ಸುದ್ದಿಗಳು

ದೇಶದ್ರೋಹ ಪ್ರಕರಣ: ಲಕ್ಷದ್ವೀಪದ ನಟಿ ಆಯಿಷಾಗೆ ಬಂಧನದಿಂದ ಒಂದು ವಾರ ಕಾಲ ಮಧ್ಯಂತರ ರಕ್ಷಣೆ ನೀಡಿದ ಕೇರಳ ಹೈಕೋರ್ಟ್

ಸಿಆರ್ಪಿಸಿ ಸೆಕ್ಷನ್ 41 ಎ ಅಡಿಯಲ್ಲಿ ಅಗತ್ಯವಿರುವಂತೆ, ತನಿಖೆಗೆ ಸಹಕರಿಸಬೇಕು ಮತ್ತು ಲಕ್ಷದ್ವೀಪ ಪೊಲೀಸರು ವಿಚಾರಣೆಗೆ ಕರೆದಾಗ ಹಾಜರಾಗಬೇಕು ಎಂದು ನ್ಯಾಯಾಲಯ ನಿರ್ಮಾಪಕಿಗೆ ಸೂಚಿಸಿದೆ.

Bar & Bench

ದೇಶದ್ರೋಹ ಆರೋಪ ಎದುರಿಸುತ್ತಿರುವ ಲಕ್ಷದ್ವೀಪದ ನಟಿ, ನಿರ್ಮಾಪಕಿ ಆಯಿಷಾ ಸುಲ್ತಾನಾರನ್ನು ಒಂದು ವಾರಕಾಲ ಬಂಧಿಸದಂತೆ ಕೇರಳ ಹೈಕೋರ್ಟ್‌ ಗುರುವಾರ ಮಧ್ಯಂತರ ರಕ್ಷಣೆ ಒದಗಿಸಿದೆ.

ಇದೇ ವೇಳೆ ಸಿಆರ್‌ಪಿಸಿ ಸೆಕ್ಷನ್‌ 41 ಎ ಅಡಿಯಲ್ಲಿ ಅಗತ್ಯವಿರುವಂತೆ ತನಿಖೆಗೆ ಸಹಕರಿಸಬೇಕು ಮತ್ತು ಲಕ್ಷದ್ವೀಪ ಪೊಲೀಸರು ವಿಚಾರಣೆಗೆ ಕರೆದಾಗ ಹಾಜರಾಗಬೇಕು ಎಂದು ನ್ಯಾ. ಅಶೋಕ್‌ ಮೆನನ್‌ ಅವರಿದ್ದ ಏಕಸದಸ್ಯ ಪೀಠ ಸುಲ್ತಾನಾ ಅವರಿಗೆ ಸೂಚಿಸಿದೆ. ಮತ್ತೊಂದೆಡೆ ನಿರೀಕ್ಷಣಾ ಜಾಮೀನು ಕೋರಿ ಸುಲ್ತಾನಾ ಅವರು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯ ತೀರ್ಪು ಕಾಯ್ದಿರಿಸಿದೆ.

"ಕೋವಿಡ್‌ ಹರಡುವಿಕೆ ಬಗ್ಗೆ ಸುಲ್ತಾನಾ ಟಿವಿ ಕಾರ್ಯಕ್ರಮವೊಂದರಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ. ಅವರು ಲಕ್ಷದ್ವೀಪದ ನೂತನ ಆಡಳಿತಾಧಿಕಾರಿ ಪ್ರಫುಲ್‌ ಪಟೇಲ್‌ ಅವರ ವಿರುದ್ಧ ಮಾಡಿರುವ ಟೀಕೆ ರಾಷ್ಟ್ರ ವಿರೋಧಿ ಕೃತ್ಯ" ಎಂದು ದ್ವೀಪದ ಬಿಜೆಪಿ ನಾಯಕರೊಬ್ಬರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕವರತ್ತಿ ಪೊಲೀಸರು ನಟಿ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದರು.

