Rahul Mamkootathil with Kerala High Court facebook
ಸುದ್ದಿಗಳು

ಅತ್ಯಾಚಾರ: ಮತ್ತೊಂದು ಪ್ರಕರಣದಲ್ಲಿ ಶಾಸಕ ಮಾಂಕೂಟತ್ತಿಲ್‌ಗೆ ನಿರೀಕ್ಷಣಾ ಜಾಮೀನು ನೀಡಿದ ಕೇರಳ ಹೈಕೋರ್ಟ್‌

ಉಳಿದ ಎರಡು ಅತ್ಯಾಚಾರ ಪ್ರಕರಣಗಳಲ್ಲಿ ಮಾಂಕೂಟತ್ತಿಲ್ ಈಗಾಗಲೇ ಜಾಮೀನು ಪಡೆದಿದ್ದಾರೆ.

Bar & Bench

ಪಾಲಕ್ಕಾಡ್‌ ಶಾಸಕ ಹಾಗೂ ಕಾಂಗ್ರೆಸ್‌ನಿಂದ ಅಮಾನತುಗೊಂಡಿದ್ದ ರಾಹುಲ್ ಮಾಂಕೂಟತ್ತಿಲ್ ಅವರು ಎದುರಿಸುತ್ತಿರುವ ಮೂರು ಅತ್ಯಾಚಾರ ಪ್ರಕರಣಗಳಲ್ಲಿ ಮೊದಲು ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್‌ ಗುರುವಾರ ನಿರೀಕ್ಷಣಾ ಜಾಮೀನು ನೀಡಿದೆ [ರಾಹುಲ್‌ ಬಿಆರ್‌ ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ನ್ಯಾಯಮೂರ್ತಿ ಕೌಸರ್ ಎಡಪ್ಪಗತ್ ಇಂದು ಬೆಳಿಗ್ಗೆ ಈ ಆದೇಶ ನೀಡಿದ್ದು ಈ ವೇಳೆ ಕಠಿಣ ಷರತ್ತುಗಳನ್ನು ವಿಧಿಸಿದೆ. ತಮ್ಮ ಮೊಬೈಲ್‌ ಫೋನನ್ನು ತನಿಖಾಧಿಕಾರಿ ಎದುರು ಹಾಜರುಪಡಿಸಬೇಕು. ಪ್ರತಿ ಎರಡನೇ ಶನಿವಾರ ಬೆಳಗ್ಗೆ 10ರಿಂದ 11 ಗಂಟೆಯವರೆಗೆ ತನಿಖಾಧಿಕಾರಿ ಎದುರು ಹಾಜರಿರಬೇಕು ಎಂದು ಸೂಚಿಸಲಾಗಿದೆ.

ಅಲ್ಲದೆ ಅವರು ದೇಶ ತೊರೆಯುವಂತಿಲ್ಲ. ತಮ್ಮ ಪಾಸ್‌ಪೋರ್ಟನ್ನು ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಒಪ್ಪಿಸಬೇಕು. ಸಾಕ್ಷಿದಾರರ ಮೇಲೆ ಪ್ರಭಾವ ಬೀರುವಂತಿಲ್ಲ ಎಂದು ಕೂಡ ನ್ಯಾಯಾಲಯ ಎಚ್ಚರಿಕೆ ನೀಡಿದೆ.

ತನಿಖೆಗೆ ಸಹಕರಿಸಬೇಕು. ಅಗತ್ಯವಿದ್ದರೆ ವೈದ್ಯಕೀಯ ಪರೀಕ್ಷೆಗೆ ಒಳಪಡಬೇಕು. ಮುಂದಿನ ಮೂರು ದಿನಗಳ ಕಾಲ ಬೆಳಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ನಡೆಯಲಿರುವ ಪೊಲೀಸ್ ವಿಚಾರಣೆಗೆ ಅವರು ಹಾಜರಾಗಬೇಕೆಂದು ಅದು ತಿಳಿಸಿದೆ.

