ಸುಪ್ರೀಂ ಕೋರ್ಟ್‌ನ ಹಿಂದಿನ ತೀರ್ಪುಗಳಿಗೆ ತಾನು ಬದ್ಧವಾಗಿರುವುದರಿಂದ ಮುಸ್ಲಿಂ ಮಹಿಳೆ ತನ್ನ ಅಪ್ರಾಪ್ತ ಮಗುವಿನ ಆಸ್ತಿಯ ರಕ್ಷಕಳಾಗಬಹುದು ಎಂದು ತೀರ್ಪು ನೀಡಲು ಸಾಧ್ಯವಿಲ್ಲ ಎಂಬುದಾಗಿ ಕೇರಳ ಹೈಕೋರ್ಟ್ ಮಂಗಳವಾರ ಹೇಳಿದೆ [ಸಿ ಅಬ್ದುಲ್ ಅಜೀನ್ ಮತ್ತಿತರರು ಹಾಗೂ ಚೆಂಬುಕಂಡಿ ಸಫಿಯಾ ಇನ್ನಿತರರ ನಡುವಣ ಪ್ರಕರಣ].
ಅಪ್ರಾಪ್ತ ಮಕ್ಕಳ ಆಸ್ತಿಗೆ ಮುಸ್ಲಿಂ ಮಹಿಳೆಯರನ್ನು ರಕ್ಷಕರಾಗದಂತೆ ತಡೆಯುವ ವೈಯಕ್ತಿಕ ಕಾನೂನು ಸಂವಿಧಾನದ 14 ಮತ್ತು 15ನೇ ವಿಧಿಗಳ ಉಲ್ಲಂಘನೆ ಎಂದು ವಾದಿಸಬಹುದಾದರೂ ಕೂಡ ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪುಗಳಿಗೆ ವ್ಯತಿರಿಕ್ತವಾಗಿ ಹೈಕೋರ್ಟ್ ನಡೆದುಕೊಳ್ಳಲಾಗದೇ ಇರುವುದರಿಂದ ಅರ್ಜಿ ಅನೂರ್ಜಿತವಾಗಿದೆ ಎಂದು ನ್ಯಾಯಮೂರ್ತಿಗಳಾದ ಪಿ ಬಿ ಸುರೇಶ್ ಕುಮಾರ್ ಮತ್ತು ಸಿ ಎಸ್ ಸುಧಾ ಅವರಿದ್ದ ವಿಭಾಗೀಯ ಪೀಠ ವಿವರಿಸಿತು.
ಶಾಯರಾ ಬಾನೋ ಪ್ರಕರಣವನ್ನು ತೀರ್ಪಿನಲ್ಲಿ ಹೆಚ್ಚು ಅವಲಂಬಿಸಿದ ನ್ಯಾಯಾಲಯವು, ಅದರಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನಾದ ಶರಿಯತ್‌ನ ಆಚರಣೆಗಳು ಸಂವಿಧಾನದ ಮೂರನೇ ಭಾಗವಾದ ಮೂಲಭೂತ ಹಕ್ಕುಗಳನ್ನು ಅನುಪಾಲಿಸುವ ಅಗತ್ಯವಿಲ್ಲ; ಸಂವಿಧಾನದ 13ನೇ ವಿಧಿಯನ್ವಯ ಇದು ಅನ್ವಯಿಸುವುದು ರಾಜ್ಯದ ಕ್ರಮಗಳಿಗೆ ಮಾತ್ರ ಎಂದು ಹೇಳಿರುವುದನ್ನು ಆಧರಿಸಿತು.
"ಶರಿಯತ್ ಕಾಯಿದೆ ಸರ್ಕಾರದ ಶಾಸನವಲ್ಲ ಎಂದು ಪರಿಗಣಿತವಾಗಿರುವುದರಿಂದ, ಮೇಲ್ಮನವಿದಾರರ ಪರವಾಗಿ ವಾದಿಸಲಾಗಿರುವಂತೆ ಸಂವಿಧಾನದ 14 ಅಥವಾ 15ನೇ ವಿಧಿಯ ಆಧಾರದಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನನ್ನು ಪರಾಮರ್ಶಿಸಲಾಗದು” ಎಂದು ತೀರ್ಪು ನುಡಿದಿದೆ.
ಮುಸ್ಲಿಂ ತಾಯಿ ತನ್ನ ಅಪ್ರಾಪ್ತ ಮಕ್ಕಳ ರಕ್ಷಕಳಾಗಬಾರದು ಎಂಬಂತಹ ಹಲವು ತೀರ್ಪುಗಳನ್ನು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ನೀಡಿರುವುದರಿಂದ ತಾನು ಅದನ್ನು ಪಾಲಿಸಲು ಬದ್ಧ ಎಂದು ನ್ಯಾಯಾಲಯ ತಿಳಿಸಿತು.