Justice Devan Ramachandran, Kerala high court 
ಸುದ್ದಿಗಳು

ಎನ್‌ಸಿಸಿಯಲ್ಲಿ ತೃತೀಯಲಿಂಗಿಗಳಿಗೆ ಇಲ್ಲ ಅವಕಾಶ: ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿದ ಕೇರಳ ಹೈಕೋರ್ಟ್‌

ಒಂದು ಹಂತದಲ್ಲಿ ಸಿಡಿಮಿಡಿಗೊಂಡ ನ್ಯಾಯಮೂರ್ತಿಗಳು “ತೃತೀಯ ಲಿಂಗಿಗಳಿಗೆ ಅವಕಾಶ ಕಲ್ಪಿಸಲು ಕೇಂದ್ರ ಸರ್ಕಾರ ಎನ್‌ಸಿಸಿ ಕಾಯಿದೆಗೆ ತಿದ್ದುಪಡಿ ಮಾಡಬೇಕಿತ್ತು” ಎಂದರು.

Bar & Bench

"ಜಗತ್ತು ಮುಂದುವರೆದಿದೆ, ನೀವಿನ್ನೂ ಹತ್ತೊಂಬತ್ತನೇ ಶತಮಾನದಲ್ಲೇ ಉಳಿದಿರಲು ಆಗದು," ಎಂದು ಕೇರಳ ಹೈಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಸೋಮವಾರ ತಪರಾಕಿ ನೀಡಿದೆ. 1948ರ ರಾಷ್ಟ್ರೀಯ ಕೆಡೆಟ್ ಕೋರ್ (ಎನ್‌ಸಿಸಿ) ಕಾಯಿದೆಯ ಸೆಕ್ಷನ್ 6ನ್ನು ಪ್ರಶ್ನಿಸಿ ಹೀನಾ ಹನೀಫಾ ಎಂಬ ತೃತೀಯಲಿಂಗಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಕೇಂದ್ರದ ಧೋರಣೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನ್ಯಾಷನಲ್‌ ಕೆಡೆಟ್‌ ಕೋರ್‌ಗೆ ಸೇರಲು ʼಪುರುಷʼ ಅಥವಾ ʼಹೆಣ್ಣುಮಕ್ಕಳಿಗೆʼ ಮಾತ್ರ ಅವಕಾಶ ಕಲ್ಪಿಸಿರುವುದನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಕೇಂದ್ರ ಸರ್ಕಾರದ ಸ್ಥಾಯಿ ನ್ಯಾಯವಾದಿಯಾಗಿರುವ ದಯಾಸಿಂಧು ಶ್ರೀಹರಿ ಅವರು “ಎನ್‌ಸಿಸಿ ಕಾಯಿದೆಯಡಿ ಅರ್ಜಿದಾರರಿಗೆ ದಾಖಲಾತಿ ನಿರಾಕರಿಸುವುದು ತಾರತಮ್ಯವಲ್ಲ” ಎಂದರು. ಜೊತೆಗೆ ಕೇಂದ್ರ ಸರ್ಕಾರದ ಪರವಾಗಿ ದಾಖಲೆಯಲ್ಲಿ ಪ್ರತಿ- ಅಫಿಡವಿಟ್‌ ಸಲ್ಲಿಸಲು ಅವಕಾಶ ನೀಡಬೇಕು ಎಂದು ಕೋರಿದರು.

