sunburn festival, Wayanad district and kerala high court 
ಸುದ್ದಿಗಳು

ಸುರಕ್ಷತೆ ಕುರಿತು ಕಳವಳ: ವಯನಾಡಿನ ಹೊಸ ವರ್ಷ ಪಾರ್ಟಿ ಸ್ಥಗಿತಕ್ಕೆ ಕೇರಳ ಹೈಕೋರ್ಟ್ ಆದೇಶ

ಸ್ಥಳ ನೈಸರ್ಗಿಕ ವಿಕೋಪ ಪೀಡಿತ ಪ್ರದೇಶವಾಗಿದ್ದು ಅನಧಿಕೃತ ನಿರ್ಮಾಣ ಮತ್ತು ಜನರು ದೊಡ್ಡ ಪ್ರಮಾಣದಲ್ಲಿ ಗುಂಪು ಸೇರುವುದರಿಂದ ಸಾರ್ವಜನಿಕ ಸುರಕ್ಷತೆ ಮತ್ತು ಪರಿಸರ ಸ್ಥಿರತೆಗೆ ಗಮನಾರ್ಹ ಅಪಾಯ ಉಂಟಾಗಬಲ್ಲದು ಎಂದಿದೆ ಪೀಠ.

Bar & Bench

ವಯನಾಡಿನ ಮೆಪ್ಪಾಡಿಯಲ್ಲಿ 'ಬೋಚೆ 1000 ಎಕರೆ'ಯಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಸನ್‌ಬರ್ನ್ ಹೊಸ ವರ್ಷ ಪಾರ್ಟಿಯನ್ನು ನಿಷೇಧಿಸಿ ಶುಕ್ರವಾರ ಮಧ್ಯಂತರ ಆದೇಶ ನೀಡಿರುವ ಕೇರಳ ಹೈಕೋರ್ಟ್‌ ಭೂಕುಸಿತ ಪೀಡಿತ ಪ್ರದೇಶದಲ್ಲಿನ ಸುರಕ್ಷತಾ ಅಪಾಯಗಳು ಮತ್ತು ಅಗತ್ಯ ಶಾಸನಬದ್ಧ ಅನುಮತಿ ಇಲ್ಲದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ [ಎಂಸಿ ಮಣಿ ಮತ್ತಿತರರು ಹಾಗೂ ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಸ್ಥಳ ನೈಸರ್ಗಿಕ ವಿಕೋಪ ಪೀಡಿತ ಪ್ರದೇಶವಾಗಿದ್ದು ಅನಧಿಕೃತ ನಿರ್ಮಾಣ ಮತ್ತು ಜನರು ದೊಡ್ಡ ಪ್ರಮಾಣದಲ್ಲಿ ಗುಂಪು ಸೇರುವುದರಿಂದ ಹಾಜರಾತಿ ಸಾರ್ವಜನಿಕ ಸುರಕ್ಷತೆ ಮತ್ತು ಪರಿಸರ ಸ್ಥಿರತೆಗೆ ಗಮನಾರ್ಹ ಅಪಾಯ ಉಂಟಾಗಬಲ್ಲದು ಮತ್ತು ಸಂಭಾವ್ಯ ಹಾನಿಯನ್ನು ತಡೆಗಟ್ಟಲು ತಕ್ಷಣದ ಮಧ್ಯಸ್ಥಿಕೆ ಅಗತ್ಯ ಒದಗಿಬಂದಿದೆ ಎಂದು ನ್ಯಾ. ಜಿಯಾದ್‌ ರೆಹಮಾನ್‌ ಎಎ ಅವರು ತಿಳಿಸಿದರು.

