Pregnant woman and Kerala High Court  
ಸುದ್ದಿಗಳು

ಅಕ್ರಮ ಬಾಡಿಗೆ ತಾಯ್ತನ, ಅಂಡಾಣು ದಾನ: ಎಸ್ಐಟಿ ತನಿಖೆಗೆ ಕೇರಳ ಹೈಕೋರ್ಟ್ ಆದೇಶ

ಈ ನಿಟ್ಟಿನಲ್ಲಿ ರಾಜ್ಯ ಪೊಲೀಸ್ ಮುಖ್ಯಸ್ಥರಿಂದ ಸೂಚನೆಗಳನ್ನು ಪಡೆಯಲು ನ್ಯಾಯಾಲಯ ಸರ್ಕಾರಿ ವಕೀಲರಿಗೆ ನಿರ್ದೇಶಿಸಿದೆ.

Bar & Bench

ಸಂತಾನೋತ್ಪತ್ತಿ ನೆರವಿನ ಪ್ರಜನನ ತಂತ್ರಜ್ಞಾನ (ಎಆರ್‌ಟಿ) ಸೇವೆಗಳ ಸೋಗಿನಲ್ಲಿ ಅಕ್ರಮವಾಗಿ ಅಂಡಾಣು ದಾನ ಮತ್ತು ಬಾಡಿಗೆ ತಾಯ್ತನಕ್ಕೆ ಎಡೆ ಮಾಡಿಕೊಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸಬೇಕು ಎಂದು ಕೇರಳ ಹೈಕೋರ್ಟ್‌ ಈಚೆಗೆ ಆದೇಶಿಸಿದೆ [ಎಆರ್‌ಟಿ ನಿಧಿ ವ್ಯವಸ್ಥಾಪಕ ನಿರ್ದೇಶಕ ಅಬ್ದುಲ್ ಮುತಾಲಿಫ್ ಅವರ ಮೂಲಕ ನಿಧಿಯ ಪ್ರತಿನಿಧಿ ಮತ್ತು ಕೇರಳ ರಾಜ್ಯ ಪೊಲೀಸ್ ಮುಖ್ಯಸ್ಥರ ನಡುವಣ ಪ್ರಕರಣ].

ಈ ನಿಟ್ಟಿನಲ್ಲಿ ರಾಜ್ಯ ಪೊಲೀಸ್ ಮುಖ್ಯಸ್ಥರಿಂದ ಸೂಚನೆಗಳನ್ನು ಪಡೆಯಲು ನ್ಯಾಯಮೂರ್ತಿಗಳಾದ ದೇವನ್‌ ರಾಮಚಂದ್ರನ್‌ ಮತ್ತು ಎಂ ಬಿ ಸ್ನೇಹಲತಾ ಅವರಿದ್ದ ಪೀಠ ಸರ್ಕಾರಿ ವಕೀಲರಿಗೆ ನಿರ್ದೇಶಿಸಿತು.

"ಎಲ್ಲಾ ಅಂಶಗಳನ್ನು ಸರಿಯಾಗಿ ಪರಿಗಣಿಸಿ ತನಿಖೆ ನಡೆಸಲು ಸಾಧ್ಯವಾಗುವಂತೆ ವಿಶೇಷ ತನಿಖಾ ತಂಡ ರಚಿಸಬೇಕು" ಎಂದು ನ್ಯಾಯಾಲಯ ಹೇಳಿದೆ.

ಸ್ವಯಂ ಪ್ರೇರಿತವಾಗಿ ವೈದ್ಯಕೀಯ ತಪಾಸಣೆಗೆ ಬಂದಿದ್ದ ಕೆಲವು ಮಹಿಳೆಯರನ್ನು ಪೊಲೀಸರು ಮತ್ತು ಆರೋಗ್ಯಾಧಿಕಾರಿಗಳು ಅಕ್ರಮವಾಗಿ ವಶಕ್ಕೆ ಪಡೆದು ಆಶ್ರಯ ಕೇಂದ್ರವೊಂದರಲ್ಲಿ ಇರಿಸಿದ್ದರು ಎಂದು ಎಆರ್‌ಟಿ ಕೇಂದ್ರವೊಂದು ನ್ಯಾಯಾಲಯದ ಮೆಟ್ಟಿಲೇರಿತ್ತು.

ಪ್ರಕರಣದ ವಿಚಾರಣೆ ವೇಳೆ ರಾಜ್ಯದ ಬೇರೆ ಬೇರೆ ಸಂಸ್ಥೆಗಳು ಎಆರ್‌ಟಿ ಮತ್ತು ಬಾಡಿಗೆ ತಾಯ್ತನದ ಸೇವೆ ಹೆಸರಿನಲ್ಲಿ ಅಕ್ರಮ ಚಟುವಟಿಕೆಯಲ್ಲಿ ತೊಡಗಿವೆ ಎಂಬ ಮಾಹಿತಿಯನ್ನು ನ್ಯಾಯಾಲಯಕ್ಕೆ ತಿಳಿಸಲಾಯಿತು.

