“ಸಶಸ್ತ್ರ ಪಡೆ ಮತ್ತು ಎನ್‌ಸಿಸಿಗೆ ತೃತೀಯಲಿಂಗಿಗಳಿಗೆ ಪ್ರವೇಶಾವಕಾಶ ನೀಡಲು ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲ ಮತ್ತು ಅದಕ್ಕೆ ಅನುಮತಿ ನೀಡಬೇಕೆ ಅಥವಾ ಬೇಡವೇ ಎಂದು ನಿರ್ಧರಿಸುವುದು ತನಗಿರುವ ವಿಶೇಷ ಅಧಿಕಾರ,” ಎಂದು ಕೇರಳ ಹೈಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಕೇಂದ್ರ ಸರ್ಕಾರ ತಿಳಿಸಿದೆ.
"ತೃತೀಯ ಲಿಂಗಿಗಳಿಗಾಗಿ ಹೊಸ ಸೇನಾ ವಿಭಾಗ ರಚಿಸುವುದು ಕೇಂದ್ರ ಸರ್ಕಾರದ ಅಧಿಕಾರವಾಗಿದೆ. ಹೊಸ ವಿಭಾಗ ರಚಿಸುವ ಮೊದಲು, ಮೂಲಸೌಕರ್ಯ ಸೌಲಭ್ಯಗಳು, ಮಾಡ್ಯೂಲ್‌ಗಳನ್ನು ಪರಿಶೀಲಿಸುವ ವಿಷಯದಲ್ಲಿ ಕೇಂದ್ರ ಸರ್ಕಾರ ಮತ್ತು ಅಧಿಕಾರಿಗಳು ಭಾರೀ ತಾಲೀಮು, ಸಿದ್ಧತೆ ನಡೆಸಬೇಕಾಗುತ್ತದೆ. ಅಧಿಕಾರಿಗಳು ಸೂಕ್ತ ಚರ್ಚೆ ನಡೆಸದೆ ಪುರುಷ ಅಥವಾ ಸ್ತ್ರೀಲಿಂಗಕ್ಕೆ ಸೇರದವರಿಗೆ ಅವಕಾಶ ಕಲ್ಪಿಸಿದರೆ ಮುಂದೆ ಗಂಭೀರ ಪರಿಣಾಮಗಳಿಗೆ ಎಡೆಮಾಡಿಕೊಟ್ಟಂತಾಗುತ್ತದೆ "ಎಂದು ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ.
ಪ್ರಸ್ತುತ ಬಾಲಕ ಮತ್ತು ಬಾಲಕಿಯರಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲು ಸಾಧ್ಯವಿದೆ. ಸಶಸ್ತ್ರಪಡೆಗಳಿಗೆ ಕೆಡೆಟ್‌ಗಳನ್ನು ಅಣಿಗೊಳಿಸುವುದು ಎನ್‌ಸಿಸಿಯ ಉದ್ದೇಶವಾಗಿದ್ದು ಸೇನೆಯಲ್ಲಿ ತೃತೀಯಲಿಂಗಿಗಳಿಗೆ ಅವಕಾಶ ಇಲ್ಲದ ಕಾರಣ ಎನ್‌ಸಿಸಿಯಲ್ಲಿಯೂ ಅವರಿಗೆ ಅವಕಾಶ ದೊರೆತಿಲ್ಲ ಎಂದು ಸಮರ್ಥಿಸಿಕೊಳ್ಳಲಾಗಿದೆ.
ರಾಷ್ಟ್ರೀಯ ಕ್ಯಾಡೆಟ್ ಕೋರ್ (ಎನ್‌ಸಿಸಿ) ಕಾಯ್ದೆಯ ಸೆಕ್ಷನ್ 6ನೇ ಸೆಕ್ಷನ್ ಪ್ರಶ್ನಿಸಿ ಹೀನಾ ಹನೀಫಾ ಎಂಬ ತೃತೀಯಲಿಂಗಿ ಮಹಿಳೆ ಕೇರಳ ಹೈಕೋರ್ಟ್ ಮೊರೆ ಹೋಗಿದ್ದರು. ತಾವು ಎನ್‌ಸಿಸಿ ಸೇರಬಯಸುತ್ತಿರುವುದಾಗಿ ಅಲ್ಲದೆ ಈ ಹಿಂದೆ ಕೋರ್ ಸದಸ್ಯೆಯಾಗಿದ್ದೆ ಎಂದು ಕೂಡ ಅವರು ಹೇಳಿದ್ದರು. ಎನ್‌ಸಿಸಿಯಲ್ಲಿ ತೃತೀಯಲಿಂಗಿಗಳಿಗೆ ಅವಕಾಶ ಕಲ್ಪಿಸದಿರುವುದಕ್ಕೆ ಹಿಂದಿನ ವಿಚಾರಣೆ ವೇಳೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು.