<div class="paragraphs"><p>Justice Devan Ramachandran and Kerala High Court</p></div>

Justice Devan Ramachandran and Kerala High Court

 
ಸುದ್ದಿಗಳು

ಹಡಗು ಕೊಚ್ಚಿ ಬಂದರು ತೊರೆಯುವುದನ್ನು ತಡೆಯಲು ತಡರಾತ್ರಿ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್

Bar & Bench

ನ್ಯಾಯಾಲಯಗಳ ವಿಚಾರಣೆ ವೇಳೆ ʼಶುಭೋದಯʼ ಅಥವಾ ʼಶುಭರಾತ್ರಿʼ ಹೇಳುವ ಕುರಿತಂತೆ ವಕೀಲರು ಮತ್ತು ನ್ಯಾಯಾಧೀಶರ ನಡುವೆ ಸಾಮಾನ್ಯವಾಗಿ ಗೊಂದಲ ಇರುವುದಿಲ್ಲ. ಆದರೆ ಕೇರಳ ಹೈಕೋರ್ಟ್‌ ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಅವರು ಸೋಮವಾರ ತಡರಾತ್ರಿ ನಡೆಸಿದ ವಿಚಾರಣೆಯೊಂದು ಇಂತಹ ವಿದ್ಯಮಾನಕ್ಕೆ ಸಾಕ್ಷಿಯಾಯಿತು. ಹಡಗೊಂದು ಕೊಚ್ಚಿ ಬಂದರು ತೊರೆಯುವದನ್ನು ತಡೆಯುವ ಸಲುವಾಗಿ ಫಿರ್ಯಾದಿದಾರರು ಹೂಡಿದ್ದ ಪ್ರಕರಣವೊಂದನ್ನು ಅವರು ರಾತ್ರಿ 11:30ಕ್ಕೆ ವಿಚಾರಣೆಗಾಗಿ ಕೈಗೆತ್ತಿಕೊಂಡರು [ಗ್ರೇಸ್ ಯಂಗ್ ಇಂಟರ್‌ನ್ಯಾಶನಲ್ ಕಂ.ಲಿ ಪ್ರತಿನಿಧಿಸಿದ್ದ ಪವರ್ ಆಫ್ ಅಟಾರ್ನಿ ಹೋಲ್ಡರ್ ಟಿ ಎಕ್ಸ್‌ ಹ್ಯಾರಿ ಮತ್ತು ನೌಕೆ ಎಂವಿ ಓಷನ್ ರೋಸ್‌ನಲ್ಲಿ ಆಸಕ್ತಿ ಹೊಂದಿರುವ ಮಾಲೀಕರು ಮತ್ತು ಪಕ್ಷಗಳ ನಡುವಣ ಪ್ರಕರಣ].

ಡಾಲರ್‌ 27,297 ಮತ್ತು $ 72,000 ಮೊತ್ತದ ಇನ್‌ವಾಯ್ಸ್‌ ಪಾವತಿ ಬಾಕಿ ಇರಿಸಿಕೊಂಡಿದ್ದ ಎಂ ವಿ ಓಷನ್ ರೋಸ್ ಹೆಸರಿನ ಹಡಗು ಬುಧವಾರ ಬೆಳಗ್ಗೆ 5 ಗಂಟೆಗೆ ಕೊಚ್ಚಿ ಬಂದರಿನಿಂದ ಹೊರಡುವುದರಲ್ಲಿತ್ತು. ಹಡಗು ಮುಂಜಾನೆ ಹೊರಡುವ ಮುಂಚೆ ಫಿರ್ಯಾದುದಾರರ ಅಹವಾಲು ಆಲಿಸಿ ಪರಿಹಾರ ನೀಡಬೇಕಾದ ಸವಾಲು ನ್ಯಾಯಾಲಯದ ಮುಂದಿತ್ತು. ತಮ್ಮ ವಕೀಲರೊಂದಿಗೆ ಹಾಜರಾದ ಫಿರ್ಯಾದುದಾರರು ಎಂ ವಿ ಓಷನ್ ರೋಸ್ ಹಡಗನ್ನು ಬಂದರು ತೊರೆಯದಂತೆ ಬಂಧನದಲ್ಲಿರಿಸಲು ಕೋರಿದರು.

