ಖ್ಯಾತ ನಟಿ ಸಾಮೂಹಿಕ ಅತ್ಯಾಚಾರ ಪ್ರಕರಣ: ಮಲಯಾಳಂ ನಟ ದಿಲೀಪ್ ಖುಲಾಸೆಗೊಳಿಸಿದ ಕೇರಳ ನ್ಯಾಯಾಲಯ; ಉಳಿದವರು ದೋಷಿಗಳು

ಸುನಿಲ್ ಎನ್ಎಸ್ ಅಲಿಯಾಸ್ ಪಲ್ಸರ್ ಸುನಿ, ಮಾರ್ಟಿನ್ ಆಂಟೋನಿ, ಮಣಿಕಂಠನ್ ಬಿ, ವಿಜೀಶ್ ವಿಪಿ, ಸಲೀಂ ಎಚ್ ಅಕಾ ವಡಿವಲ್ ಸಲೀಂ ಹಾಗೂ ಪ್ರದೀಪ್ ದೋಷಿಗಳೆಂದು ನ್ಯಾಯಾಲಯ ತೀರ್ಪು ನೀಡಿದೆ.
Actor Dileep and text Actress Assault Case
Actor Dileep and text Actress Assault Case
Published on

2017ರಲ್ಲಿ ಮಲಯಾಳಂ ಮೂಲದ ಬಹುಭಾಷಾ ನಟಿ ಮೇಲೆ ಲೈಂಗಿಕ ದೌರ್ಜನ್ಯ, ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಖ್ಯಾತ ಮಲಯಾಳಂ ನಟ ದಿಲೀಪ್‌ ಅವರನ್ನು ಕೇರಳ ನ್ಯಾಯಾಲಯ ಸೋಮವಾರ ಖುಲಾಸೆಗೊಳಿಸಿದೆ [ಕೇರಳ ಸರ್ಕಾರ ಮತ್ತು ಸುನಿಲ್ ಎನ್ಎಸ್ ಅಲಿಯಾಸ್‌ ಪಲ್ಸರ್ ಸುನಿ ನಡುವಣ ಪ್ರಕರಣ].

ಆದರೆ ಪ್ರಕರಣದ ಉಳಿದ ಆರೋಪಿಗಳಾದ ಸುನಿಲ್ ಎನ್ಎಸ್ ಅಲಿಯಾಸ್‌ ಪಲ್ಸರ್ ಸುನಿ, ಮಾರ್ಟಿನ್ ಆಂಟೋನಿ, ಮಣಿಕಂಠನ್ ಬಿ, ವಿಜೀಶ್ ವಿಪಿ, ಸಲೀಂ ಎಚ್ ಅಕಾ ವಡಿವಲ್ ಸಲೀಂ ಹಾಗೂ ಪ್ರದೀಪ್ ಅವರನ್ನು ದೋಷಿಗಳೆಂದು ನ್ಯಾಯಾಲಯ ತೀರ್ಪು ನೀಡಿದೆ.

Also Read
ನಟ ದಿಲೀಪ್‌ ಪ್ರಕರಣ: ಮುಕ್ತ ನ್ಯಾಯಾಲಯದಲ್ಲಿ ವಿಚಾರಣೆ ಕೋರಿದ ಸಂತ್ರಸ್ತೆ ನಟಿ

ಐಪಿಸಿ ಸೆಕ್ಷನ್‌ಗಳಾದ 120ಬಿ, 340- 354, 366, 354ಬಿ, 376 ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ 66ಎ ಅಡಿ ಅವರು ದೋಷಿಗಳೆಂದುತೀರ್ಮಾನಿಸಲಾಗಿದೆ. ಎರ್ನಾಕುಲಂ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಹನಿ ಎಂ ವರ್ಗೀಸ್ ಅವರು ಬಹುನಿರೀಕ್ಷಿತ ತೀರ್ಪನ್ನು ಪ್ರಕಟಿಸಿದರು.

ಹಿನ್ನೆಲೆ

2017ರ ಫೆಬ್ರವರಿ 17ರಂದು ಮಲಯಾಳಂ ಮೂಲದ ಪ್ರಸಿದ್ಧ ಬಹುಭಾಷಾ ನಟಿಯೊಬ್ಬರನ್ನು ಅಪಹರಿಸಿ, ಕಾರಿನೊಳಗೆ ಲೈಂಗಿಕ ಕಿರುಕುಳ ನೀಡಿ, ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ದಾಳಿ ನಡೆಸಿದವರು ಘಟನೆಗೆ ಸಂಬಂಧಿಸಿದ ದೃಶ್ಯಗಳನ್ನು ರಹಸ್ಯವಾಗಿ ಚಿತ್ರೀಕರಿಸಿ ಮೆಮೊರಿ ಕಾರ್ಡ್‌ನಲ್ಲಿ ಇರಿಸಿದ್ದರು. ಘಟನೆಯ ಬೆನ್ನಿಗೇ ಪ್ರಧಾನ ಆರೋಪಿ ಪಲ್ಸರ್ ಸುನಿ ಸೇರಿದಂತೆ ಹಲವರನ್ನು ಬಂಧಿಸಲಾಗಿತ್ತು. ಅದೇ ವರ್ಷ ಜುಲೈನಲ್ಲಿ, ಜೈಲಿನಲ್ಲಿದ್ದ ಸುನಿ ಬರೆದಿದ್ದ ಪತ್ರದಲ್ಲಿ ನಟ ದಿಲೀಪ್‌  ಹೆಸರನ್ನು ಉಲ್ಲೇಖಿಸಿದ್ದ. ಈ ಮಾಹಿತಿ ಆಧರಿಸಿ ದಿಲೀಪ್‌ರನ್ನು ಲೈಂಗಿಕ ದಾಳಿ ಸಂಚು ರೂಪಿಸಿದ ಆರೋಪದ ಮೇಲೆ ಬಂಧಿಸಲಾಯಿತು. ಅವರು ಪ್ರಕರಣದ ಎಂಟನೇ ಆರೋಪಿಯಾದರು. ದಿಲೀಪ್ ಸುಮಾರು 83 ದಿನ ಜೈಲಿನಲ್ಲಿ ಕಳೆದ ಬಳಿಕ ಅಕ್ಟೋಬರ್ 2017ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದರು.

