ಹಕ್ಕು ಸ್ವಾಮ್ಯ ಉಲ್ಲಂಘನೆಗೆ ಸಂಬಂಧಿಸಿದಂತೆ ʼಕಾಂತಾರʼ ಚಿತ್ರದ ವರಾಹ ರೂಪಂ ಹಾಡು ಬಳಕೆ ವಿರುದ್ಧ ಕೇರಳದ ಎರಡು ಜಿಲ್ಲಾ ನ್ಯಾಯಾಲಯಗಳು ನೀಡಿದ್ದ ಮಧ್ಯಂತರ ಪ್ರತಿಬಂಧಕಾಜ್ಞೆ ಪ್ರಶ್ನಿಸಿ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಮ್ಸ್ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ [ಹೊಂಬಾಳೆ ಫಿಲಂಸ್ ಮತ್ತು ಮಾತೃಭೂಮಿ ಪ್ರಿಂಟಿಂಗ್ ಅಂಡ್ ಪಬ್ಲಿಷಿಂಗ್ ಕಂಪೆನಿ ಲಿಮಿಟೆಡ್ ಇನ್ನಿತರರ ನಡುವಣ ಪ್ರಕರಣ].
ಕೆಳಹಂತದ ಎರಡು ನ್ಯಾಯಾಲಯಗಳು ನೀಡಿದ್ದ ಆದೇಶ ಪ್ರಶ್ನಿಸಿ ಹೊಂಬಾಳೆ ಸಲ್ಲಿಸಿದ್ದ ಮನವಿಯು ಕಾನೂನು ಮತ್ತು ವಾಸ್ತಾಂಶಗಳ ಮಿಳಿತ ಪ್ರಶ್ನೆಗಳನ್ನು ಒಳಗೊಂಡಿದೆ. ಹೀಗಾಗಿ ಹಾಡಿನ ಪ್ರದರ್ಶನವನ್ನು ನಿರ್ಬಂಧಿಸಿ ಮಧ್ಯಂತರ ಪ್ರತಿಬಂಧಕಾಜ್ಞೆ ನೀಡಿರುವ ಈ ಹಂತದಲ್ಲಿ ಇದನ್ನು ಪರಿಶೀಲಿಸಲಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
“ಮೂಲ ಅರ್ಜಿಯಲ್ಲಿ ಎತ್ತಲಾದ ಪ್ರತಿ ವಿವಾದವನ್ನೂ ಅದರಲ್ಲಿಯೂ (ಹಾಡಿನ ಪ್ರದರ್ಶನ ಕುರಿತಂತೆ) ಮಧ್ಯಂತರ ಪ್ರತಿಬಂಧಕಾಜ್ಞೆ ನೀಡಿರುವ ಈ ಹಂತದಲ್ಲಿ ಪರಿಶೀಲಿಸಿ ಅದರ ಅರ್ಹತೆ ಆಧರಿಸಿ ತೀರ್ಪು ನೀಡುವುದು ಈ ನ್ಯಾಯಾಲಯಕ್ಕೆ ತಕ್ಕುದಲ್ಲ. ನ್ಯಾಯಾಲಯ ಹಾಗೆ ಮಾಡಿದರೆ ಪಕ್ಷಕಾರರ ಶಾಸನಬದ್ಧ ಹಕ್ಕುಗಳನ್ನು ಮುಟ್ಟುಗೋಲು ಹಾಕಿಕೊಂಡಂತಾಗುತ್ತದೆ. ಮತ್ತು ನಿಸ್ಸಂದೇಹವಾಗಿ ಅವರ ಮೇಲೆ ಗಂಭೀರ ಪೂರ್ವಾಗ್ರಹ ಉಂಟುಮಾಡುತ್ತದೆ” ಎಂದು ನ್ಯಾ. ಸಿ ಎಸ್ ಡಯಾಸ್ ತಿಳಿಸಿದರು.
ಅಧೀನ ನ್ಯಾಯಾಲಯಗಳು ಹೊರಡಿಸಿದ ಎಲ್ಲಾ ಆದೇಶಗಳಲ್ಲಿ ಹೈಕೋರ್ಟ್ ಮಧ್ಯ ಪ್ರವೇಶಿಸಬಾರದು ಎಂದು ಹೇಳೀ ನ್ಯಾಯಾಲಯ ತನ್ನ ಅಧಿಕಾರವ್ಯಾಪ್ತಿಯನ್ನು ಸ್ಪಷ್ಟಪಡಿಸಿತು.
“ಅಧೀನ ನ್ಯಾಯಾಲಯಗಳು ನೀಡಿದ ಪ್ರತಿ ಮಧ್ಯಂತರ ಆದೇಶಗಳ ಬಗ್ಗೆ ಈ ನ್ಯಾಯಾಲಯದ ಮೇಲ್ವಿಚಾರಣಾ ಅಧಿಕಾರ ವ್ಯಾಪ್ತಿ ಮಧ್ಯ ಪ್ರವೇಶಿಸಬಾರದು. ಹಾಗೆ ಮಾಡಿದರೆ ಮೂಲ ನ್ಯಾಯವ್ಯಾಪ್ತಿಯ ನ್ಯಾಯಾಲಯಗಳು ಮತ್ತು ಮೇಲ್ಮನವಿ ನ್ಯಾಯಾಲಯಗಳು ನಿಷ್ಕ್ರಿಯವಾಗಿ ಸಂಹಿತೆಯಡಿ ರೂಪುಗೊಂಡ ಶಾಸಕಾಂಗ ಚೌಕಟ್ಟನ್ನು ಅಲುಗಾಡಿಸಿ ಪಲ್ಲಟಗೊಳಿಸಲಿದೆ. ಈ ನ್ಯಾಯಾಲಯ ಅಂತಹ ಮೊಕದ್ದಮೆಗಳಿಂದಲೇ ತುಂಬಿ ಹೋಗಲಿದೆ” ಎಂದು ಅದು ಹೇಳಿತು.