ಆಗ “ಕೇಂದ್ರ ಸರ್ಕಾರ ತಳೆದಿರುವ ದುರದೃಷ್ಟಕರ ನಿಲುವು ಇದು," ಎಂದ ನ್ಯಾ. ದೇವನ್‌ ರಾಮಚಂದ್ರನ್‌ ಅವರು ಪುರುಷ, ಸ್ತ್ರೀ ಹಾಗೂ ತೃತೀಯಲಿಂಗಿ ಎಂಬ ಮೂರು ಲಿಂಗಗಳಿವೆ ಎಂಬುದಾಗಿ ತಿಳಿಸಿದರು. “ಪ್ರಸ್ತುತ ಪ್ರಕರಣದಲ್ಲಿ ಅರ್ಜಿದಾರರಾದ ಮಹಿಳೆ ಒಬ್ಬ ಸ್ತ್ರೀಯಾಗಿ ತನ್ನ ಲಿಂಗತ್ವವನ್ನು ತಾನೇ ನಿಯೋಜಿಸಿಕೊಳ್ಳಲು ನಿರ್ಧರಿಸಿದ್ದಾರೆ. ಆಕೆ ಶಸ್ತ್ರಚಿಕಿತ್ಸೆಗೂ ಒಳಪಟ್ಟಿದ್ದಾರೆ. ಎನ್‌ಸಿಸಿ ಕಾಯಿದೆಯಡಿ ಅವರನ್ನು ಮಹಿಳೆಯಾಗಿ ಒಪ್ಪಿಕೊಳ್ಳುವುದಕ್ಕೆ ಕೂಡ ಯಾವುದೇ ಅಡ್ಡಿ ಇಲ್ಲ” ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ದಯಾಸಿಂಧು ಅವರು “ಅರ್ಜಿದಾರರನ್ನು ವಿಶ್ವವಿದ್ಯಾಲಯದಲ್ಲಿ ತೃತೀಯಲಿಂಗಿ ಎಂದು ಪರಿಗಣಿಸಿ ದಾಖಲಾತಿ ಮಾಡಿಕೊಳ್ಳಲಾಗಿದೆ. ಅವರು ಅರ್ಜಿಯುದ್ದಕ್ಕೂ ತಮ್ಮನ್ನು ತಾವು ತೃತೀಯ ಲಿಂಗಿ ಎಂದು ಕರೆದುಕೊಂಡಿದ್ದಾರೆ” ಎಂದರು. ಈ ಹಂತದಲ್ಲಿ ಸಿಡಿಮಿಡಿಗೊಂಡ ನ್ಯಾಯಮೂರ್ತಿಗಳು “ತೃತೀಯ ಲಿಂಗಿಗಳಿಗೆ ಅವಕಾಶ ಕಲ್ಪಿಸಲು ಕೇಂದ್ರ ಸರ್ಕಾರ ಎನ್‌ಸಿಸಿ ಕಾಯಿದೆಗೆ ತಿದ್ದುಪಡಿ ಮಾಡಬೇಕಿತ್ತು” ಎಂದು ಹೇಳಿದರು.

ನ್ಯಾಯಾಲಯದ ಹಿಂದಿನ ಆದೇಶಕ್ಕೆ ತಕ್ಕಂತೆ ಎನ್‌ಸಿಸಿ ಅಭ್ಯರ್ಥಿಗಳ ದಾಖಲಾತಿ ದಿನಾಂಕವನ್ನು ಮುಂದೂಡಲಾಗಿದ್ದು ಅರ್ಜಿದಾರರ ಕುರಿತು ಎನ್‌ಸಿಸಿ ಯಾವುದೇ ಪೂರ್ವಗ್ರಹ ವ್ಯಕ್ತಪಡಿಸಿಲ್ಲ ಎಂದು ದಯಾಸಿಂಧು ಸಮರ್ಥಿಸಿಕೊಂಡರು.

ಆಗ ಕಿಡಿಕಿಡಿಯಾದ ನ್ಯಾಯಮೂರ್ತಿಗಳು “ಇದು ಪೂರ್ವಗ್ರಹದ ಪ್ರಶ್ನೆಯಲ್ಲ, ನನ್ನನ್ನು ಕಳವಳಕ್ಕೀಡು ಮಾಡುತ್ತಿರುವುದು ಅಧಿಕಾರಿಗಳ ವರ್ತನೆ... ಜಗತ್ತು ಮುಂದುವರೆದಿದೆ. ನೀವು (ಕೇಂದ್ರ ಸರ್ಕಾರ) 19 ನೇ ಶತಮಾನದಲ್ಲಿ ಉಳಿಯಲು ಸಾಧ್ಯವಿಲ್ಲ. ಕಾನೂನು ಏನೇ ಹೇಳಿದರೂ ದಾಖಲಾತಿಗೆ ಅವಕಾಶ ಮಾಡಿಕೊಡುವುದಾಗಿ ಸರ್ಕಾರ ಹೇಳಬೇಕಿತ್ತು ” ಎಂದರು.

