ವಿದೇಶ ಪ್ರಯಾಣಕ್ಕೆ ಅನುಮತಿ ಕೋರಿದ್ದ ಎನ್‌ಡಿಪಿಎಸ್ ಕಾಯಿದೆಯಡಿ ಆರೋಪಿಯಾಗಿರುವ ವ್ಯಕ್ತಿಯನ್ನು ದೇಶದಿಂದ ಪಲಾಯನಗೈದ ಉದ್ಯಮಿಗಳಾದ ವಿಜಯ್ ಮಲ್ಯ, ನೀರವ್ ಮೋದಿಗೆ ಹೋಲಿಸಿದ ಸೆಷನ್ಸ್ ನ್ಯಾಯಾಲಯವನ್ನು ಈಚೆಗೆ ತರಾಟೆಗೆ ತೆಗೆದುಕೊಂಡಿರುವ ಕೇರಳ ಹೈಕೋರ್ಟ್ ವಿದೇಶ ಪ್ರಯಾಣಕ್ಕೆ ಅನುಮತಿ ನಿರಾಕರಿಸಿದ್ದ ಆದೇಶ ರದ್ದುಗೊಳಿಸಿದೆ [ಸೂರ್ಯನಾರಾಯಣನ್ ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ದೇಶದಿಂದ ಪರಾರಿಯಾಗಿ ತಲೆಮರೆಸಿಕೊಂಡಿರುವ ವಿಜಯ್ ಮಲ್ಯ ಮತ್ತು ನೀರವ್ ಮೋದಿಯಂತಹ ಪರಾರಿಯಾಗಿರುವ ಹೈ ಪ್ರೊಫೈಲ್ ಆರೋಪಿಗಳೊಂದಿಗೆ ಅರ್ಜಿದಾರರನ್ನು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ಅಸಮಂಜಸ ರೀತಿಯಲ್ಲಿ ಹೋಲಿಕೆ ಮಾಡಿದ್ದಾರೆ ಎಂದು ನ್ಯಾಯಮೂರ್ತಿ ವಿ ಜಿ ಅರುಣ್ ಅಭಿಪ್ರಾಯಪಟ್ಟರು.
"ವಿಜಯ್ ಮಲ್ಯ ಮತ್ತು ನೀರವ್ ಮೋದಿಯಂತಹ ವ್ಯಕ್ತಿಗಳ ಉದಾಹರಣೆ ಉಲ್ಲೇಖಿಸಿ, ಅರ್ಜಿದಾರರು ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳಲು ಅವಕಾಶ ನಿರಾಕರಿಸುವುದು ಅನಗತ್ಯ " ಎಂದು ಹೈಕೋರ್ಟ್ ಹೇಳಿದೆ.
ಪ್ರಸ್ತುತ ಪ್ರಕರಣದ ವಾಸ್ತವಾಂಶಗಳ ನೆಲೆಯಲ್ಲಿ ಅಂತಹ ತಾರ್ಕಿಕತೆ ಅಸಮರ್ಥನೀಯವಾಗುತ್ತದೆ ಎಂದು ಅದು ಹೇಳಿದೆ. ಅಲ್ಲದೆ ಅರ್ಜಿ ಪ್ರಕರಣ ವಿಲೇವಾರಿಗೆ ಎರಡು ವರ್ಷ ಹಿಡಿಯುತ್ತದೆ ಎಂಬುದನ್ನು ಗಮನಿಸಿದ ಪೀಠ ಪರಾರಿಯಾಗುವ ಆತಂಕವಿದ್ದ ಮಾತ್ರಕ್ಕೆ ಅರ್ಜಿದಾರರು ವಿದೇಶದಲ್ಲಿ ಉದ್ಯೋಗ ಪಡೆಯುವುದನ್ನು ತಡೆಯುವುದು ಅನ್ಯಾಯವಾಗುತ್ತದೆ ಎಂದಿದೆ.
ಮಾದಕ ವಸ್ತು ಮತ್ತು ಅಮಲು ಪದಾರ್ಥಗಳ ಕಾಯಿದೆ- 1985 (ಎನ್‌ಡಿಪಿಎಸ್ ಕಾಯಿದೆ) ಅಡಿಯಲ್ಲಿ ದಾಖಲಾಗಿದ್ದ ಮೊಕದ್ದಮೆಯಲ್ಲಿ ಅರ್ಜಿದಾರ ಸೂರ್ಯನಾರಾಯಣನ್ ನಾಲ್ಕನೇ ಆರೋಪಿಯಾಗಿದ್ದ. ತ್ರಿಶೂರ್‌ನ ಸೆಷನ್ಸ್ ನ್ಯಾಯಾಲಯದಲ್ಲಿ ಮಾರ್ಚ್ 6, 2019 ರಂದು ಆತನಿಗೆ ಜಾಮೀನು ನೀಡಿತ್ತು. ನಂತರ ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳಲು ಆತ ಅನುಮತಿ ಕೋರಿದ್ದರು.
"ಸಾವಿರಾರು ಕೋಟಿ ರೂಪಾಯಿಗಳ ವಂಚನೆಗೈದು ವಿದೇಶಗಳಲ್ಲಿ ಆರಾಮವಾಗಿ ಜೀವನ ಸಾಗಿಸುತ್ತಿರುವ ವಿಜಯ್ ಮಲ್ಯ, ನೀರವ್ ಮೋದಿಯಂತಹ ಅಂತಾರಾಷ್ಟ್ರೀಯ ಘೋಷಿತ ಅಪರಾಧಿಗಳನ್ನೇ ನಾವು ಮರಳಿ ದೇಶಕ್ಕೆ ಕರೆತರಲು ಸಾಧ್ಯವಾಗಿಲ್ಲ. ಹೀಗಿರುವಾಗ, ಅರ್ಜಿದಾರರು ದೇಶಕ್ಕೆ ಮರಳದೆ ಹೋದರೆ ಅವರನ್ನು ಕರೆತರಲು ಯಾರು ತಲೆ ಕೆಡಿಸಿಕೊಳ್ಳುತ್ತಾರೆ?" ಎಂದು ಉಲ್ಲೇಖಿಸಿದ್ದ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ಅರ್ಜಿದಾರರು ವಿದೇಶಕ್ಕೆ ತೆರಳುವುದಕ್ಕೆ ಅನುಮತಿ ನಿರಾಕರಿಸಿತ್ತು.
ಪ್ರಕರಣ ಆಲಿಸಿದ ಹೈಕೋರ್ಟ್, ಅರ್ಜಿದಾರರು ದೇಶದಲ್ಲಿ ಇಲ್ಲದೇ ಹೋದರೂ ಅವರ ಪ್ರಕರಣವನ್ನು ಅವರ ಪರ ವಕೀಲರು ನಡೆಸುವುದಾದರೆ ಮತ್ತು ಸೆಷನ್ಸ್ ನ್ಯಾಯಾಲಯ ವಿಧಿಸಿರುವ ಉಳಿದ ಷರತ್ತುಗಳನ್ನು ಈಡೇರಿಸಿದ್ದರೆ ವಿದೇಶ ಪಯಣಕ್ಕೆ ಅರ್ಜಿದಾರರಿಗೆ ಅನುಮತಿ ನೀಡಬಹುದು ಎಂದು ಸೆಷನ್ಸ್ ನ್ಯಾಯಾಧೀಶರಿಗೆ ಪೀಠ ನಿರ್ದೇಶಿಸಿತು.
[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]