ನ್ಯಾಯಾಲಯದ ಆದೇಶದ ಕಾರಣಕ್ಕಾಗಿ ಪ್ರತಿವಾದಿಗಳು ಅಥವಾ ಅಂತಹ ಉಳಿದ ಪಕ್ಷಕಾರರಿಗೆ ಏನಾದರೂ ಹಾನಿ ಉಂಟಾದರೆ ಅದನ್ನು ಪರಿಹರಿಸಿಕೊಡುವುದಾಗಿ ಅರ್ಜಿದಾರರು ಮೌಖಿಕವಾಗಿ ಭರವಸೆ ಇತ್ತರು. ಬಳಿಕ ನ್ಯಾಯಾಲಯ ಹಡಗಿನ ಎಲ್ಲಾ ಎಂಜಿನ್‌ಗಳು ಮತ್ತು ಯಂತ್ರಗಳನ್ನು ವಶಕ್ಕೆ ಪಡೆಯುವಂತೆ ಹೈಕೋರ್ಟ್‌ ರಿಜಿಸ್ಟ್ರಾರ್‌ ಅವರಿಗೆ ಸೂಚನೆ ನೀಡಿತು. ಪ್ರಾಥಮಿಕ ದೃಷ್ಟಿಯಿಂದ ಹಡಗನ್ನು ತಡೆ ಹಿಡಿಯಲಾಗಿದೆ ಎಂದು ನ್ಯಾ. ದೇವನ್ ರಾಮಚಂದ್ರನ್ ತಿಳಿಸಿದರು.

"ಎಂ ವಿ ಓಷನ್ ರೋಸ್‌ಗೆ ಸಂಬಂಧಿಸಿದ ಇಂಜಿನ್‌, ಯಂತ್ರೋಪಕರಣಗಳು, ದೋಣಿಗಳು, ಬಂಕರ್‌ಗಳು, ಉಪಕರಣಗಳು, ಪೆರಿಫೆರಲ್‌ಗಳು ಮತ್ತು ಈ ನ್ಯಾಯಾಲಯದ ವ್ಯಾಪ್ತಿಯ ಕೊಚ್ಚಿ ಬಂದರಿನಲ್ಲಿರುವ ಇತರೆ ವಸ್ತುಗಳನ್ನು ವಶದಲ್ಲಿರಿಸುವಂತೆ ನಾನು ಈ ಮೂಲಕ ರಿಜಿಸ್ಟ್ರಾರ್‌ ಅವರಿಗೆ ನಿರ್ದೇಶಿಸುತ್ತೇನೆ. ಹಗಲು ಅಥವಾ ರಾತ್ರಿ ಎನ್ನದೇ ಯಾವುದೇ ಸಮಯದಲ್ಲಾದರೂ ವಾರೆಂಟ್‌ ಜಾರಿಗೆ ತರಬಹುದಾಗಿದೆ. ಪರಿಣಾಮ ಪೋರ್ಟ್ ಟ್ರಸ್ಟ್‌ನ ಕಾರ್ಯನಿರ್ವಾಹಕರು ಈ ವಾರಂಟ್ ಜಾರಿಗೊಳಿಸಿ ವಶಕ್ಕೆ ಪಡೆಯಲು ಆದೇಶಿಸಲಾಗಿದೆ” ಎಂದು ನ್ಯಾಯಮೂರ್ತಿಗಳು ತಿಳಿಸಿದರು.

ಒಂದುವೇಳೆ, ಬಾಕಿಇರುವ ₹ 2.43 ಕೋಟಿ ಮೂಲಧನ ಮತ್ತು ಅದರೊಂದಿಗೆ ಬಡ್ಡಿ ಹಾಗೂ ಕಾನೂನು ಶುಲ್ಕವನ್ನು ಪಾವತಿಸಿ ನ್ಯಾಯಾಲಯಕ್ಕೆ ತೃಪ್ತಿಯಾಗುವ ರೀತಿಯಲ್ಲಿ ಭದ್ರತೆ ಒದಗಿಸಿದರೆ ವಶಕ್ಕೆ ಪಡೆಯುವ ವಾರೆಂಟ್‌ ಹಿಂತೆಗೆದುಕೊಳ್ಳಲಾಗುತ್ತದೆ ಎಂದು ನ್ಯಾಯಾಲಯ ಇದೇ ವೇಳೆ ತಿಳಿಸಿತು.