ಕೇಂದ್ರ ಸರ್ಕಾರ ದ್ವೀಪದ ಸ್ಥಳೀಯರ ವಿರುದ್ಧ ಜೈವಿಕ ಅಸ್ತ್ರ ಪ್ರಯೋಗಿಸುತ್ತಿದೆ ಎಂದು ಕಾರ್ಯಕ್ರಮದ ವೇಳೆ ಸುಲ್ತಾನಾ ಹೇಳಿದ್ದರು ಎಂಬುದು ಪ್ರಾಸಿಕ್ಯೂಷನ್‌ ಆರೋಪ. ಈ ಹಿನ್ನೆಲೆಯಲ್ಲಿ ಜೂನ್ 20 ರಂದು ಕವರತ್ತಿಯಲ್ಲಿರುವ ಪೊಲೀಸ್‌ ಪ್ರಧಾನ ಕಚೇರಿಗೆ ಸುಲ್ತಾನಾ ಹಾಜರಾಗಬೇಕು ಎಂದು ಸಿಆರ್‌ಪಿಸಿ ಸೆಕ್ಷನ್‌ 41 ಎ ಅಡಿಯಲ್ಲಿ ಪೊಲೀಸರು ನೊಟೀಸ್‌ ಜಾರಿಗೊಳಿಸಿದ್ದರು. ಬಂಧನ ಸಾಧ್ಯತೆ ಇರುವುದನ್ನು ಮನಗಂಡ ಸುಲ್ತಾನಾ ಜಾಮೀನಿಗಾಗಿ ಹೈಕೋರ್ಟ್‌ ಮೊರೆ ಹೋಗಿದ್ದರು.

ಈಗಿನ ಆಡಳಿತಾಧಿಕಾರಿ ಪ್ರಫುಲ್‌ ಪಟೇಲ್‌ ಅವರು ಪರಿಚಯಿಸಿದ ವಿವಿಧ ಆಡಳಿತಾತ್ಮಕ ಕ್ರಮಗಳ ವಿರುದ್ಧ ಕೋವಿಡ್‌ ಸಾಂಕ್ರಾಮಿಕದ ನಡುವೆಯೂ ಲಕ್ಷದ್ವೀಪ ನಿವಾಸಿಗಳು ಪ್ರತಿಭಟಿಸಿದ್ದರು. ಉದ್ದೇಶಿತ ಲಕ್ಷದ್ವೀಪ ಅಭಿವೃದ್ಧಿ ಪ್ರಾಧಿಕಾರ ನಿಯಂತ್ರಣ ನಿಯಮಾವಳಿ ಮಸೂದೆ, ಲಕ್ಷದ್ವೀಪ ಸಾಮಾಜಿಕ ವಿರೋಧಿ ಚಟುವಟಿಕೆಗಳ ನಿಯಂತ್ರಣ ವಿಧೇಯಕ ಲಕ್ಷದ್ವೀಪ ಪ್ರಾಣಿ ಸಂರಕ್ಷಣಾ ನಿಯಂತ್ರಣ ನಿಯಮಾವಳಿಗಳನ್ನು ಜಾರಿಗೆ ತರಲು ಹೊರಟಿದ್ದು ಪ್ರತಿಭಟನೆಯ ಕಿಡಿ ಹೊತ್ತಿಸಿತ್ತು. ಹೊಸ ಆಡಳಿತ ಕ್ರಮ ವಿರೋಧಿಸಿ ಕೇರಳ ಹೈಕೋರ್ಟ್‌ಗೆ ಅರ್ಜಿ ಕೂಡ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರ ಪಟೇಲ್‌ ಅವರನ್ನು ವಾಪಸ್‌ ಕರೆಸಿಕೊಳ್ಳಬೇಕೆಂದು ಕೇರಳ ವಿಧಾನಸಭೆ ಇತ್ತೀಚೆಗೆ ಸರ್ವಾನುಮತದ ನಿರ್ಣಯವನ್ನು ಕೂಡ ಕೈಗೊಂಡಿದೆ.