ಕೇರಳದ ಮೊದಲ ಲಿಂಗಪರಿವರ್ತಿತ ದಂಪತಿಗೆ ಜನಿಸಿರುವ ಮಗುವಿನ ಜನನ ಪ್ರಮಾಣಪತ್ರದಲ್ಲಿ ಅವರಿಬ್ಬರನ್ನೂ ತಂದೆ ಹಾಗೂ ತಾಯಿ ಎಂದು ಗುರುತಿಸುವ ಬದಲು ಪೋಷಕರು ಎಂದು ಬದಲಿಸಬೇಕು ಎಂದು ರಾಜ್ಯ ಹೈಕೋರ್ಟ್ ಸೋಮವಾರ ಆದೇಶ ನೀಡಿದೆ [ಜಹಾದ್ ಇನ್ನಿತರರು ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ].
ಲಿಂಗಪರಿವರ್ತಿತರಾದ ಜಹಾದ್ (ಹುಟ್ಟಿನಿಂದ ಹೆಣ್ಣು, ಆದರೆ ಪುರುಷನಾಗಿ ಗುರುತಿಸಿಕೊಂಡ ವ್ಯಕ್ತಿ) ಮತ್ತು ಜಿಯಾ ಪಾವಲ್ (ಹುಟ್ಟಿನಿಂದ ಗಂಡು ಆದರೆ ಹೆಣ್ಣು ಎಂದು ಗುರುತಿಸಿಕೊಂಡವರು) ಕೇರಳದ ಮೊದಲ ಲಿಂಗಪರಿವರ್ತಿತ ದಂಪತಿಯಾಗಿದ್ದು ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಜಿಯಾದ್ ರೆಹಮಾನ್ ಎ ಎ ಈ ಆದೇಶ ನೀಡಿದರು.
ಜನನ ಪ್ರಮಾಣಪತ್ರದಲ್ಲಿ ಅರ್ಜಿದಾರರ ಲಿಂಗದ ವಿವರಗಳನ್ನು ಉಲ್ಲೇಖಿಸದೆ ಪೋಷಕರು ಎಂದಷ್ಟೇ ನಮೂದಿಸಬೇಕು ಎಂದು ಆದೇಶಿಸಿದ ನ್ಯಾಯಾಲಯ ರಿಟ್ ಅರ್ಜಿ ವಿಲೇವಾರಿ ಮಾಡಿತು.
ಫೆಬ್ರವರಿ 2023 ರಲ್ಲಿ ಜಹಾದ್ ತಮ್ಮ ಮಗುವಿಗೆ ಜನ್ಮ ನೀಡುವ ಮೂಲಕ ಲಿಂಗ ಪರಿವರ್ತಿತ ದಂಪತಿ ಮಾಧ್ಯಮಗಳ ಗಮನ ಸೆಳೆದಿದ್ದರು.
ಕೋರಿಕ್ಕೋಡ್ ಪಾಲಿಕೆ ನೋಂದಾಯಿಸಿದ ಮಗುವಿನ ಜನನ ಪ್ರಮಾಣಪತ್ರದಲ್ಲಿ ತಾಯಿಯ ಹೆಸರನ್ನು ಜಹಾದ್ (ಲಿಂಗಪರಿವರ್ತಿತ) ಮತ್ತು ತಂದೆಯ ಹೆಸರನ್ನು ಜಿಯಾ (ಲಿಂಗಪರಿವರ್ತಿತ) ಎಂದು ದಾಖಲಿಸಲಾಗಿತ್ತು. ಈ ವಿವರಗಳ ಬದಲು ತಮ್ಮನ್ನು ಕೇವಲ ಪೋಷಕರು ಎಂದು ಹೆಸರಿಸಬೇಕು ಎಂದು ಕೋರಿ ಅವರು ಪಾಲಿಕೆಗೆ ಮನವಿ ಮಾಡಿದ್ದರು. ಆದರೆ ಇದನ್ನು ಅಧಿಕಾರಿಗಳು ಮನ್ನಿಸದ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಮಗುವಿಗೆ ಜನ್ಮ ನೀಡುವುದರಲ್ಲಿ ವೈಜ್ಞಾನಿಕವಾಗಿ ಕೆಲವು ವ್ಯತಿರಿಕ್ತ ಅಂಶಗಳು ಇರುವುದರಿಂದ ಮೂರನೇ ಅರ್ಜಿದಾರನಾಗಿರುವ ತಮ್ಮ ಗಂಡು ಮಗು ಭವಿಷ್ಯದಲ್ಲಿ ಶಾಲಾ ಪ್ರವೇಶ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್ ಹಾಗೂ ಉದ್ಯೋಗ ಸಂಬಂಧಿತ ವಿಷಯಗಳು ಸೇರಿದಂತೆ ವಿವಿಧ ದಾಖಲೆಗಳನ್ನು ಸಲ್ಲಿಸುವಾಗ ಎದುರಿಸಬೇಕಾದ ಮುಜುಗರ ತಪ್ಪಿಸಲು ತಮ್ಮನ್ನು ತಂದೆ ತಾಯಿ ಎಂದು ಕರೆಯುವ ಬದಲು ಪೋಷಕರು ಎಂದು ಗುರುತಿಸಬೇಕು ಎಂದು ದಂಪತಿ ಕೋರಿದ್ದರು.
ಅಂತಹ ಪ್ರಮಾಣ ಪತ್ರ ನಿರಾಕರಿಸುವುದು ತಮ್ಮ ಹಾಗೂ ತಮ್ಮ ಮಗುವಿನ ಮೂಲಭೂತ ಹಕ್ಕುಗಳ ನಿರಾಕರಣೆಯಾಗುತ್ತದೆ. ಅಲ್ಲದೆ ಹಾಗೆ ಪ್ರಮಾಣಪತ್ರ ನೀಡದೆ ಇರುವುದು ನಾಲ್ಸಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಉಲ್ಲಂಘನೆಯಾಗುತ್ತದೆ ಎಂದು ಅವರು ಹೇಳಿದ್ದರು.
ಹಲವು ದೇಶಗಳಲ್ಲಿ ಸಲಿಂಗ ದಂಪತಿಗಳ ಮಗುವಿನ ಜನನ ಪ್ರಮಾಣಪತ್ರದಲ್ಲಿ ತಂದೆ ತಾಯಿ ಎಂಬ ವರ್ಗೀಕರಣದ ಬದಲು ಪೋಷಕರು ಎಂದು ನಮೂದಿಸಲಾಗಿರುತ್ತದೆ ಎಂದು ಅರ್ಜಿದಾರರು ತಿಳಿಸಿದ್ದರು.