ಕಳೆದ ಜುಲೈನಲ್ಲಿ ವಯನಾಡ್‌ನಲ್ಲಿ ಭೂಕುಸಿತ ಸಂಭವಿಸಿ 250 ಕ್ಕೂ ಹೆಚ್ಚು ಪ್ರಾಣತೆತ್ತಿದ್ದು ಪುನರ್ವಸತಿ ಯತ್ನಗಳು ನಡೆಯುತ್ತಿರುವಾಗಲೇ ಜಿಲ್ಲೆಯಲ್ಲಿ ಸನ್‌ಬರ್ನ್‌ ಉತ್ಸವ ಆಯೋಜಿಸಲು ಉದ್ದೇಶಿಸಿರುವ ಕುರಿತು ಈ ಹಿಂದೆ ಹೈಕೋರ್ಟ್‌ ವಿಭಾಗೀಯ ಪೀಠ ಕಳವಳ ವ್ಯಕ್ತಪಡಿಸಿತ್ತು. ಕಾರ್ಯಕ್ರಮಕ್ಕೆ ನೀಡಿರುವ ಅನುಮತಿ ಬಗ್ಗೆ ಸ್ಪಷ್ಟನೆ ನೀಡುವಂತೆ  ಒತ್ತಾಯಿಸಿತ್ತು.

ಕಾರ್ಯಕ್ರಮದ ವಿರುದ್ಧ ವಯನಾಡ್ ನಿವಾಸಿಗಳಾದ ಎಂಸಿ ಮಣಿ ಮತ್ತು ಸಜೀವನ್ ಎಂಬುವವರು ಅರ್ಜಿ ಸಲ್ಲಿಸಿದ್ದರು.

ಡಿಸೆಂಬರ್ 31 ರಂದು ಮೆಪ್ಪಾಡಿಯ ಚುಲಿಕಾ ಎಸ್ಟೇಟ್‌ನಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಅನಧಿಕೃತ ನಿರ್ಮಾಣ ಕಾರ್ಯ ನಡೆಯುತ್ತಿರುವುದು ಮತ್ತು ಪರಿಸರ ಅಪಾಯ ಉಂಟಾಗುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ ಅವರು ಆರಂಭದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಮತ್ತು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.

ಕಾರ್ಯಕ್ರಮ ನಡೆಯುವ ಪ್ರದೇಶ ಭೂಕುಸಿತಕ್ಕೆ ಒಳಗಾಗುವ ಸ್ವರೂಪದ್ದಾಗಿದ್ದು, ಅನಧಿಕೃತ ಭೂಬಳಕೆ ಮಾಡಲಾಗುತ್ತಿದೆ. ಜೊತೆಗೆ 20,000 ಕ್ಕೂ ಹೆಚ್ಚು ಮಂದಿ ̧ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದಿದ್ದರು. ಅಲ್ಲದೆ ಎಸ್ಟೇಟ್‌ನಲ್ಲಿ ಬೋಚೆ ಭೂಮಿ ಪುತ್ರ ಪ್ರೈವೇಟ್ ಲಿಮಿಟೆಡ್‌ನಿಂದ ಅಕ್ರಮ ಕಾಮಗಾರಿ ನಡೆಯುತ್ತಿದ್ದು ವನ್ಯಜೀವಿಗಳ ಬೆದರಿಕೆ, ಭಾರೀ ಮಳೆ ಮತ್ತು ಅಸಮರ್ಪಕ ಮೂಲಸೌಕರ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು.

ವಿಪತ್ತು ನಿರ್ವಹಣಾ ಕಾಯಿದೆ, 2005 ರ ಸೆಕ್ಷನ್ 30ರ ಅಡಿಯಲ್ಲಿ, ಅವರು ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಕೋರಿದ್ದರು. ಕಾರ್ಯಕ್ರಮದ 10,000 ಟಿಕೆಟ್‌ಗಳು ಮಾರಾಟವಾಗಿದ್ದು 20,000ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇತ್ತು.

ವಿಚಾರಣೆ ನಡೆಸಿದ ನ್ಯಾಯಾಲಯ ಕಾರ್ಯಕ್ರಮವನ್ನು ನಡೆಸದಂತೆ ಮಧ್ಯಂತರ ಆದೇಶವನ್ನು ಜಾರಿಗೊಳಿಸಿರುವುದು ಮಾತ್ರವಲ್ಲದೆ ಸ್ಥಳದಲ್ಲಿ ನಿಷೇಧಾಜ್ಞೆ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿ, ಡಿಡಿಎಂಎ, ಪೊಲೀಸರಿಗೆ ಸೂಚಿಸಿದೆ.