Kerala High Court 
ಸುದ್ದಿಗಳು

ಗುರುವಾಯೂರು ದೇಗುಲದಲ್ಲಿ ವ್ಲಾಗರ್‌ಗಳ ವಿಡಿಯೋಗ್ರಫಿ ನಿಷೇಧಿಸಿದ ಕೇರಳ ಹೈಕೋರ್ಟ್: ಕೇಕ್ ಕತ್ತರಿಸಿದ ಮಹಿಳೆಗೆ ನೋಟಿಸ್

ದೇವಸ್ಥಾನದ ನಡಪಂಥಾಲ್‌ನಲ್ಲಿ ಮಹಿಳೆಯೊಬ್ಬರು ಹುಟ್ಟುಹಬ್ಬದ ಕೇಕ್ ಕತ್ತರಿಸುವ ವೇಳೆ ಭಕ್ತರೊಂದಿಗೆ ಜಗಳವಾಡಿದ್ದ ಕೆಲ ದೃಶ್ಯಗಳನ್ನು ಗಮನಿಸಿದ ಪೀಠ ಈ ಆದೇಶ ನೀಡಿದೆ.

Bar & Bench

ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದ ನಡಪಂಥಾಲ್‌ನಲ್ಲಿ ಮದುವೆ ಮತ್ತಿತರ ಧಾರ್ಮಿಕ ಸಮಾರಂಭಗಳನ್ನು ಹೊರತುಪಡಿಸಿ ಉಳಿದ ವಿಡಿಯೋಗ್ರಫಿಗೆ ಅನುಮತಿ ನೀಡದಂತೆ ಕೇರಳ ಹೈಕೋರ್ಟ್ ಇತ್ತೀಚೆಗೆ ಗುರುವಾಯೂರು ದೇವಸ್ವಂ ವ್ಯವಸ್ಥಾಪಕ ಸಮಿತಿ ಮತ್ತು ಅದರ ಆಡಳಿತಗಾರರಿಗೆ ನಿರ್ದೇಶನ ನೀಡಿದೆ [ಪಿಪಿ ವೇಣುಗೋಪಾಲ್ ಇನ್ನಿತರರು ಮತ್ತು ಕೇರಳ ಸರ್ಕಾರ ಮತ್ತಿತರರ ನಡುವಣ ಪ್ರಕರಣ].

ದೇವಸ್ಥಾನದ ನಡಪಂಥಾಲ್‌ನಲ್ಲಿ ಮಹಿಳೆಯೊಬ್ಬರು ಹುಟ್ಟುಹಬ್ಬದ ಕೇಕ್ ಕತ್ತರಿಸುವ ವೇಳೆ  ಭಕ್ತರೊಂದಿಗೆ ಜಗಳವಾಡಿದ್ದ ಕೆಲ ದೃಶ್ಯಗಳನ್ನು ಗಮನಿಸಿದ ನ್ಯಾಯಮೂರ್ತಿಗಳಾದ ಅನಿಲ್ ಕೆ ನರೇಂದ್ರನ್ ಮತ್ತು ಪಿ ಜಿ ಅಜಿತ್‌ಕುಮಾರ್‌ ಅವರಿದ್ದ ಪೀಠ ಈ ಆದೇಶ ನೀಡಿದೆ.

ಕೇರಳ ಪೊಲೀಸ್ ಕಾಯಿದೆ ಪ್ರಕಾರ ದೇವಾಲಯ 'ವಿಶೇಷ ಭದ್ರತಾ ವಲಯವಾಗಿದೆ.  ಹೀಗಾಗಿ ಅನಧಿಕೃತ ಚಿತ್ರೀಕರಣ ಸೇರಿದಂತೆ ಯಾವುದೇ ಚಟುವಟಿಕೆಯಿಂದ ಭಕ್ತರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ವ್ಯವಸ್ಥಾಪಕ ಸಮಿತಿಗೆ ನ್ಯಾಯಾಲಯ ನಿರ್ದೇಶಿಸಿದೆ. ಖ್ಯಾತನಾಮರಂತೆಯೇ ವ್ಲಾಗರ್‌ಗಳ ವೀಡಿಯೊಗ್ರಫಿಗೆ ಅನುಮತಿ ನೀಡಲಾಗದು ಎಂದು ಆದೇಶಿಸಿದೆ.