ಉಳಿದ ಎರಡು ಅತ್ಯಾಚಾರ ಪ್ರಕರಣಗಳಲ್ಲಿ ಮಾಂಕೂಟತ್ತಿಲ್ ಈಗಾಗಲೇ ಜಾಮೀನು ಪಡೆದಿದ್ದಾರೆ.

ನೇಮೊಂ ಪೊಲೀಸ್ ಠಾಣೆಯಲ್ಲಿ ದಾಖಲಾದ ಅತ್ಯಾಚಾರ ಪ್ರಕರಣದಲ್ಲಿ ತಿರುವನಂತಪುರಂ ಸೆಷನ್ಸ್ ನ್ಯಾಯಾಲಯ ಮುಂಗಡ ಜಾಮೀನು ನಿರಾಕರಿಸಿದ್ದನ್ನು ಪ್ರಶ್ನಿಸಿ ಮಾಂಕೂಟತ್ತಿಲ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಆಲಿಸಿತು. ಪ್ರಕರಣದಲ್ಲಿ ಅವರನ್ನು ಬಂಧಿಸದಂತೆ 2025ರ ಡಿಸೆಂಬರ್‌ನಲ್ಲಿ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿತ್ತು.

ನಿರೀಕ್ಷಣಾ ಜಾಮೀನಿಗೆ ಆಕ್ಷೇಪಿಸಿದ್ದ ಸರ್ಕಾರಿ ವಕೀಲರನ್ನು ಉದ್ದೇಶಿಸಿ ನ್ಯಾಯಾಲಯ "ಅವಿವಾಹಿತ ಹಲವರೊಂದಿಗೆ ಸಂಬಂಧ ಹೊಂದಿದ್ದರೆ ತಪ್ಪೇನು?" ಎಂದು ಪ್ರಶ್ನಿಸಿತ್ತು. ಆದರೆ ಕೃತ್ಯದ ವಿಡಿಯೋ ಚಿತ್ರೀಕರಣದ ಕುರಿತು ಪ್ರತ್ಯೇಕವಾಗಿ ಪರಿಗಣಿಸಬಹುದು ಎಂದಿತ್ತು.

ನಿರೀಕ್ಷಣಾ ಜಾಮೀನು ಅರ್ಜಿಯಲ್ಲಿ ಮಾಂಕೂಟತ್ತಿಲ್‌ ದೂರದಾರರೊಂದಿಗೆ ದೈಹಿಕ ಸಂಬಂಧ ಹೊಂದಿದ್ದುದನ್ನು ಒಪ್ಪಿಕೊಂಡಿದ್ದರೂ ಅದು ಸಂಪೂರ್ಣ ಸಹಮತಿಯ ಮೇರೆಗೆ ನಡೆದದ್ದು ಎಂದಿದ್ದರು. ಆದರೆ ಇದು ನ್ಯಾಯಾಲಯವನ್ನು ದಾರಿತಪ್ಪಿಸುವ ಯತ್ನ ಎಂದು ದೂರುದಾರರು ಹೇಳಿದ್ದರು.

ಆರೋಪಗಳ ಹಿನ್ನೆಲೆಯಲ್ಲಿ ಕಳೆದ ವರ್ಷದ ಆಗಸ್ಟ್‌ನಲ್ಲಿ ಕಾಂಗ್ರೆಸ್ ಪಕ್ಷ ಮಾಂಕೂಟತ್ತಿಲ್‌ ಅವರನ್ನು ಪಕ್ಷದ ಸದಸ್ಯತ್ವದಿಂದ ಅಮಾನತುಗೊಳಿಸಿತ್ತು. ನಂತರ ಅವರು ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪ್ರಸ್ತುತ ಅವರು ಪಾಲಕ್ಕಾಡ್‌ ಕ್ಷೇತ್ರದ ಶಾಸಕರಾಗಿ ಮುಂದುವರೆದಿದ್ದಾರೆ.