ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಸಾಂವಿಧಾನಿಕ ಪೀಠವು ಏಪ್ರಿಲ್ 18, ಮಂಗಳವಾರದಿಂದ ವಿಚಾರಣೆ ನಡೆಸಲಿದೆ [ಸುಪ್ರಿಯೋ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ಸಿಜೆಐ ಅವರ ನೇತೃತ್ವದ ಸಾಂವಿಧಾನಿಕ ಪೀಠದಲ್ಲಿ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಪಿ ಎಸ್ ನರಸಿಂಹ ಹಾಗೂ ಹಿಮಾ ಕೊಹ್ಲಿ ಇರಲಿದ್ದಾರೆ.
ಮದುವೆಯಾಗುವ ಹಕ್ಕನ್ನು ಸಲಿಂಗಿ, ದ್ವಿಲಿಂಗಿ, ಮಂಗಳಮುಖಿ, ಲಿಂಗಪರಿವರ್ತಿತ, ಅಸಮ, ಅಂತರ್‌ಲಿಂಗಿ, ಅಲೈಂಗಿಕ ಮತ್ತಿತರ (ಎಲ್‌ಜಿಬಿಟಿಕ್ಯುಐಎ ಪ್ಲಸ್) ಸಮುದಾಯದವರಿಗೂ ವಿಸ್ತರಿಸಬೇಕು ಎಂದು ವಾದಿಸಿರುವ ಅರ್ಜಿಗಳು ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿವೆ.
ಸಲಿಂಗ ಮನೋಧರ್ಮದ ಜೋಡಿ ಸಲ್ಲಿಸಿದ್ದ ಅರ್ಜಿಯನ್ನು ಕೇಂದ್ರ ಸರ್ಕಾರ ಈ ಹಿಂದೆ ವಿರೋಧಿಸಿತ್ತು. ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಅದು, ಸಂಗಾತಿಗಳೊಂದಿಗೆ ಸಹಜೀವನ (ಲಿವಿಂಗ್ ಟುಗೆದರ್ ) ನಡೆಸುವುದು ಹಾಗೂ ಸಲಿಂಗ ವ್ಯಕ್ತಿಗಳು ಲೈಂಗಿಕ ಸಂಬಂಧ ಹೊಂದುವುದನ್ನು ಜೈವಿಕ ಪುರುಷ ಮತ್ತು ಜೈವಿಕ ಮಹಿಳೆಯೊಂದಿಗೆ ಮಕ್ಕಳು ಇರುವ ಭಾರತೀಯ ಕುಟುಂಬ ಘಟಕದ ಪರಿಕಲ್ಪನೆಗೆ ಹೋಲಿಸಲಾಗದು ಎಂದಿತ್ತು.
ಅದೇ ರೀತಿಯ ಅಭಿಪ್ರಾಯಗಳನ್ನು ದೇಶದ ಪ್ರಮುಖ ಮುಸ್ಲಿಂ ಧಾರ್ಮಿಕ ವಿದ್ವಾಂಸರ ಸಂಘಟನೆ ಜಾಮಿಯತ್ ಉಲಾಮಾ- ಇ- ಹಿಂದ್ ಕೂಡ ವ್ಯಕ್ತಪಡಿಸಿತ್ತು. ಸಲಿಂಗ ವಿವಾಹದಂತಹ ಪರಿಕಲ್ಪನೆಗಳು ಪಾಶ್ಚಾತ್ಯ ಸಂಸ್ಕೃತಿಯಿಂದ ಆವಿರ್ಭವಿಸಿವೆ. ಇದು ಆಮೂಲಾಗ್ರವಾಗಿ ನಾಸ್ತಿಕ ವಿಶ್ವಾತ್ಮಕ ದೃಷ್ಟಿಕೋನ ಹೊಂದಿದ್ದು ಭಾರತದ ಮೇಲೆ ಅದನ್ನು ಹೇರಬಾರದು ಎಂದಿತ್ತು.
ಆದರೆ ದೆಹಲಿಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಡಿಸಿಪಿಸಿಆರ್) ಅರ್ಜಿದಾರರ ವಾದಕ್ಕೆ ಬೆಂಬಲ ಸೂಚಿಸಿತ್ತು. ಸಲಿಂಗ ದಂಪತಿಗೆ ದತ್ತು ಮತ್ತು ಉತ್ತರಾಧಿಕಾರದ ಹಕ್ಕುಗಳನ್ನು ನೀಡಬೇಕು ಎಂದಿತ್ತು.