Sabarimala temple with Justice Anil K Narendran and Justice PG Ajithkumar  
ಸುದ್ದಿಗಳು

ಶಬರಿಮಲೆ ದೇಗುಲದ ಮೇಲ್ಶಾಂತಿ ಹುದ್ದೆ ನೇಮಕಾತಿಯಲ್ಲಿ ಜಾತಿ ತಾರತಮ್ಯ: ಶನಿವಾರ ವಿಶೇಷ ಕಲಾಪ ನಡೆಸಿದ ಕೇರಳ ಹೈಕೋರ್ಟ್

"ಶಬರಿಮಲೆ ಎಲ್ಲಾ ಜಾತಿ ಮತ್ತು ಧರ್ಮದ ಜನರು ನಡೆದುಕೊಳ್ಳುವ ದೇವಾಲಯ, ಹಾಗಿರುವಾಗ ಈ ನಿರ್ಬಂಧ ಏಕೆ. ದೇವಸ್ಥಾನವನ್ನು ಈ ಅಸ್ಪೃಶ್ಯತೆ ಆಚರಣೆಯಿಂದ ಮುಕ್ತಗೊಳಿಸಬೇಕು" ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.

Bar & Bench

ತಿರುವಾಂಕೂರು ದೇವಸ್ವಂ ಮಂಡಳಿಯವರು ಜಾತಿ ಆಧಾರದಲ್ಲಿ ಶಬರಿಮಲೆ ದೇಗುಲದ ಮೇಲ್ಶಾಂತಿ (ಪ್ರಧಾನ ಅರ್ಚಕ) ಹುದ್ದೆಗೆ ಆಯ್ಕೆ ಮಾಡುತ್ತಿರುವುದನ್ನು ಪ್ರಶ್ನಿಸಿ ಸಲ್ಲಸಲಾದ ಅರ್ಜಿ ವಿಚಾರಣೆಗಾಗಿ ಕೇರಳ ಹೈಕೋರ್ಟ್‌ ಶನಿವಾರ ವಿಶೇಷ ಕಲಾಪ ನಡೆಸಿತು.

ಈ ಸಂಬಂಧ ಅರ್ಜಿದಾರರ ವಾದಗಳನ್ನು ಸುದೀರ್ಘವಾಗಿ ಆಲಿಸಿದ ನ್ಯಾಯಮೂರ್ತಿಗಳಾದ ಅನಿಲ್ ಕೆ ನರೇಂದ್ರನ್ ಮತ್ತು ಪಿ ಜಿ ಅಜಿತ್‌ಕುಮಾರ್ ಅವರಿದ್ದ ಪೀಠ ಡಿಸೆಂಬರ್ 17, 2022ಕ್ಕೆ  ಪ್ರಕರಣದ ವಿಚಾರಣೆ ಮುಂದೂಡಿತು.

ಮುಂದಿನ ವಿಚಾರಣೆ ವೇಳೆಗೆ ತಿರುವಾಂಕೂರು ದೇವಸ್ವಂ ಮಂಡಳಿ ಮತ್ತು ರಾಜ್ಯ ಸರ್ಕಾರ  ತಮ್ಮ ವಾದವನ್ನು ಮುಕ್ತಾಯಗೊಳಿಸುವ ಸಾಧ್ಯತೆ ಇದೆ. ಈ ಮಧ್ಯೆ ಪ್ರಕರಣದ ಮೂಲಕ ತನ್ನ ಕಲಾಪವನ್ನು ಕೇರಳ ಹೈಕೋರ್ಟ್‌ ಇದೇ ಮೊದಲ ಬಾರಿಗೆ ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡಿದೆ.

ತಿರುವಾಂಕೂರು ದೇವಸ್ವಂ ಮಂಡಳಿ, ಮೇ 27, 2021ರಲ್ಲಿ ಅಧಿಸೂಚನೆ ಹೊರಡಿಸಿ ಶಬರಿಮಲೆ ಧರ್ಮಶಾಸ್ತಾ ದೇವಸ್ಥಾನ ಮತ್ತು ಮಲಿಕಪ್ಪುರಂ ದೇವಸ್ಥಾನದಲ್ಲಿ ಸಂತಿಕ್ಕರನ್ ಹುದ್ದೆಗೆ ಮಲಯಾಳ ಬ್ರಾಹ್ಮಣ ಸಮುದಾಯದ ಸದಸ್ಯರಿಂದ ಅರ್ಜಿ ಆಹ್ವಾನಿಸಿತ್ತು.

ಅಧಿಸೂಚನೆ ಪ್ರಶ್ನಿಸಿ ಜುಲೈ 2021ರಲ್ಲಿ ವಕೀಲ ಬಿ ಜಿ ಹರೀಂದ್ರನಾಥ್ ಅವರ ಮೂಲಕ ಸಲ್ಲಿಸಲಾದ ಮನವಿಯೊಂದು ಇದು ಸಂವಿಧಾನದ 14, 15, 16, 17 ಮತ್ತು 21ನೇ ವಿಧಿಗಳನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ದೂರಿತ್ತು.

ತಿರುವಾಂಕೂರು ದೇವಸ್ವಂ ಮಂಡಳಿಯ ನೇಮಕಾತಿ ನಿಯಮಗಳ ಆಧಾರದ ಮೇಲೆ ಶನಿವಾರ ಹರೀಂದ್ರನಾಥ್ ಅವರು ತಮ್ಮ ವಾದ ಮಂಡಿಸಿದರು. ಬಳಿಕ ಬೇರೆ ಅರ್ಜಿದಾರರ ಪರ ವಾದ ಮಂಡಿಸಿದ ಡಾ. ಮೋಹನ್ ಗೋಪಾಲ್,  ಅಧಿಸೂಚನೆಯು ಸಂವಿಧಾನಕ್ಕೆ ಹೇಗೆ ವಿರುದ್ಧವಾಗಿದೆ ಎಂಬುದನ್ನು ವಿವರಿಸಿದರು.

"ಶಬರಿಮಲೆ ಎಲ್ಲಾ ಜಾತಿ ಮತ್ತು ಧರ್ಮದ ಜನರು ನಡೆದುಕೊಳ್ಳುವ ದೇವಾಲಯ, ಹಾಗಿರುವಾಗ ಈ ನಿರ್ಬಂಧ ಏಕೆ. ದೇವಸ್ಥಾನವನ್ನು ಈ ಅಸ್ಪೃಶ್ಯತೆ ಆಚರಣೆಯಿಂದ ಮುಕ್ತಗೊಳಿಸಬೇಕು" ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.