ಬಾಡಿಗೆ ತಾಯ್ತನ: 2022ರ ಜನವರಿಗೂ ಮುನ್ನ ಪ್ರಕ್ರಿಯೆ ಆರಂಭಿಸಿದ್ದ ದಂಪತಿಗೆ ವಯೋಮಿತಿ ಅನ್ವಯವಾಗದು ಎಂದ ಸುಪ್ರೀಂ

ಬಾಡಿಗೆ ತಾಯ್ತನ ಕಾಯಿದೆಯಲ್ಲಿ ನಿರ್ದಿಷ್ಟಪಡಿಸಿದ ಗರಿಷ್ಠ ವಯೋಮಿತಿ ದಾಟಿದ್ದರೂ, ಅದು ಜಾರಿಗೆ ಬರುವ ಮೊದಲೇ ಬಾಡಿಗೆ ತಾಯ್ತನ ಪ್ರಕ್ರಿಯೆ ಪ್ರಾರಂಭಿಸಿದ್ದ ಮೂವರು ದಂಪತಿಗಳು ಹೂಡಿದ್ದ ಮೊಕದ್ದಮೆಗೆ ಸಂಬಂಧಿಸಿದಂತೆ ತೀರ್ಪು ನೀಡಲಾಗಿದೆ.
Supreme Court, pregnant woman
Supreme Court, pregnant woman
Published on

ಬಾಡಿಗೆ ತಾಯ್ತನ (ನಿಯಂತ್ರಣ) ಕಾಯಿದೆ ಜಾರಿಗೆ ಬಂದ 2022ರ ಜನವರಿಗೂ ಮುನ್ನ ಆ ವಿಧಾನದ ಮೂಲಕ ಪೋಷಕರಾಗಲು ಬಯಸಿದ್ದ ದಂಪತಿಗಳಿಗೆ ಕಾಯಿದೆಯಲ್ಲಿ ಉಲ್ಲೇಖಿಸಲಾದ ವಯೋಮಿತಿ ಅನ್ವಯವಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ನೀಡಿದೆ.

ಬಾಡಿಗೆ ತಾಯ್ತನ ಕಾಯ್ದೆಯಲ್ಲಿ ನಿರ್ದಿಷ್ಟಪಡಿಸಿದ ಗರಿಷ್ಠ ವಯಸ್ಸಿನ ಮಿತಿಯನ್ನು (ಮಹಿಳೆಯರಿಗೆ 50 ಮತ್ತು ಪುರುಷರಿಗೆ 55) ದಾಟಿದ್ದರೂ ಕಾಯಿದೆ ಜಾರಿಗೆ ಬರುವ ಮುನ್ನ ಬಾಡಿಗೆ ತಾಯ್ತನ ಪ್ರಕ್ರಿಯೆ (ಭ್ರೂಣಗಳ ಫ್ರೀಜಿಂಗ್‌, ಗರ್ಭಾಶಯಕ್ಕೆ ವರ್ಗಾವಣೆ) ಆರಂಭಿಸಿದ್ದ ಮೂವರು ದಂಪತಿಗಳ ಮನವಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಪೀಠ ತೀರ್ಪು ನೀಡಿದೆ.

Also Read
ಬಾಡಿಗೆ ತಾಯ್ತನ: ಕಾಯಿದೆಗಳ ನಿಬಂಧನೆಗಳನ್ನು ಪ್ರಶ್ನಿಸಿ ಅರ್ಜಿ; ಕೇಂದ್ರದ ಪ್ರತಿಕ್ರಿಯೆ ಕೇಳಿದ ದೆಹಲಿ ಹೈಕೋರ್ಟ್‌

"ಕಾಯಿದೆಗೆ ಮೊದಲೇ ಬಾಡಿಗೆ ತಾಯ್ತನದ ಪ್ರಕ್ರಿಯೆ ಪ್ರಾರಂಭವಾಗಿದ್ದರೆ ಮತ್ತು ಅವರು ಭ್ರೂಣಗಳ ಫ್ರೀಜಿಂಗ್‌ ಅಥವಾ ಭ್ರೂಣಗಳನ್ನು ಬಾಡಿಗೆ ತಾಯಿಗೆ ವರ್ಗಾಯಿಸುವ ಪ್ರಕ್ರಿಯೆ ನಡೆಸಿದ್ದರೆ - ಆ ಸಂದರ್ಭದಲ್ಲಿ, ವಯೋಮಿತಿ ಅನ್ವಯಿಸುವುದಿಲ್ಲ... ರಿಟ್ ಅರ್ಜಿಗಳನ್ನು ಪುರಸ್ಕರಿಸಲಾಗಿದೆ. ಯಾವುದೇ ಉಳಿದ ದಂಪತಿಗಳು ಇದೇ ರೀತಿಯ ಸಮಸ್ಯೆ  ಹೊಂದಿದ್ದು ಪರಿಹಾರ ಪಡೆಯಲು ಬಯಸಿದರೆ, ಅವರು ಹೈಕೋರ್ಟ್ ಸಂಪರ್ಕಿಸಿ ತೀರ್ಪನ್ನು ಅನ್ವಯಿಸಬಹುದು" ಎಂದು ನ್ಯಾಯಾಲಯ ಇಂದು ಹೇಳಿದೆ.