ಕನ್ನಡ ಚಲನಚಿತ್ರ “ಕಾಂತಾರ” ದ ನಿರ್ಮಾಪಕರು “ವರಾಹ ರೂಪಂ” ಹಾಡನ್ನು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬಳಸದಂತೆ ತಡೆಯುವ ಸಲುವಾಗಿ ತಾತ್ಕಾಲಿಕ ಪ್ರತಿಬಂಧಕಾಜ್ಞೆ ನೀಡಿದ್ದ ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯ ಮತ್ತು ಕೋರಿಕ್ಕೋಡ್ ಜಿಲ್ಲಾ ನ್ಯಾಯಾಲಯದ ಆದೇಶ ಪ್ರಶ್ನಿಸಿದ್ದ ಎರಡು ಅರ್ಜಿಗಳ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯಿತು.
ಆಲ್ಬಂ ಗೀತೆ ʼನವರಸಂʼ ಹಾಡಿನ ಕರ್ತೃವಾದ ಥೈಕ್ಕುಡಂ ಬ್ರಿಜ್ ಸಲ್ಲಿಸಿದ್ದ ಮೊಕದ್ದಮೆಗೆ ಸಂಬಂಧಿಸಿದಂತೆ ಕೋರಿಕ್ಕೋಡ್ ಜಿಲ್ಲಾ ನ್ಯಾಯಾಲಯ ಆದೇಶ ನೀಡಿತ್ತು. ಬಳಿಕ ʼನವರಸಂʼ ಗೀತೆಯ ಹಕ್ಕುಸ್ವಾಮ್ಯ ಪಡೆದಿರವು ಮಾತೃಭೂಮಿ ಪ್ರಿಂಟಿಂಗ್ ಮತ್ತು ಪಬ್ಲಿಷಿಂಗ್ ಕಂಪನಿ ಲಿಮಿಟೆಡ್ ಸಲ್ಲಿಸಿದ ಮೊಕದ್ದಮೆಯಲ್ಲಿ ಪಾಲಕ್ಕಾಡ್ ನ್ಯಾಯಾಲಯ ತೀರ್ಪು ನೀಡಿತ್ತು.
ನಿರ್ಮಾಪಕ, ನಿರ್ದೇಶಕ, ಸಂಗೀತ ಸಂಯೋಜಕರು ಮಾತ್ರವಲ್ಲದೆ ಆನ್‌ಲೈನ್ ಸಿನಿಮಾ ವೇದಿಕೆಗಳಾದ ಅಮೆಜಾನ್, ಸ್ಪಾಟಿಫೈ, ಯೂಟ್ಯೂಬ್, ವಿಂಕ್ ಮ್ಯೂಸಿಕ್, ಜಿಯೋಸಾವನ್ ಮತ್ತಿತರರು ತಂಡದ ಅನುಮತಿ ಇಲ್ಲದೆ ʼವರಾಹ ರೂಪಂʼ ಹಾಡನ್ನು ಪ್ರದರ್ಶಿಸದಂತೆ ತಡೆಯಾಜ್ಞೆ ತಿಳಿಸಿತ್ತು.
ನಂತರ ಕಾಂತಾರ ಚಿತ್ರದ ನಿರ್ಮಾಪಕರು ಪ್ರಸ್ತುತ ಸಲ್ಲಿಸಲಾಗಿರುವ ಅರ್ಜಿಯನ್ನು ವಜಾಗೊಳಿಸುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಸ್ತುತ ಹಾಡು ಇಲ್ಲದೇ ಸಿನಿಮಾ ಪ್ರದರ್ಶನಗೊಳ್ಳುತ್ತಿದೆ.
ಅರ್ಜಿದಾರರ ಪರವಾಗಿ ವಕೀಲರಾದ ಸಂತೋಷ್ ಮ್ಯಾಥ್ಯೂ, ಸಾಯಿಕೃಷ್ಣ ರಾಜಗೋಪಾಲ್, ಸಿದ್ಧಾರ್ಥ್ ಚೋಪ್ರಾ, ಅರುಣ್ ಥಾಮಸ್, ಅನಿಲ್ ಸೆಬಾಸ್ಟಿಯನ್ ಪುಲಿಕಲ್, ಅಬಿ ಬೆನ್ನಿ ಅರೆಕಲ್, ಮ್ಯಾಥ್ಯೂ ನೆವಿನ್ ಥಾಮಸ್, ಕಾರ್ತಿಕ್ ರಾಜಗೋಪಾಲ್ ಮತ್ತು ಕುರಿಯನ್ ಆಂಟೋನಿ ಮ್ಯಾಥ್ಯೂ ಅವರು ವಾದ ಮಂಡಿಸಿದ್ದರು.
[ಆದೇಶದ ಪ್ರತಿಯನ್ನು ಇಲ್ಲಿ ಓದಿ]