New Criminal Laws, Kerala HC 
ಸುದ್ದಿಗಳು

ನೂತನ ಅಪರಾಧಿಕ ಕಾನೂನುಗಳ ಹಿಂದಿ ಶೀರ್ಷಿಕೆ ಪ್ರಶ್ನಿಸಿದ್ದ ಪಿಐಎಲ್ ವಜಾಗೊಳಿಸಿದ ಕೇರಳ ಹೈಕೋರ್ಟ್

ಕಾನೂನುಗಳಿಗೆ ಹಿಂದಿ ಶೀರ್ಷಿಕೆ ನೀಡಿರುವುದು ಸಂವಿಧಾನದ 348ನೇ ವಿಧಿಯನ್ನು ಉಲ್ಲಂಘಿಸುತ್ತದೆ ಎಂದು ವಾದಿಸಿ ವಕೀಲ ಪಿ ವಿ ಜೀವೇಶ್ ಅವರು ಪಿಐಎಲ್ ಸಲ್ಲಿಸಿದ್ದರು.

Bar & Bench

ಹೊಸದಾಗಿ ಜಾರಿಗೊಳಿಸಲಾದ ಮೂರು ಅಪರಾಧಿಕ ಕಾನೂನುಗಳ ಹಿಂದಿ ಹೆಸರುಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ಕೇರಳ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.

ವಕೀಲರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎ ಮುಹಮ್ಮದ್ ಮುಸ್ತಾಕ್ ಮತ್ತು ನ್ಯಾಯಮೂರ್ತಿ ಎಸ್ ಮನು ಅವರಿದ್ದ ವಿಭಾಗೀಯ ಪೀಠ ತಿರಸ್ಕರಿಸಿತು.

ಭಾರತೀಯ ದಂಡ ಸಂಹಿತೆ, ಅಪರಾಧ ಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಕಾಯಿದೆಗಳ ಬದಲಿಗೆ ಕ್ರಮವಾಗಿ ಭಾರತೀಯ ನ್ಯಾಯ ಸಂಹಿತೆ (BNS), ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS), ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ (BSA) ಜುಲೈ 1ರಿಂದ ಜಾರಿಗೆ ಬಂದಿದ್ದವು.

ಕಾನೂನುಗಳಿಗೆ ಹಿಂದಿ ಶೀರ್ಷಿಕೆ ನೀಡಿರುವುದು ಸಂವಿಧಾನದ 348 ನೇ ವಿಧಿಯನ್ನು ಉಲ್ಲಂಘಿಸುತ್ತದೆ ಎಂದು ವಾದಿಸಿ ವಕೀಲ ಪಿ ವಿ ಜೀವೇಶ್ ಅವರು ಪಿಐಎಲ್‌ ಸಲ್ಲಿಸಿದ್ದರು. ಕಾನೂನುಗಳ ಎಲ್ಲಾ ಅಧಿಕೃತ ಪಠ್ಯ ಇಂಗ್ಲಿಷ್‌ನಲ್ಲಿರಬೇಕು ಎಂದು 348ನೇ ವಿಧಿ ಆದೇಶಿಸುತ್ತದೆ.

ಜೊತೆಗೆ ಸಂವಿಧಾನದ 19 (1) (ಜಿ) ಮೂಲಕ ಒದಗಿಸಲಾದ ವೃತ್ತಿ ಕೈಗೊಳ್ಳುವ ಮೂಲಭೂತ ಹಕ್ಕನ್ನು ಉಲ್ಲಂಘಿಸುವುದಲ್ಲದೆ ಹಿಂದಿ ಪ್ರಥಮ ಭಾಷೆಯಾಗಿರದ ದಕ್ಷಿಣ ಭಾರತ ಸೇರಿದಂತೆ ಉಳಿದ ಭಾಗಗಳ ವಕೀಲರಿಗೆ ಗೊಂದಲ ಹಾಗೂ ತೊಂದರೆ ಉಂಟು ಮಾಡುತ್ತದೆ ಎಂದು ಅವರು ದೂರಿದ್ದರು.

ಹಿಂದಿ ಭಾಷೆಯಲ್ಲಿ ಕಾನೂನುಗಳನ್ನು ಹೆಸರಿಸುವುದು ಭಾಷಾ ಸಾಮ್ರಾಜ್ಯಶಾಹಿಗೆ ಸಮ. ಅಂತಹ ಹೇರಿಕೆ ದೇಶದ ಭಾಷಾ ವೈವಿಧ್ಯತೆಗೆ ಧಕ್ಕೆ ತರುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು.

ಆದರೆ ಲಿಪಿ ಮತ್ತು ಕಾನೂನುಗಳ ವಸ್ತು ವಿಷಯ ಇಂಗ್ಲಿಷ್‌ನಲ್ಲಿಯೇ ಇದೆ. ಹಾಗಾಗಿ ನ್ಯಾಯಾಲಯದ ಮಧ್ಯಪ್ರವೇಶ ಅನಗತ್ಯ ಎಂದು ಕೇಂದ್ರ ಸರ್ಕಾರ ವಾದಿಸಿತ್ತು. ಜೊತೆಗೆ ಲೋಕಪಾಲ್ ಮಸೂದೆ, ಪ್ರಸಾರ ಭಾರತಿ ಕಾಯಿದೆ ಮುಂತಾದವುಗಳಿಗೆ ಹಿಂದಿ ಶೀರ್ಷಿಕೆಯೇ ಇದೆ ಎಂದು ತಿಳಿಸಲಾಗಿತ್ತು.

ಈ ಕಾನೂನುಗಳ ಶೀರ್ಷಿಕೆಗಳನ್ನು ಇಂಗ್ಲಿಷ್‌ನಲ್ಲಿ ಮರುನಾಮಕರಣ ಮಾಡುವಂತೆ ಸಂಸತ್ತಿಗೆ ನಿರ್ದೇಶನ ನೀಡುವ ಅಧಿಕಾರವನ್ನು ನ್ಯಾಯಾಲಯ ಹೊಂದಿದೆಯೇ ಎಂದು ಕಳೆದ ತಿಂಗಳು ನ್ಯಾಯಾಲಯ ಚರ್ಚಿಸಿತ್ತು. ಹೆಸರುಗಳಿಂದ ಉಂಟಾಗಿರುವ ಗೊಂದಲವನ್ನೂ ಅದು ವಿಚಾರಣೆಯೊಂದರ ವೇಳೆ ಒಪ್ಪಿಕೊಂಡಿತ್ತು. ಆದರೆ, ಅರ್ಜಿಯನ್ನು ವಜಾಗೊಳಿಸಲು ನ್ಯಾಯಾಲಯ ತೀರ್ಮಾನಿಸಿದೆ.