Muslim Woman (representative image) 
ಸುದ್ದಿಗಳು

ರಾಜಕಾರಣಿ ಕೈ ಕುಲುಕಿದ ವಿದ್ಯಾರ್ಥಿನಿ ವಿರುದ್ಧ ವ್ಯಭಿಚಾರದ ಆರೋಪ: ವ್ಯಕ್ತಿ ವಿರುದ್ಧದ ಪ್ರಕರಣ ರದ್ದುಪಡಿಸದ ಹೈಕೋರ್ಟ್

ಮತ್ತೊಬ್ಬರ ಸ್ವಯಂ ಪ್ರೇರಿತ ವೈಯಕ್ತಿಕ ಆಯ್ಕೆಯಲ್ಲಿ ಹಸ್ತಕ್ಷೇಪ ಮಾಡುವುದನ್ನು ಪ್ರಶ್ನಿಸಿದ ನ್ಯಾ. ಪಿ ವಿ ಕುಂಞಿಕೃಷ್ಣನ್ ಧಾರ್ಮಿಕ ಆಚರಣೆ ಬಲವಂತವಾಗಿ ಹೇರುವುದನ್ನು ಇಸ್ಲಾಂ ಕಡ್ಡಾಯಗೊಳಿಸುವುದಿಲ್ಲ ಎಂದಿದ್ದಾರೆ.

Bar & Bench

ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ  ರಾಜ್ಯದ ಮಾಜಿ ಹಣಕಾಸು ಸಚಿವ ಟಿಎಂ ಥಾಮಸ್ ಇಸಾಕ್ ಅವರೊಂದಿಗೆ ಹಸ್ತಲಾಘವ ಮಾಡಿದ ಮುಸ್ಲಿಂ ಸಮುದಾಯಕ್ಕೆ ಸೇರಿದ ಕಾನೂನು ವಿದ್ಯಾರ್ಥಿನಿಯನ್ನು ಟೀಕಿಸಿದ್ದ ವ್ಯಕ್ತಿಯೊಬ್ಬನ ವಿರುದ್ಧದ ಕ್ರಿಮಿನಲ್‌ ಮೊಕದ್ದಮೆ ರದ್ದತಿಗೆ ಕೇರಳ ಹೈಕೋರ್ಟ್‌ ಈಚೆಗೆ ನಿರಾಕರಿಸಿದೆ [ಅಬ್ದುಲ್ ನೌಶಾದ್ ಮತ್ತು ಕೇರಳ ಹೈಕೋರ್ಟ್‌ ಇನ್ನಿತರರ ನಡುವಣ ಪ್ರಕರಣ ].

ವಿದ್ಯಾರ್ಥಿನಿಯ ವರ್ತನೆ ವ್ಯಭಿಚಾರವಾಗಿದ್ದು ಶರಿಯತ್‌ ಕಾನೂನಿನ ಉಲ್ಲಂಘನೆ ಎಂದು ಆರೋಪಿ ದೂರಿದ್ದ.

ಸಚಿವರೊಂದಿಗೆ ಹಸ್ತಲಾಘವ ಮಾಡುವ ಆಯ್ಕೆ ವಿದ್ಯಾರ್ಥಿನಿಯ ವೈಯಕ್ತಿಕ ಆಯ್ಕೆಯಾಗಿದ್ದು ತನ್ನ ಇಚ್ಛೆಗೆ ವಿರುದ್ಧವಾಗಿ ಯಾವುದೇ ಧಾರ್ಮಿಕ ಆಚರಣೆ ಪಾಲಿಸುವಂತೆ ಆಕೆಯನ್ನು ಒತ್ತಾಯಿಸಲಾಗದು ಎಂದು ಅಕ್ಟೋಬರ್ 1 ರಂದು ನೀಡಿದ ಆದೇಶದಲ್ಲಿ, ನ್ಯಾಯಮೂರ್ತಿ ಪಿ ವಿ ಕುಂಞಿಕೃಷ್ಣನ್ ಅವರು ತಿಳಿಸಿದ್ದಾರೆ.

ಧರ್ಮಗಳಲ್ಲಿ,ಅದರಲ್ಲಿಯೂ ಇಸ್ಲಾಂನಲ್ಲಿ ಯಾವುದೇ ಬಲವಂತದ ಹೇರಿಕೆ ಇಲ್ಲ ಎಂದು ನ್ಯಾಯಾಲಯ ವಿವರಿಸಿದೆ.

" ಧಾರ್ಮಿಕ ನಂಬಿಕೆಗಳು ವೈಯಕ್ತಿಕವಾದವು. ಧರ್ಮದಲ್ಲಿ, ವಿಶೇಷವಾಗಿ ಇಸ್ಲಾಂನಲ್ಲಿ ಯಾವುದೇ ಬಲವಂತದ ಹೇರಿಕೆ ಇಲ್ಲ. ಒಬ್ಬರು ಧಾರ್ಮಿಕ ಆಚರಣೆ ಪಾಲಿಸುವಂತೆ ಇನ್ನೊಬ್ಬರನ್ನು ಒತ್ತಾಯಿಸುವಂತಿಲ್ಲ. ಧಾರ್ಮಿಕ ಆಚರಣೆ ಈ ದೇಶದ ಪ್ರತಿಯೊಬ್ಬ ನಾಗರಿಕನ ವೈಯಕ್ತಿಕ ಆಯ್ಕೆಯಾಗಿದೆ. ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ, ಆರೋಗ್ಯ ಮತ್ತು ಸಂವಿಧಾನದ ಸಂಬಂಧಿತ ನಿಯಮಾವಳಿಗಳಿಗೆ ಒಳಪಟ್ಟು ಎಲ್ಲಾ ವ್ಯಕ್ತಿಗಳು ಆತ್ಮಸಾಕ್ಷಿಯ ಸ್ವಾತಂತ್ರ್ಯಕ್ಕೆ ಸಮಾನವಾಗಿ ಅರ್ಹರಾಗಿದ್ದು ಮುಕ್ತವಾಗಿ ಧರ್ಮವನ್ನು ಪ್ರತಿಪಾದಿಸಲು, ಅಭ್ಯಾಸ ಮಾಡಲು ಮತ್ತು ಪ್ರಚಾರ ಮಾಡುವ ಹಕ್ಕನ್ನು ಹೊಂದಿದ್ದಾರೆ ಎಂದು ಭಾರತದ ಸಂವಿಧಾನದ 25 ನೇ ವಿಧಿ ಹೇಳುತ್ತದೆ” ಎಂಬುದಾಗಿ ನ್ಯಾಯಾಲಯ ತಿಳಿಸಿದೆ.

