ಶಬರಿಮಲೆ ಅಯ್ಯಪ್ಪ ದೇಗುಲದ ಮೇಲ್ಶಾಂತಿ (ಪ್ರಧಾನ ಅರ್ಚಕ) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ಮಲಯಾಳ ಬ್ರಾಹ್ಮಣ ಸಮುದಾಯದವರಾಗಿರಬೇಕು ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಲಾದ ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಕೇರಳ ಸರ್ಕಾರದ ಪ್ರತಿಕ್ರಿಯೆ ಕೇಳಿದೆ [ಸಿಜಿತ್ ಟಿಎಲ್ ಮತ್ತಿತರರು ಹಾಗೂ ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಫೆಬ್ರವರಿ 27 ರಂದು, ಕೇರಳ ಹೈಕೋರ್ಟ್ ಈ ಕುರಿತಾದ ಮನವಿಗಳನ್ನು ವಜಾಗೊಳಿಸಿದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.
ಮೇಲ್ಮನವಿ ಸಂಬಂಧ ದೇವಸ್ವಂ ಇಲಾಖೆ ಮೂಲಕ ಕೇರಳ ಸರ್ಕಾರ, ದೇವಸ್ವಂ ಆಯುಕ್ತರು ಹಾಗೂ ತಿರುವಾಂಕೂರು ದೇವಸ್ವಂ ಮಂಡಳಿಗೆ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರಿದ್ದ ವಿಭಾಗೀಯ ಪೀಠ ನೋಟಿಸ್ ಜಾರಿ ಮಾಡಿದೆ. ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 25ರಂದು ನಡೆಯಲಿದೆ.
ಪ್ರಧಾನ ಅರ್ಚಕರ ಆಯ್ಕೆಯನ್ನು ಮಲಯಾಳ ಬ್ರಾಹ್ಮಣ ಸಮುದಾಯದ ವ್ಯಕ್ತಿಗಳಿಗೆ ಸೀಮಿತಗೊಳಿಸುವುದು ಸಂವಿಧಾನದತ್ತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಬ್ರಾಹ್ಮಣೇತರ ಅರ್ಚಕರಾಗಿರುವ ಇಬ್ಬರು ಅರ್ಜಿದಾರರು ಪ್ರತಿಪಾದಿಸಿದ್ದರು.
ಮನವಿ ಸೂಕ್ತವಾಗಿಲ್ಲ ಎಂದು ಮೇಲ್ನೋಟಕ್ಕೆ ಕಂಡುಬಂದಿದ್ದ ಹಿನ್ನೆಲೆಯಲ್ಲಿ ಹೈಕೋರ್ಟ್ ರಿಟ್ ಅರ್ಜಿಗಳನ್ನು ವಜಾಗೊಳಿಸಿತ್ತು. ತಿರುವಾಂಕೂರು ದೇವಸ್ವಂ ಮಂಡಳಿ ಹೊರಡಿಸಿದ ಅಧಿಸೂಚನೆ ಅಸ್ಪೃಶ್ಯತೆಗೆ ಕಾರಣವಾಗುತ್ತದೆ ಎಂಬ ವಾದವನ್ನು ಅದು ತಿರಸ್ಕರಿಸಿತ್ತು.
ದೇವರ ಪೂಜೆಗಾಗಿ ದೇವಸ್ಥಾನ ಪ್ರವೇಶಿಸಲು ಸಂವಿಧಾನದ 25(2)(ಬಿ) ಅನುವು ಮಾಡಿಕೊಡುತ್ತದೆಯೇ ವಿನಾ ಅರ್ಚಕರು ಮಾತ್ರವೇ ಸಲ್ಲಿಸಬಹುದಾದ ಸೇವೆಗಳನ್ನು ಮಾಡಲು ಅಲ್ಲ ಎಂದು ಅದು ಹೇಳಿತ್ತು.
ಶ್ರೀ ವೆಂಕಟರಮಣ ದೇವರು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಎತ್ತಿ ಹಿಡಿದಿರುವಂತೆ ಪೂಜೆಯ ಉದ್ದೇಶಕ್ಕಾಗಿ ದೇಗುಲ ಪ್ರವೇಶಿಸುವ ಹಕ್ಕನ್ನು ಸಂವಿಧಾನದ 25(2)(b) ವಿಧಿಯು ಸಂರಕ್ಷಿಸುತ್ತದೆ. ಈ ಹಕ್ಕು ಸಂಪೂರ್ಣವೂ ಮತ್ತು ಅನಿಯಮಿತವೂ ಅಲ್ಲ. ಯಾವುದೇ ಹಿಂದೂ ಸಾರ್ವಜನಿಕರು ಸಂವಿಧಾನದ ವಿಧಿ 25 (2) (ಬಿ) ರ ಮೂಲಕ ಸಂರಕ್ಷಿಸಲ್ಪಟ್ಟ ಹಕ್ಕುಗಳ ಭಾಗವಾಗಿ ದಿನದ ಯಾವುದೇ ಹೊತ್ತಿನಲ್ಲಿ ಪೂಜೆಗೆ ತೆರಳುವ ಹಕ್ಕನ್ನು ಇದು ಹೊಂದಿಲ್ಲ, ಅದೇ ರೀತಿ ದೇವಸ್ಥಾನ ಪ್ರವೇಶಿಸಿದವರು ತಾವೇ ಸ್ವತಃ ದೇವರ ಅರ್ಚನೆ ಮಾಡಬೇಕು ಎನ್ನುವ ಹಕ್ಕನ್ನಾಗಲಿ, ಹಗಲು ಮತ್ತು ರಾತ್ರಿಯ ಎಲ್ಲಾ ಗಂಟೆಗಳಲ್ಲಿ ದೇವಾಲಯವನ್ನು ಪೂಜೆಗಾಗಿ ತೆರೆದಿರಬೇಕು ಎನ್ನುವುದನ್ನಾಗಲಿ ಅದು ಹೇಳುವುದಿಲ್ಲ. ಆದ್ದರಿಂದ, ಅರ್ಜಿದಾರರ ಪರ ವಕೀಲರ ವಾದದಲ್ಲಿ ನಾವು ಯಾವುದೇ ಅರ್ಹತೆಯನ್ನು ಕಾಣುವುದಿಲ್ಲ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಹೇಳಿತ್ತು.