ಬಹುಭಾಷಾ ನಟಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಮಲಯಾಳಂ ನಟ ದಿಲೀಪ್ ಮತ್ತವರ ಸಹಚರರ ವಿರುದ್ಧ ದಾಖಲಾಗಿದ್ದ ಪ್ರಕರಣದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್‌ಪಿಪಿ) ಅನಿಲ್ ಕುಮಾರ್ ರಾಜೀನಾಮೆ ನೀಡಿದ್ದಾರೆ.
ಗುರುವಾರ ನಡೆದ ವಿಚಾರಣೆ ವೇಳೆ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ ಬಿ ಸುನೀಲ್‌ಕುಮಾರ್ ಅವರು ಎಸ್‌ಪಿಪಿ ಅನಿಲ್ ಕುಮಾರ್ ಅವರ ರಾಜೀನಾಮೆಯನ್ನು ದೃಢೀಕರಿಸುವ ಹೇಳಿಕೆಯನ್ನು ಸಲ್ಲಿಸಿದರು. ಪರ್ಯಾಯ ವ್ಯವಸ್ಥೆಗಾಗಿ ಎರ್ನಾಕುಲಂನ ಹೆಚ್ಚುವರಿ ಸೆಷನ್ಸ್ (ಸಿಬಿಐ ವಿಶೇಷ ನ್ಯಾಯಾಲಯ) ನ್ಯಾಯಾಲಯವನ್ನು ಅವರು ಕೋರಿದರು.
ಪ್ರಕರಣದಿಂದ ಮಧ್ಯದಲ್ಲಿ ರಾಜೀನಾಮೆ ನೀಡಿದ ಎರಡನೇ ಎಸ್‌ಪಿಪಿ ಅನಿಲ್ ಕುಮಾರ್. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರು ತಮ್ಮ ವಿರುದ್ಧ ಅವಹೇಳನಕಾರಿ ಟೀಕೆಗಳನ್ನು ಮಾಡಿದ್ದಾರೆ ಎಂದು ಆಕ್ಷೇಪಿಸಿ ಡಿಸೆಂಬರ್ 2020 ರಲ್ಲಿ ಈ ಹಿಂದಿನ ಎಸ್‌ಪಿಪಿ ಎ ಸುರೇಶನ್ ಕೂಡ ರಾಜೀನಾಮೆ ನೀಡಿದ್ದರು. ಪ್ರಕರಣವನ್ನು ಮತ್ತೊಬ್ಬ ನ್ಯಾಯಾಧೀಶರಿಗೆ ವರ್ಗಾಯಿಸುವ ಸಲುವಾಗಿ ಪ್ರಾಸಿಕ್ಯೂಷನ್ ಪದೇಪದೇ ಪ್ರಯತ್ನ ಮಾಡಿತ್ತು ಆದರೆ ಈ ವಿನಂತಿಗಳನ್ನು ಮೊದಲು ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ, ನಂತರ ಕೇರಳ ಹೈಕೋರ್ಟ್ ತಿರಸ್ಕರಿಸಿದ್ದವು. ಹೈಕೋರ್ಟ್ ತೀರ್ಪಿನ ಬಳಿಕ ಸುರೇಶನ್ ಪ್ರಕರಣದಿಂದ ಹಿಂದೆ ಸರಿದಿದ್ದರು.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಫೆಬ್ರವರಿ 16, 2022 ರೊಳಗೆ ಪ್ರಕರಣವನ್ನು ವಿಲೇವಾರಿ ಮಾಡಬೇಕಿರುವುದರಿಂದ ಅಗತ್ಯವಾದ ವ್ಯವಸ್ಥೆಗಳನ್ನು ಮಾಡಲು ತನಿಖಾ ಅಧಿಕಾರಿಗಳಿಗೆ ನ್ಯಾಯಾಲಯ ಗುರುವಾರ ಸೂಚಿಸಿದೆ. ಇತ್ತ ಪ್ರಕರಣದ ವಿಚಾರಣೆಯು ಸಿಬಿಐ ನ್ಯಾಯಾಲಯದ ಮುಂದೆ ಅಂತಿಮ ಹಂತದಲ್ಲಿರುವುದರಿಂದ ಎಂಟನೇ ಆರೋಪಿಯಾಗಿರುವ ನಟ ದಿಲೀಪ್ ಇತ್ತೀಚೆಗೆ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಅನುಮತಿ ಅರ್ಜಿಯನ್ನು ಹಿಂಪಡೆದಿದ್ದಾರೆ.
ಮಲಯಾಳಂ ನಟಿಯೊಬ್ಬರನ್ನು ಅಪಹರಿಸಿ , ಲೈಂಗಿಕ ದೌರ್ಜನ್ಯ ನಡೆಸಿ, ಫೋಟೋ ತೆಗೆಯುವ ಮೂಲಕ ಸೇಡು ತೀರಿಸಿಕೊಳ್ಳಲು ಸಂಚು ರೂಪಿಸಿದ್ದಕ್ಕಾಗಿ ನಟ ಮತ್ತು ಅವರ ಸಹಚರರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ದಿಲೀಪ್ ತನ್ನ ಪತ್ನಿಯಿಂದ (ಮಂಜು ವಾರಿಯರ್) ಬೇರೆಯಾಗುವಲ್ಲಿ ಸಂತ್ರಸ್ತೆಯ ಪಾತ್ರ ಇದೆ ಎಂದು ಆರೋಪಿಸಲಾಗಿತ್ತು. ದಿಲೀಪ್ ಸೂಚನೆಯಂತೆ ನಟಿಯನ್ನು ಕಾರಿನಲ್ಲಿ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ ಆರು ಜನರನ್ನು ಬಂಧಿಸಲಾಗಿತ್ತು. ಪ್ರಸ್ತುತ ಪ್ರಕರಣದ ವಿಚಾರಣೆ ಜನವರಿ 4, 2022 ರಂದು ನಡೆಯಲಿದೆ.