ಹತ್ತು ದಿನಗಳ ಬಳಿಕ ವಿಚಾರಣೆ ಕೈಗೆತ್ತಿಕೊಳ್ಳಲು ನ್ಯಾಯಾಲಯ ನಿರ್ಧರಿಸಿದೆ. ವಕೀಲರಾದ ರಘುಲ್ ಸುಧೀಶ್, ಜೆ ಲಕ್ಷ್ಮೀ, ಕೆ ಜೆ ಗ್ಲಾಕ್ಸನ್ ಮತ್ತು ಸನೀಶ್ ಸಾಸಿ ರಾಜ್ ಅವರ ಮೂಲಕ ಅರ್ಜಿ ಸಲ್ಲಿಸಲಾಗಿದೆ. ತೃತೀಯ ಲಿಂಗಿಗಳಂತಹ ಲಿಂಗತ್ವ ಅಲ್ಪಸಂಖ್ಯಾತರು ಎದುರಿಸುತ್ತಿರುವ ಅತಿರೇಕದ ಶೋಷಣೆ ಮತ್ತು ತಾರತಮ್ಯಕ್ಕೆ ಪರಿಹಾರ ಕಂಡುಕೊಳ್ಳಲು ಇಂತಹ ಸೇರ್ಪಡೆ ಅಗತ್ಯ” ಎಂದು ಅರ್ಜಿದಾರರು ಹೇಳಿದ್ದಾರೆ.

ಅರ್ಜಿದಾರರು, ಪ್ರಸ್ತುತ ತಿರುವನಂತಪುರಂ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದು, ಎರಡು ಬಾರಿ ಲಿಂಗತ್ವ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ತೃತೀಯ ಲಿಂಗಿಗಳಿಗಾಗಿ ಕೇರಳ ಸರ್ಕಾರ ರೂಪಿಸಿದ ನೀತಿಯಡಿ ಅವರು ತೃತೀಯಲಿಂಗಿ ಗುರುತಿನ ಚೀಟಿಯನ್ನೂ ಪಡೆದಿದ್ದಾರೆ.

"ಎನ್‌ಸಿಸಿ ಕಾಯಿದೆಯ ಆರನೇ ಸೆಕ್ಷನ್ ಅಸಂವಿಧಾನಿಕ ಎಂದು ಘೋಷಿಸುವುದು ಮಾತ್ರವಲ್ಲದೆ ನ್ಯಾಯಾಲಯ ಮಧ್ಯಂತರ ಪರಿಹಾರವಾಗಿ ಈ ಸಾಲಿನ ದಾಖಲಾತಿ ಪ್ರಕ್ರಿಯೆಯ ಭಾಗವಾಗಲು ಅವಕಾಶ ನೀಡಬೇಕು. ತೃತೀಯ ಲಿಂಗಿಗಳ ಸೇರ್ಪಡೆಗೆ ಅನುಕೂಲವಾಗುವಂತೆ ದಾಖಲಾತಿ ಮಾನದಂಡಗಳಿಗೆ ಸೂಕ್ತ ತಿದ್ದುಪಡಿ ಮಾಡುವಂತೆ ಎನ್‌ಸಿಸಿಗೆ ನಿರ್ದೇಶನ ನೀಡಬೇಕು" ಎಂದು ಕೂಡ ಅರ್ಜಿದಾರರು ಕೋರಿದ್ದಾರೆ.