ಡಿಸೆಂಬರ್ 5ರಂದು, ಕಲಮಶೇರಿ ಪೊಲೀಸ್ ಠಾಣಾಧಿಕಾರಿ ಸಲ್ಲಿಸಿರುವ ವರದಿ ಪ್ರಕಾರ ಪ್ರಾಥಮಿಕ ತನಿಖೆಯಲ್ಲಿ ಹಲವು ಅಕ್ರಮ ಚಟುವಟಿಕೆಗಳು ಪತ್ತೆಯಾಗಿದ್ದವು. ಅಂಡಾಣು ದಾನಕ್ಕಾಗಿ ಮಹಿಳೆಯರನ್ನು ಪ್ರಲೋಭನೆಗೊಡ್ಡುವ ಆನ್‌ಲೈನ್‌ ಜಾಹೀರಾತುಗಳು ಕಂಡುಬಂದಿದ್ದವು. ಬಾಡಿಗೆ ತಾಯ್ತನಕ್ಕೆಂದೇ ಮಹಿಳೆಯರ ನೇಮಕ ಮಾಡಿಕೊಳ್ಳಲಾಗಿತ್ತು. ಅಕ್ರಮ ಜಾಲ ಈ ಕೃತ್ಯಗಳಲ್ಲಿ ತೊಡಗಿತ್ತು.

ವಾದ ಆಲಿಸಿದ ಹೈಕೋರ್ಟ್‌, ತನಿಖಾಧಿಕಾರಿಗಳು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಆದೇಶಕ್ಕೆ ಕಾಯದೆ ತನಿಖೆ ಮುಂದುವರೆಸಬಹುದು ಎಂದಿದೆ.

ಬಾಡಿಗೆ ತಾಯ್ತನ (ನಿಯಂತ್ರಣ) ಕಾಯಿದೆ- 2021 ಹಾಗೂ ಸಹಾಯಕ ಪ್ರಜನನ ತಂತ್ರಜ್ಞಾನ (ನಿಯಂತ್ರಣ) ಕಾಯಿದೆ- 2021ನ್ನು ಉಲ್ಲಂಘಿಸಿ ಹಲವಾರು ವ್ಯಕ್ತಿಗಳು, ಸಂಸ್ಥೆಗಳು ಮತ್ತು ದಾನಿಗಳು ನಿಷೇಧಿತ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಅಕ್ಟೋಬರ್ 17ರಂದು ನಡೆದಿದ್ದ ವಿಚಾರಣೆ ವೇಳೆ ನ್ಯಾಯಾಲಯ ಹೇಳಿತ್ತು.

ರೋಗಿಗಳು ಮತ್ತು ದಾನಿಗಳಿಗೆ ಇರುವ ಕಾನೂನು ಅರಿವಿನ ಕೊರತೆ, ಜೊತೆಗೆ ಹಣಕಾಸು ಪ್ರಲೋಭನೆಗಳು, ಇಂತಹ ಉಲ್ಲಂಘನೆಗಳಿಗೆ ಎಡೆ ಮಾಡಿಕೊಡುತ್ತಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ಇದು ಸರ್ಕಾರದ ನೀತಿ ನಿರೂಪಣೆಯ ಗಂಭೀರ ವೈಫಲ್ಯ ಎಂದಿದ್ದ ನ್ಯಾಯಾಲಯ ಎಆರ್‌ಟಿ ಕಾಯಿದೆ ಮತ್ತು ಬಾಡಿಗೆ ತಾಯ್ತನ ಕಾಯಿದೆಯ ಪ್ರಮುಖಾಂಶಗಳನ್ನು ರಾಜ್ಯದ ಎಲ್ಲಾ ಎಆರ್‌ಟಿ ಕ್ಲಿನಿಕ್‌ಗಳು, ಎಆರ್‌ಟಿ  ನಿಧಿಗಳು ಹಾಗೂ ಬಾಡಿಗೆ ತಾಯ್ತನ ಕೇಂದ್ರಗಳು ಹಾಗೂ ಆಸ್ಪತ್ರೆಗಳಲ್ಲಿ ಇಂಗ್ಲಿಷ್‌ ಮತ್ತು ಮಲಯಾಳಂ ಭಾಷೆಗಳಲ್ಲಿ ಶಾಶ್ವತವಾಗಿ ಪ್ರದರ್ಶಿಸಬೇಕು ಎಂದಿತ್ತು.