಿ ಅನು ಶಿವರಾಮನ್‌ ಅವರು ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.

ಮುಂದುವರೆದು ನ್ಯಾಯಾಲಯವು, ತೃತೀಯ ಲಿಂಗಿ ವ್ಯಕ್ತಿಗಳ (ರಕ್ಷಣೆ ಮತ್ತು ಹಕ್ಕುಗಳು) ಕಾಯಿದೆ, 2019 ಅನ್ನು ಎನ್‌ಸಿಸಿಯ ನಿಬಂಧನೆಯು ಮೀರುವಂತಿಲ್ಲ ಎಂದಿದೆ. 2019ರ ಕಾಯಿದೆಯು ತೃತೀಯ ಲಿಂಗಿಗಳಿಗೆ ಘನತೆಯ ಜೀವನವನ್ನು ಖಾತರಿ ಪಡಿಸುತ್ತದೆ ಹಾಗೂ ಅವರ ವಿರುದ್ಧ ತಾರತಮ್ಯವನ್ನು ನಿಷೇಧಿಸುತ್ತದೆ, ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ನೋಡಬೇಕಿದೆ ಎಂದಿದೆ.

ಎನ್‌ಸಿಸಿ ಕಾಯಿದೆಯು ತೃತೀಯ ಲಿಂಗಿಗಳನ್ನು ಗುರುತಿಸುವುದಿಲ್ಲ ಎನ್ನುವುದಾಗಲಿ, ಸೇನೆ ಅಥವಾ ಎನ್‌ಸಿಸಿಗೆ ತೃತೀಯ ಲಿಂಗಿಗಳ ಸೇರ್ಪಡೆಗೆ ವಿಸ್ತೃತವಾದ ಮಾರ್ಗಸೂಚಿಗಳನ್ನು ರೂಪಿಸಬೇಕಿದೆ ಎನ್ನುವುದಾಗಲಿ ಅರ್ಜಿದಾರರಿಗೆ ನೀಡಲಾಗಿರುವ ಗುರುತಿನ ಪತ್ರದ ಕಾರಣದಿಂದ ಅವರು ಎನ್‌ಸಿಸಿ ಘಟಕಕ್ಕೆ ಸೇರ್ಪಡೆಗೊಳ್ಳುವ ಕೋರಿಕೆಯನ್ನು ತಿರಸ್ಕರಿಸಲು ಸಮರ್ಥನೆಯಾಗದು ಎಂದು ನ್ಯಾಯಾಲಯವು ತಿಳಿಸಿದೆ.

ಈ ಹಿನ್ನೆಲೆಯಲ್ಲಿ, “ಪ್ರಸಕ್ತ ಪ್ರಕರಣದಲ್ಲಿ, ಅರ್ಜಿದಾರರು ಎನ್‌ಸಿಸಿಯ ಹಿರಿಯ ವಿದ್ಯಾರ್ಥಿನಿಯರ ವಿಭಾಗದಲ್ಲಿ ದಾಖಲಾಗುವ ಹಕ್ಕನ್ನು ಹೊಂದಿದ್ದಾರೆ ಎನ್ನುವುದು ನನ್ನ ಅಭಿಪ್ರಾಯವಾಗಿದ್ದು, ಅವರ ಈ ಕೋರಿಕೆಯನ್ನು ನಿರಾಕರಿಸುವುದು ಊರ್ಜಿತವಾಗದು,” ಎಂದು ನ್ಯಾಯಮೂರ್ತಿಗಳು ತೀರ್ಪಿನಲ್ಲಿ ಹೇಳಿದ್ದಾರೆ.

ಈ ಹಿಂದೆ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು, ಕೇವಲ ಪುರುಷ ಮತ್ತು ಮಹಿಳೆಯರು ಮಾತ್ರವೇ ಎನ್‌ಸಿಸಿಗೆ ಸೇರ್ಪಡೆಗೊಳ್ಳಲು ಸಾಧ್ಯವಿದ್ದು ತೃತೀಯ ಲಿಂಗಿ ವ್ಯಕ್ತಿಗಳನ್ನು ಅದು ದಾಖಲಿಸಿಕೊಳ್ಳಲಾಗದು ಎನ್ನುವ ಕೇಂದ್ರ ಸರ್ಕಾರದ ನಿಲುವಿನ ಬಗ್ಗೆ ಕಿಡಿಕಿಡಿಯಾಗಿತ್ತು ಎನ್ನುವುದನ್ನು ಇಲ್ಲಿ ಗಮನಿಸಬಹುದು.

ಅರ್ಜಿದಾರರು ಹುಟ್ಟಿನಿಂದ ಗಂಡಾಗಿದ್ದು ಅವರ ಲಿಂಗತ್ವದ ಸ್ವಯಂ ಗ್ರಹಿಕೆಯ ಗುರುತು “ಸ್ತ್ರೀ” ಆಗಿತ್ತು. ತಮ್ಮನ್ನು ತೃತೀಯ ಲಿಂಗಿ ಎಂದು ಇಲ್ಲವೇ ತಮ್ಮ ಸ್ವಯಂ ಗ್ರಹಿಕೆಯ ಲಿಂಗತ್ವವಾದ ‘ಸ್ತ್ರೀ’ ಎಂದು ಪರಿಗಣಿಸಿ ಎನ್‌ಸಿಸಿಗೆ ದಾಖಲಾಗಲು ತನಗೆ ಅನುಮತಿಸಬೇಕು ಎಂದು ಅವರು ಕೋರಿದ್ದರು. ಅರ್ಜಿದಾರರು ಪ್ರಸ್ತುತ ತಿರುವನಂತಪುರದ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಓದುತ್ತಿದ್ದಾರೆ.