ಪಾತ್ರಕ್ಕಾಗಿ ಪಲ್ಲಂಗದಂತಹ ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಮಲಯಾಳಂ ಚಲನಚಿತ್ರರಂಗದ ಸಹಾಯಕ ನಿರ್ದೇಶಕ ಧಿನಿಲ್ ಬಾಬು ಅವರಿಗೆ ಕೇರಳ ಹೈಕೋರ್ಟ್ ಇತ್ತೀಚೆಗೆ ಜಾಮೀನು ನೀಡಿದೆ [ಧಿನಿಲ್ ಬಾಬು ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ದುಲ್ಕರ್ ಸಲ್ಮಾನ್ ನಟನೆಯ ಚಿತ್ರದಲ್ಲಿ ಪಾತ್ರ ನೀಡುವುದಾಗಿ ಹೇಳಿ, ಯುವ ನಟಿಯೊಬ್ಬರನ್ನು ಚಲನಚಿತ್ರ ನಿರ್ಮಾಣ ಸಂಸ್ಥೆಯಕಚೇರಿಗೆ ಕರೆಸಿ ನಂತರ ಲೈಂಗಿಕ ದೌರ್ಜನ್ಯ ಎಸಗಿದ ಆರೋಪವನ್ನು ಧಿನಿಲ್ ಬಾಬು ಎದುರಿಸುತ್ತಿದ್ದಾರೆ.
ಆರೋಪಿ ಡಿಸೆಂಬರ್ 3 ರಿಂದ ಜೈಲಿನಲ್ಲಿ ಇರುವುದರಿಂದ ಮತ್ತು ತನಿಖೆ ಗಣನೀಯವಾಗಿ ಪೂರ್ಣಗೊಂಡಿರುವುದರಿಂದ ಡಿಸೆಂಬರ್ 30ರಂದು ನ್ಯಾಯಮೂರ್ತಿ ಜಬಿನ್ ಸೆಬಾಸ್ಟಿಯನ್ ಅವರಿದ್ದ ರಜಾಕಾಲೀನ ಪೀಠ ಕಠಿಣ ಷರತ್ತುಗಳನ್ನು ವಿಧಿಸಿ ಜಾಮೀನು ನೀಡಲು ನಿರ್ಧರಿಸಿತು.
ಪ್ರಕರಣದಲ್ಲಿನ ಆರೋಪಗಳು ಮೇಲ್ನೋಟಕ್ಕೆ ಚಲನಚಿತ್ರಗಳಲ್ಲಿನ ಪಾತ್ರಕ್ಕಾಗಿ ನಟ, ನಟಿಯರನ್ನು ಲೈಂಗಿಕವಾಗಿ ಬಳಸಿಕೊಳ್ಳುವ ʼಪಾತ್ರಕ್ಕಾಗಿ ಪಲ್ಲಂಗʼದ ಕೃತ್ಯದ ಪುರಾವೆಯನ್ನು ಬಹಿರಂಗಪಡಿಸುತ್ತವೆ. ಇದು ವ್ಯಕ್ತಿಯ ಘನತೆಗೆ ಧಕ್ಕೆ ತರುವ ಗಂಭೀರ ಅಪರಾಧವಾಗಿದೆ. ಅಂತಹ ಚಾಳಿಯ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನ್ಯಾಯಮೂರ್ತಿಗಳು ತಿಳಿಸಿದರು.
“ಲಭ್ಯವಿರುವ ದಾಖಲೆಗಳನ್ನು ಪರಿಶೀಲಿಸಿದಾಗ, ಆರೋಪಿಯು ಲೈಂಗಿಕ ದೌರ್ಜನ್ಯವೆಸಗಿರುವ ಸಾಧ್ಯತೆಯು ಮೇಲುನೋಟಕ್ಕೆ ಕಂಡುಬರುತ್ತದೆ. ಚಿತ್ರಕಥೆ ಕುರಿತು ಚರ್ಚಿಸುವ ನೆಪದಲ್ಲಿ ದೂರುದಾರರನ್ನು ಕೊಠಡಿಗೆ ಕರೆಸಿಕೊಂಡಿದ್ದಾರೆ. ಈ ವೇಳೆ ತನ್ನ ಘನತೆಗೆ ಧಕ್ಕೆ ತರುವಂತೆ ದೈಹಿಕವಾಗಿ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ದೂರುದಾರೆಯು ಆರೋಪಿಸಿದ್ದಾರೆ. ಇಂತಹ ವರ್ತನೆಯಿಂದ ಮಹಿಳೆಯರ ಗೌರವಕ್ಕೆ ಗಂಭೀರ ಧಕ್ಕೆಯಾಗುತ್ತದೆ. ಆದ್ದರಿಂದ ವೃತ್ತಿಪರ ಆಶಯಗಳನ್ನು ಲೈಂಗಿಕ ಬಯಕೆಗಾಗಿ ದುರುಪಯೋಗಪಡಿಸಿಕೊಳ್ಳುವ ಈ ರೀತಿಯ ಅಪರಾಧಗಳ ಬಗ್ಗೆ ನ್ಯಾಯಾಲಯ ಕಠಿಣವಾಗಿ ನಡೆದುಕೊಳ್ಳಬೇಕು” ಎಂದು ನ್ಯಾಯಾಲಯ ತಿಳಿಸಿದೆ.
ಧಿನಿಲ್ ಬಾಬು ಅವರು ಮಲಯಾಳಂ ನಟ ದುಲ್ಕರ್ ಸಲ್ಮಾನ್ ಸ್ಥಾಪಿಸಿದ ವೇಫೇರರ್ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ನಿರ್ಮಾಣ ಸಂಸ್ಥೆಯಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ದುಲ್ಕರ್ ಸಲ್ಮಾನ್ ಅಭಿನಯದ ಚಿತ್ರದಲ್ಲಿ ಅವಕಾಶ ನೀಡುವ ನೆಪದಲ್ಲಿ ಅಕ್ಟೋಬರ್ 11ರಂದು ಕಚೇರಿಗೆ ಕರೆಸಿ ನಟಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪ ಅವರ ಮೇಲಿದೆ.
ಆಕೆಯ ದೂರಿನ ಆಧಾರದ ಮೇಲೆ, ಪೊಲೀಸರು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್‌ಗಳು 74 (ಮಹಿಳೆಯ ಗೌರವಕ್ಕೆ ಧಕ್ಕೆ), 75(1) (ದೈಹಿಕ ಸಂಪರ್ಕ ಮತ್ತು ಅನಗತ್ಯ ಮತ್ತು ಸ್ಪಷ್ಟ ಲೈಂಗಿಕ ಪ್ರಚೋದನೆ ಒಳಗೊಂಡ ದಾಳಿ) ಮತ್ತು 126(2) (ಅಸಂಯಮ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು.
[ಆದೇಶದ ಪ್ರತಿ]