ಹೊಸದಾಗಿ ಜಾರಿಗೊಳಿಸಲಾದ ಮೂರು ಅಪರಾಧಿಕ ಕಾನೂನುಗಳ ಹಿಂದಿ ಹೆಸರುಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ದಾವೆ (ಪಿಐಎಲ್) ಅರ್ಜಿಯ ತೀರ್ಪನ್ನು ಕೇರಳ ಹೈಕೋರ್ಟ್ ಸೋಮವಾರ ಕಾಯ್ದಿರಿಸಿದೆ [ಪಿವಿ ಜೀವೇಶ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ಐಪಿಸಿ, ಸಿಆರ್‌ಪಿಸಿ ಹಾಗೂ ಭಾರತೀಯ ಸಾಕ್ಷ್ಯ ಕಾಯಿದೆ ಬದಲಿಗೆ ಕ್ರಮವಾಗಿ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಅಧಿನಿಯಮಗಳು ಜುಲೈ 1ರಿಂದ ಜಾರಿಗೆ ಬಂದಿದ್ದವು.
'ಈ ಕಾನೂನುಗಳಿಗೆ ಇಂಗ್ಲಿಷ್ ಶೀರ್ಷಿಕೆ ನೀಡುವಂತೆ ಸಂಸತ್ತಿಗೆ ಸೂಚಿಸುವ ಅಧಿಕಾರ ನ್ಯಾಯಾಲಯಕ್ಕೆ ಇದೆಯೇ? ತಾನು ಈ ಕುರಿತಂತೆ ಆದೇಶ ಹೊರಡಿಸಹುದೇ?' ಎಂಬ ವಿಚಾರವಾಗಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎ ಮುಹಮ್ಮದ್ ಮುಸ್ತಾಕ್ ಮತ್ತು ನ್ಯಾಯಮೂರ್ತಿ ಎಸ್ ಮನು ಅವರರಿದ್ದ ವಿಭಾಗೀಯ ಪೀಠ ಚರ್ಚಿಸಿತು.
ಹೆಸರುಗಳಿಂದ ಉಂಟಾದ ಗೊಂದಲವನ್ನು ಹಿಂದಿನ ವಿಚಾರಣೆ ವೇಳೆಯೂ ಎತ್ತಿ ತೋರಿಸಿದ್ದ ಪೀಠ ಶೀರ್ಷಿಕೆ ಮಾರ್ಪಡಿಸಲು ತಾನು ಮುಂದಾಗಬಹುದೇ ಎಂದು ಪ್ರಶ್ನಿಸಿತ್ತು.
ಹೊಸ ಕಾನೂನುಗಳಿಗೆ ಹಿಂದಿ ಶೀರ್ಷಿಕೆ ನೀಡುವುದು ʼಸಂಸತ್ತು ಅಂಗೀಕರಿಸಿದ ಎಲ್ಲಾ ಕಾಯಿದೆ ಮತ್ತು ಮಸೂದೆಗಳು ಇಂಗ್ಲಿಷ್‌ನಲ್ಲಿರಬೇಕುʼ ಎಂದು ಕಡ್ಡಾಯಗೊಳಿಸುವ ಸಂವಿಧಾನದ 348ನೇ ವಿಧಿಗೆ ವಿರುದ್ಧವಾಗಿದೆ ಎಂದು ಅರ್ಜಿದಾರರಾದ ವಕೀಲ ಪಿ.ವಿ. ಜೀವೇಶ್ ಆಕ್ಷೇಪಿಸಿದ್ದರು.
ಹೊಸ ಅಪರಾಧಿಕ ಕಾನೂನುಗಳ ನಾಮಕರಣ ಹಿಂದಿ ಪ್ರಥಮ ಭಾಷೆಯಾಗಿರದ ದಕ್ಷಿಣ ಭಾರತ ಸೇರಿದಂತೆ ಉಳಿದ ಭಾಗಗಳ ವಕೀಲರಿಗೆ ಗೊಂದಲ ಹಾಗೂ ತೊಂದರೆ ಉಂಟು ಮಾಡುತ್ತದೆ. ಜೊತೆಗೆ ಸಂವಿಧಾನದ 19 (1) (ಜಿ) ಮೂಲಕ ಒದಗಿಸಲಾದ ವೃತ್ತಿ ಪ್ರಾಕ್ಟೀಸ್ ಮಾಡುವ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.
ಇಂದಿನ ವಿಚಾರಣೆ ವೇಳೆ ಅರ್ಜಿದಾರರು ಸುಪ್ರೀಂ ಕೋರ್ಟ್ ಮತ್ತು ಉಚ್ಚ ನ್ಯಾಯಾಲಯಗಳಲ್ಲಿ ಕಾಯಿದೆ, ಮಸೂದೆಗಳು ಇತ್ಯಾದಿಗಳಲ್ಲಿ ಬಳಸಬೇಕಾದ ಭಾಷೆಗೆ ಸಂಬಂಧಿಸಿದ 348ನೇ ವಿಧಿಯನ್ನು ಇದು ಉಲ್ಲಂಘಿಸುತ್ತದೆ. ದೇಶದ ಭಾಷಾ ವೈವಿಧ್ಯತೆಯನ್ನು ಸೇತುವೆ ಮಾಡಲು ಸಂವಿಧಾನದಲ್ಲಿ ಇಂಗ್ಲಿಷ್ ಅನ್ನು ಆಯ್ಕೆ ಮಾಡಿರುವುದರಿಂದ ಸರ್ಕಾರ ಅಪರಾಧ ಕಾನೂನು ಶೀರ್ಷಿಕೆಗಳಿಗೆ ನಿರ್ದಿಷ್ಟ ಭಾಷೆಯನ್ನು ಹೇರಲು ಸಾಧ್ಯವಿಲ್ಲ ಎಂದು ವಾದಿಸಿದರು.
ಆದರೆ ಲಿಪಿ ಮತ್ತು ಕಾನೂನುಗಳ ವಸ್ತು ವಿಷಯ ಇಂಗ್ಲಿಷ್‌ನಲ್ಲಿಯೇ ಇದೆ ಹಾಗಾಗಿ ನ್ಯಾಯಾಲಯದ ಮಧ್ಯಪ್ರವೇಶ ಅನಗತ್ಯ ಎಂದು ಕೇಂದ್ರ ಸರ್ಕಾರದ ಪರ ವಕೀಲರು ತಿಳಿಸಿದರು. ವಾದ ಆಲಿಸಿದ ನ್ಯಾಯಾಲಯ ತೀರ್ಪು ಕಾಯ್ದಿರಿಸಿತು.