2018ರ ಮಾರ್ಚ್ 8ರಂದು ಎರ್ನಾಕುಲಂ ಸೆಷನ್ಸ್ ನ್ಯಾಯಾಲಯದಲ್ಲಿ ಬಹುಚರ್ಚಿತ ಪ್ರಕರಣದ ಮುಖ್ಯ ವಿಚಾರಣೆ ಆರಂಭವಾಯಿತು. ಮುಂದಿನ ಕೆಲ ವರ್ಷಗಳಲ್ಲಿ ನೂರಾರು ಸಾಕ್ಷಿಗಳು ಮತ್ತು ಅನೇಕ ದಾಖಲೆಗಳನ್ನು ನ್ಯಾಯಾಲಯ ಪರಿಶೀಲಿಸಿದರೂ, ವಿಚಾರಣೆ ನಿಧಾನಗತಿಯಲ್ಲಿ ಸಾಗಿತು. ಇದೇ ಅವಧಿಯಲ್ಲಿ ಪ್ರಕರಣದ ಪ್ರಮುಖ ಸಾಕ್ಷ್ಯವಾಗಿದ್ದ ಮೆಮೋರಿ ಕಾರ್ಡ್‌ ನ್ಯಾಯಾಲಯದ ಕಸ್ಟಡಿಯಲ್ಲಿ ಇರುವಾಗಲೇ 2018ರಲ್ಲಿ ಮತ್ತು 2021ರಲ್ಲಿ ಎರಡು ಬಾರಿ ಸೋರಿಕೆಯಾಯಿತು.  ಮೆಮೊರಿ ಕಾರ್ಡ್‌ನ ಹ್ಯಾಶ್ ಮೌಲ್ಯ ಬದಲಾಗಿರುವುದು ಅದರ ಮಾಹಿತಿ ಸೋರಿಕೆಯಾಗಿರುವುದನ್ನು ದೃಢಪಡಿಸಿತ್ತು. ಇದು ಪ್ರಕರಣಕ್ಕೆ ಹೊಸ ಗಂಭೀರ ತಿರುವು ನೀಡಿತು. ಅಲ್ಲದೆ, ಒಟ್ಟು 261 ಸಾಕ್ಷಿಗಳಲ್ಲಿ 28 ಮಂದಿ ಸಾಕ್ಷ್ಯ ನುಡಿಯಲು ಹಿಂದೇಟು ಹಾಕಿದ್ದು ವಿಚಾರಣೆಯನ್ನು ಮತ್ತಷ್ಟು ಸಂಕೀರ್ಣಗೊಳಿಸಿತು.

Also Read
ಉತ್ತಮ ಹೊದಿಕೆ ಕೊಡಿಸಲು ನಿರ್ದೇಶನ ಕೋರಿದ ನಟ ದರ್ಶನ್‌; ಜೈಲು ಅಧಿಕಾರಿಗಳಿಗೆ ನ್ಯಾಯಾಲಯ ತರಾಟೆ

ಈ ನಡುವೆ 2022ರಲ್ಲಿ ಮೆಮೋರಿ ಕಾರ್ಡ್‌ ವೀಡಿಯೊ ಸೋರಿಕೆ ಮತ್ತಿತರ ವಿಚಾರಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ ನಟಿ ಹೊಸದಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ ಹೈಕೋರ್ಟ್‌ಗೆ ಮನವಿ ಮಾಡಿದರು. ಮೆಮೊರಿ ಕಾರ್ಡ್ ವಸ್ತುವಿಷಯ ಸೋರಿಕೆಯಾದದ್ದನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್‌ ಇದು ಸಂತ್ರಸ್ತೆಯ ಗೌಪ್ಯತೆ ಮತ್ತು ಮೂಲಭೂತ ಹಕ್ಕುಗಳಿಗೆ ನೇರ ಧಕ್ಕೆ ಎಂದು ಹೇಳಿತು.

2025ರ ಆಗಸ್ಟ್‌ನಲ್ಲಿ ವಿಚಾರಣೆ ಎಂಟು ವರ್ಷ ಕಳೆದರೂ ಅಂತಿಮ ಹಂತ ತಲುಪದ ಕಾರಣ, ಸೆಷನ್ಸ್ ನ್ಯಾಯಾಲಯದಿಂದ ಕೇರಳ ಹೈಕೋರ್ಟ್‌ವರದಿ ಕೇಳಿತು. ಅಂತಿಮವಾಗಿ, ಸುದೀರ್ಘ ವಿಚಾರಣೆ ಬಳಿಕ ಎರ್ನಾಕುಲಂ ಪ್ರಧಾನ ಸೆಷನ್ಸ್‌ ನ್ಯಾಯಾಲಯ ಇಂದು (ಡಿಸೆಂಬರ್ 8, 202) ಪ್ರಕರಣದ ಅಂತಿಮ ತೀರ್ಪು ಪ್ರಕಟಿಸಿದೆ.

Kannada Bar & Bench
kannada.barandbench.com