ಧರ್ಮವನ್ನು ಪ್ರಚಾರ ಮಾಡುವ ಹಕ್ಕು ಎಂದರೆ ಧಾರ್ಮಿಕ ಆಚರಣೆಗಳನ್ನು ಉಳಿದವರ ಮೇಲೆ ಹೇರಬಹುದು ಎಂದರ್ಥವಲ್ಲ ಎಂದು ನ್ಯಾಯಾಲಯ ವಿವರಿಸಿದೆ. ಸಂವಿಧಾನದ 25 ರಿಂದ 28 ನೇ ವಿಧಿಯು ಒಬ್ಬ ವ್ಯಕ್ತಿ ತನ್ನ ಧಾರ್ಮಿಕ ನಂಬಿಕೆಗಳನ್ನು ಇನ್ನೊಬ್ಬರ ಮೇಲೆ ಹೇರಲು ಅನುಮತಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಧರ್ಮ ಗ್ರಂಥಗಳು  ಕೂಡ ವೈಯಕ್ತಿಕ ಸ್ವಾತಂತ್ರ್ಯವನ್ನು ಉತ್ತೇಜಿಸುತ್ತವೆ ಮತ್ತು ಇನ್ನೊಬ್ಬ ವ್ಯಕ್ತಿಯ ಮೇಲೆ ಧಾರ್ಮಿಕ ನಂಬಿಕೆಗಳು ಅಥವಾ ಆಚರಣೆ ಹೇರಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಖುರಾನ್‌ ಸಾಲುಗಳನ್ನು ಉಲ್ಲೇಖಿಸಿತು. 

ಮರ್ಕಝ್ ಕಾನೂನು ಕಾಲೇಜು ಆಯೋಜಿಸಿದ್ದ ಡಾ. ಐಸಾಕ್ ಅವರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಬಹುಮಾನ ಸ್ವೀಕರಿಸುವಾಗ ಕಾನೂನು ವಿದ್ಯಾರ್ಥಿನಿ ಐಸಾಕ್‌ ಅವರ ಕೈ ಕುಲುಕಿದ್ದರು. ಆದರೆ ಇದಕ್ಕೆ ಅರ್ಜಿದಾರ ಅಬ್ದುಲ್‌ ನೌಷಾದ್‌ ಆಕ್ಷೇಪ ವ್ಯಕ್ತಪಡಿಸಿದ್ದ.  

ತನಗೆ ಹಾಗೂ ತನ್ನ ಕುಟುಂಬಕ್ಕೆ ಅವಮಾನ ಮಾಡುವ ಸಲುವಾಗಿ ನೌಷಾದ್ ಆರೋಪ ಮಾಡಿರುವುದಾಗಿ ಆತನ ವಿರುದ್ಧ ಕಾನೂನು ವಿದ್ಯಾರ್ಥಿನಿ ಐಪಿಸಿ ಸೆಕ್ಷನ್‌ 153 ಸಂಹಿತೆ (ಗಲಭೆ ಉಂಟುಮಾಡುವ ಉದ್ದೇಶದಿಂದ ಪ್ರಚೋದನೆ) ಹಾಗೂ ಕೇರಳ ಪೊಲೀಸ್‌ ಕಾಯಿದೆಯ ಸೆಕ್ಷನ್ 119 (ಎ) (ಮಹಿಳೆಯರ ಘನತೆಗೆ ಚ್ಯುತಿ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ಪ್ರಕರಣದ ಸತ್ಯಾಸತ್ಯತೆ ಪರಿಗಣಿಸಿ ತನ್ನ ವಿರುದ್ಧದ ಆರೋಪಗಳು ಈ ಸೆಕ್ಷನ್‌ಗಳಡಿ ಬರುವುದಿಲ್ಲ. ಹೀಗಾಗಿ ತನ್ನ ವಿರುದ್ಧದ ವಿಚಾರಣೆ ರದ್ದುಗೊಳಿಸಬೇಕು ಎನ್ನುವುದು ನೌಷಾದ್‌ ವಾದವಾಗಿತ್ತು.

ಆದರೆ ಕಾನೂನು ವಿದ್ಯಾರ್ಥಿನಿ ವಿರುದ್ಧ ನೀಡಿದ್ದ ಹೇಳಿಕೆಗಳನ್ನು ನೌಷಾದ್‌ ನಿರಾಕರಿಸಿಲ್ಲ ಎಂದ ನ್ಯಾಯಾಲಯ  ತನ್ನ ಅಪರಾಧಕ್ಕಾಗಿ ಆತ ವಿಚಾರಣೆಗೆ ಒಳಪಡುವುದು ಸೂಕ್ತ ಎಂದಿತು.