ಸುದ್ದಿಗಳು

ಎಂಎಸ್‌ಸಿ ಹಡಗು ಕಂಪೆನಿಯಿಂದ ₹9,531 ಕೋಟಿ ಪರಿಹಾರ ಕೇಳಿದ ಕೇರಳ: ಮೂರನೇ ಹಡಗು ವಶಕ್ಕೆ ಪಡೆಯಲು ಹೈಕೋರ್ಟ್ ಆದೇಶ

ಎಂಎಸ್‌ಸಿ ಎಲ್ಸಾ ಹಡಗು ಮುಳುಗಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ವಶಕ್ಕೆ ಪಡೆಯುವಂತೆ ಆದೇಶಿಸುತ್ತಿರುವ ಕಂಪೆನಿಯ ಮೂರನೇ ಹಡಗು ಇದಾಗಿದೆ.

Bar & Bench

ಕೇರಳದ ಕೊಚ್ಚಿ ಬಳಿಯ ಅಲಪ್ಪುಳ ಕರಾವಳಿಯಲ್ಲಿ ಮೇ 24 ರಂದು ಲೈಬೀರಿಯಾದ ಸರಕು ಸಾಗಣೆ ಹಡಗು ಎಂಎಸ್‌ಸಿ ಎಲ್ಸಾ 3 ಮುಳುಗಿ ಪರಿಸರ ನಾಶ ಮತ್ತು ಆರ್ಥಿಕ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಮೆಡಿಟರೇನಿಯನ್ ಶಿಪ್ಪಿಂಗ್ ಕಂಪನಿಗೆ (ಎಂಎಸ್‌ಸಿ) ಸೇರಿದ ಮತ್ತೊಂದು ಹಡಗು ಎಂಎಸ್‌ಸಿ ಅಕಿಟೇಟಾ -2 ಅನ್ನುವಶಕ್ಕೆ ಪಡೆಯುವಂತೆ ಕೇರಳ ಹೈಕೋರ್ಟ್‌  ಸೋಮವಾರ ಆದೇಶಿಸಿದೆ [ಕೇರಳ ಸರ್ಕಾರ ಮತ್ತು ಎಂವಿ ಎಂಎಸ್‌ಸಿ ಅಕಟೇಟಾ II ಇನ್ನಿತರರ ನಡುವಣ ಪ್ರಕರಣ].

ಎಲ್ಸಾ ಹಡಗು ಮುಳುಗಿದ್ದರಿಂದ ಉಂಟಾದ ಹಾನಿಗೆ ಪರಿಹಾರ ರೂಪದಲ್ಲಿ ₹9,531 ಕೋಟಿ ನೀಡುವಂತೆ ಕೋರಿ ಕೇರಳ ಸರ್ಕಾರ ಸಲ್ಲಿಸಿದ್ದ ನೌಕಾ ಮೊಕದ್ದಮೆಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ಎ ಅಬ್ದುಲ್ ಹಖೀಮ್ ಅವರು ಮಧ್ಯಂತರ ಆದೇಶ ಹೊರಡಿಸಿದರು. ಅಷ್ಟು ಮೊತ್ತದ ಪರಿಹಾರ ಪಡೆಯುವುದಕ್ಕಾಗಿ ಹಡಗನ್ನು ವಶಕ್ಕೆ ಪಡೆಯಬೇಕಿದೆ ಎಂದು ರಾಜ್ಯ ಸರ್ಕಾರ ವಾದಿಸಿತು.

ಎಂಎಸ್‌ಸಿ ಎಲ್ಸಾ ಹಡಗು ಮುಳುಗಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ವಶಕ್ಕೆ ಪಡೆಯುವಂತೆ ಆದೇಶಿಸುತ್ತಿರುವ ಎಂಎಸ್‌ಸಿಯ ಮೂರನೇ ಹಡಗು ಇದಾಗಿದೆ. ಇದೇ ಸಂಸ್ಥೆಯ ಹಡಗುಗಳಾದ ಎಂಎಸ್‌ಸಿ ಮಾನಸ- ಎಫ್‌ ಹಾಗೂ ಎಂವಿ ಎಂಎಸ್‌ಸಿ ಪೋಲೊ II ಹಡಗುಗಳನ್ನು ವಶಕ್ಕೆ ತೆಗೆದುಕೊಳ್ಳುವಂತೆ ನ್ಯಾಯಾಲಯ ಈ ಹಿಂದಿನ ವಿಚಾರಣೆಗಳ ವೇಳೆ ಆದೇಶಿಸಿತ್ತು. ಒಂದು ಮೊಕದ್ದಮೆ ಪರಿಸರ ನಾಶಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಲ್ಲಿಸಿದೆ. ಹಡಗು ನಾಪತ್ತೆಯಾದ ಪರಿಣಾಮ ತಮ್ಮ ಸರಕು ಕಾಣೆಯಾಗಿದೆ ಎಂದು ದೂರಿ ಒಂದು ಕಚ್ಚಾ ಗೋಡಂಬಿ ಕಂಪೆನಿ ಹಾಗೂ ಐವರು ಸರಕು ಮಾಲೀಕರು ಇನ್ನೆರಡು ