Supreme Court and Nupur Sahrma 
ಸುದ್ದಿಗಳು

ತನ್ನ ವಿರುದ್ಧ ವಿವಿಧೆಡೆ ದಾಖಲಾಗಿರುವ ಎಫ್‌ಐಆರ್‌ಗಳ ಒಗ್ಗೂಡಿಸಿ ಆಲಿಸಲು ಕೋರಿ ಮತ್ತೆ ಸುಪ್ರೀಂ ಕದ ತಟ್ಟಿದ ನೂಪುರ್‌

ಈ ಹಿಂದೆ ಜುಲೈ 1ರ ವಿಚಾರಣೆ ವೇಳೆ ನೂಪುರ್‌ ಶರ್ಮಾ ಅವರನ್ನು ತೀವ್ರ ತರಾಟೆ ತೆಗೆದುಕೊಂಡಿದ್ದ ಸುಪ್ರೀಂ ಕೋರ್ಟ್‌ ಅವರ ಮನವಿ ಆಲಿಸಲು ನಿರಾಕರಿಸಿತ್ತು.

Bar & Bench

ಪ್ರವಾದಿ ಮೊಹ್ಮಮದ್‌ ಅವರ ಕುರಿತು ನೀಡಿದ್ದ ವಿವಾದಾಸ್ಪದ ಹೇಳಿಕೆಯ ಹಿನ್ನೆಲೆಯಲ್ಲಿ ದೇಶದ ವಿವಿಧೆಡೆ ತಮ್ಮ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗಳನ್ನು ದೆಹಲಿಗೆ ವರ್ಗಾಯಿಸುವಂತೆ ಕೋರಿದ್ದ ತಮ್ಮ ಹಿಂದಿನ ಮನವಿಯನ್ನು ಮರುಸ್ಥಾಪಿಸಲು ಕೋರಿ ಬಿಜೆಪಿಯ ಮಾಜಿ ವಕ್ತಾರೆ ನೂಪುರ್‌ ಶರ್ಮಾ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.

ಜುಲೈ 1ರಂದು ಶರ್ಮಾ ವಿರುದ್ಧ ಕೆಂಡಾಮಂಡಲವಾಗಿದ್ದ ಸುಪ್ರೀಂ ಕೋರ್ಟ್‌ ಮನವಿ ವಿಚಾರಣೆ ನಡೆಸಲು ನಿರಾಕರಿಸಿತ್ತು. ಹೀಗಾಗಿ, ನೂಪುರ್‌ ಶರ್ಮಾ ಅವರು ಮನವಿ ಹಿಂಪಡೆದಿದ್ದರು. ಈಗ ಮತ್ತೊಮ್ಮೆ ಆ ಮನವಿಯನ್ನು ಹೊಸದಾಗಿ ಪರಿಗಣಿಸುವಂತೆ ಕೋರಿದ್ದಾರೆ.

ತಮ್ಮ ವಿರುದ್ಧ ಸರ್ವೋಚ್ಚ ನ್ಯಾಯಾಲಯ ವ್ಯಕ್ತಪಡಿಸಿದ ಅಭಿಪ್ರಾಯದಿಂದ ತೀವ್ರವಾದಿ ಶಕ್ತಿಗಳಿಂದ ಪ್ರಾಣ ಬೆದರಿಕೆ ಅನುಭವಿಸುತ್ತಿರುವುದಾಗಿ ಶರ್ಮಾ ವಾದಿಸಿದ್ದಾರೆ. ಹೀಗಾಗಿ, ದೇಶದ ವಿವಿಧೆಡೆ ದಾಖಲಾಗಿರುವ ಎಫ್‌ಐಆರ್‌ಗಳನ್ನು ಒಟ್ಟಿಗೆ ದೆಹಲಿಗೆ ವರ್ಗಾಯಿಸಬೇಕು ಎಂದು ಕೋರಿದ್ದಾರೆ. ದೇಶದ ವಿವಿಧೆಡೆ ಕನಿಷ್ಠ 9 ಎಫ್‌ಐಆರ್‌ಗಳು ದಾಖಲಾಗಿದ್ದು, ತಮ್ಮನ್ನು ಬಂಧಿಸದಂತೆ ತಡೆ ನೀಡಬೇಕು ಎಂದು ಕೋರಿದ್ದಾರೆ.