ದೇಶದ್ರೋಹ ಆರೋಪದ ಹಿನ್ನೆಲೆಯಲ್ಲಿ ತನ್ನ ವಿರುದ್ಧ ಐಪಿಸಿ ಸೆಕ್ಷನ್ 124 ಎ ಅಡಿ ದಾಖಲಿಸಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಒದಗಿಸಬೇಕೆಂದು ಕೋರಿ ಲಕ್ಷದ್ವೀಪದ ಚಲನಚಿತ್ರ ನಿರ್ಮಾಪಕಿ ಆಯಿಷಾ ಸುಲ್ತಾನ ಕೇರಳ ಹೈಕೋರ್ಟ್ ಮೊರೆ ಹೋಗಿದ್ದಾರೆ.
"ಕೋವಿಡ್ ಹರಡುವಿಕೆ ಬಗ್ಗೆ ಸುಲ್ತಾನಾ ಟಿವಿ ಕಾರ್ಯಕ್ರಮವೊಂದರಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ. ಅವರು ಲಕ್ಷದ್ವೀಪದ ನೂತನ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಅವರ ವಿರುದ್ಧ ಮಾಡಿರುವ ಟೀಕೆ ರಾಷ್ಟ್ರ ವಿರೋಧಿ ಕೃತ್ಯ" ಎಂದು ದ್ವೀಪದ ಬಿಜೆಪಿ ನಾಯಕರೊಬ್ಬರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕವರಟ್ಟಿ ಪೊಲೀಸರು ನಟಿ ವಿರುದ್ಧ ಪ್ರಕರಣ ಎಫ್‌ಐಆರ್ ದಾಖಲಿಸಿಕೊಂಡಿದ್ದರು.
ಪ್ರಕರಣ ದಾಖಲಿಸಿಕೊಂಡದ್ದನ್ನು ಕೇರಳದಲ್ಲಿ ವ್ಯಾಪಕವಾಗಿ ಖಂಡಿಸಲಾಗಿತ್ತು. ಉದ್ದೇಶಿತ ಲಕ್ಷದ್ವೀಪ ಅಭಿವೃದ್ಧಿ ಪ್ರಾಧಿಕಾರ ನಿಯಂತ್ರಣ ನಿಯಮಾವಳಿ ಮಸೂದೆ, , ಲಕ್ಷದ್ವೀಪ ಸಾಮಾಜಿಕ ವಿರೋಧಿ ಚಟುವಟಿಕೆಗಳ ನಿಯಂತ್ರಣ ವಿಧೇಯಕ ಲಕ್ಷದ್ವೀಪ ಪ್ರಾಣಿ ಸಂರಕ್ಷಣಾ ನಿಯಂತ್ರಣ ನಿಯಮಾವಳಿಗಳ ವಿರುದ್ಧ ಕೋವಿಡ್ ನಡುವೆಯೂ ದ್ವೀಪದ ಜನ ಪ್ರತಿಭಟನೆ ನಡೆಸುತ್ತಿದ್ದಾರೆ.
ನೂತನ ಆಡಳಿಗಾರ ಪಟೇಲ್ ಅವರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಒತ್ತಾಯಿಸಿ ಕೇರಳ ವಿಧಾನಸಭೆ ಇತ್ತೀಚೆಗೆ ಸರ್ವಾನುಮತದ ನಿರ್ಣಯವನ್ನು ಕೂಡ ಕೈಗೊಂಡಿತ್ತು.