ಇಲ್ಲಿ ಉಲ್ಲೇಖಿಸಲಾದ 'ಬಾಡಿಗೆ ತಾಯ್ತನ ಪ್ರಕ್ರಿಯೆ' ಎಂಬ ಪದಗುಚ್ಛ ಭ್ರೂಣಗಳನ್ನು ಫ್ರೀಜ್‌ ಮಾಡುವಂತಹ ಪ್ರಕ್ರಿಯೆಯನ್ನು ಅರ್ಥೈಸುತ್ತದೆಯೇ ಹೊರತು ವೈದ್ಯಕೀಯ ಚಿಕಿತ್ಸಾಲಯಕ್ಕೆ ಭೇಟಿ ನೀಡುವುದನ್ನಲ್ಲ ಎಂದು ಅದು ಹೇಳಿದೆ. ಉದ್ದೇಶಿತ ದಂಪತಿಗಳು ವೀರ್ಯಾಣು ಇಲ್ಲವೇ ಅಂಡಾಣುವನ್ನು ಹೊರತೆಗೆಯುವುದು, ಭ್ರೂಣಗಳನ್ನು ಫ್ರೀಜ್‌ ಮಾಡುವುದು ಮತ್ತು ಗರ್ಭಾಶಯಕ್ಕೆ ವರ್ಗಾಯಿಸುವಂತಹ ಕ್ರಮಗಳನ್ನು ತೆಗೆದುಕೊಂಡಿದ್ದರೆ ಮಾತ್ರ ಕಾಯಿದೆಯ ನಿರ್ಬಂಧಗಳು ಅನ್ವಯಿಸುವುದಿಲ್ಲ, ಬಾಡಿಗೆ ತಾಯ್ತನ ಪ್ರಕ್ರಿಯೆ ಮುಂದುವರೆಸಲು ಅವರಿಗೆ ಸ್ಪಷ್ಟವಾದ ಇಚ್ಛೆ ಇತ್ತೆಂದು ಪರಿಗಣಿಸಲಾಗುತ್ತದೆ ಎಂದು ನ್ಯಾಯಾಲಯ ನುಡಿದಿದೆ.

Also Read
ಕರಾರು ಪತ್ರ ನೋಂದಣಿಯಾಗದಿದ್ದರೆ ಬಾಡಿಗೆ ಹೆಚ್ಚಿಸಲಾಗದು: ಕರ್ನಾಟಕ ಹೈಕೋರ್ಟ್‌

ಕಾಯಿದೆ ಜಾರಿಯಾದ 10 ತಿಂಗಳೊಳಗೆ ಬಾಡಿಗೆ ತಾಯ್ತನದ ಕಾರಣಕ್ಕೆ ಮಗು ಜನಿಸಿದ್ದರೆ ದಂಪತಿಗೆ ವಯೋಮಿತಿ ಅನ್ವಯವಾಗುವುದಿಲ್ಲ  ಎಂದು ನ್ಯಾ. ಬಿ ವಿ ನಾಗರತ್ನ ಅವರು ತಿಳಿಸಿದ್ದಾರೆ.

ಸಹಮತದ ತೀರ್ಪು ನೀಡಿದ ನ್ಯಾ. ಕೆ ವಿ ವಿಶ್ವನಾಥನ್‌ ಅವರು ಅರ್ಜಿ ಸಲ್ಲಿಸಿದ ದಂಪತಿಗಳು ವಯೋಮಿತಿ ನಿಯಮಗಳು ಜಾರಿಯಲ್ಲಿ ಇಲ್ಲದ ಸಮಯದಲ್ಲಿ ತಮ್ಮ ಹಕ್ಕನ್ನು ಬಳಸಿಕೊಂಡಿದ್ದಾರೆ ಎಂದರು.

ಕೇಂದ್ರ ಸರ್ಕಾರದ ವಯೋಮಿತಿ ನಿಯಮಗಳನ್ನು ಪೂರ್ವಾನ್ವಯ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ.

Kannada Bar & Bench
kannada.barandbench.com