ದೇವಾಲಯದ ಒಳಾಂಗಣ ಅದರಲ್ಲಿಯೂ ಪೂರ್ವ 'ದೀಪಸ್ತಂಭ'ದ ವೀಡಿಯೊಗ್ರಫಿಗೆ ಅನುಮತಿಸಲಾಗದು ಎಂದ ಅದು ಹುಟ್ಟುಹಬ್ಬದ ಕೇಕ್ ಕತ್ತರಿಸಿದ್ದ ಮಹಿಳೆಗೆ ನೋಟಿಸ್ ಜಾರಿ ಮಾಡಿದೆ.

ಯಾವುದೇ ಚಟುವಟಿಕೆಯಿಂದ ಎಳೆಯ ವಯಸ್ಸಿನ ಮಕ್ಕಳು, ಹಿರಿಯ ನಾಗರಿಕರು ಮತ್ತು ವಿಕಲಚೇತನರು ಸೇರಿದಂತೆ ಭಕ್ತರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಹೊಣೆ ಎಂದು ನ್ಯಾಯಾಲಯ ಹೇಳಿದೆ.

ಈ ಉದ್ದೇಶಕ್ಕಾಗಿ ಗುರುವಾಯೂರು ದೇವಸ್ವಂನ ಭದ್ರತಾ ವಿಭಾಗವನ್ನು ಬಳಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಲ್ಲದೆ, ಅವರು ಪೊಲೀಸರ ಸಹಾಯವನ್ನು ಕೂಡ ಪಡೆಯಬಹುದು ಎಂದು ಹೇಳಿದೆ.

1965ರ ಕೇರಳ ಹಿಂದೂ ಸಾರ್ವಜನಿಕ ಪೂಜಾ ಸ್ಥಳಗಳ (ಪ್ರವೇಶದ ಅಧಿಕಾರ) ಕಾಯ್ದೆ ಮತ್ತು ಅನುಗುಣವಾದ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಮಹಿಳೆಯ ವಿರುದ್ಧ ಕ್ರಮ ಕೈಗೊಳ್ಳಲು ಆದೇಶಿಸುವಂತೆ ಕೋರಿ ದೇವಸ್ಥಾನದ ಇಬ್ಬರು ಭಕ್ತರು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯ ಈ ಆದೇಶ ನೀಡಿದೆ.

ವೀಡಿಯೊದಲ್ಲಿ ಮಹಿಳೆ ನಡೆದುಕೊಂಡ ರೀತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅದು ನಡಪಂಥಾಲ್‌ನಲ್ಲಿ ಭಕ್ತರೊಂದಿಗೆ ಜಗಳವಾಡಲು ಯಾರಿಗೂ ಅನುಮತಿ ಇಲ್ಲ. ಅದೇ ರೀತಿ ದೇಗುಲದ ನಡಪಂಥಾಲ್ ಹುಟ್ಟುಹಬ್ಬದ ಕೇಕ್‌ ಕತ್ತರಿಸುವ ಸ್ಥಳವಲ್ಲ ಎಂದು ನ್ಯಾಯಾಲಯ ಹೇಳಿದೆ. ಹೀಗಾಗಿ ನ್ಯಾಯಾಲಯ ಮಹಿಳೆಗೆ ನೋಟಿಸ್ ಜಾರಿ ಮಾಡಿದ ಅದು ಪ್ರಕರಣವನ್ನು ಅಕ್ಟೋಬರ್ 18ಕ್ಕೆ ಮುಂದೂಡಿದೆ.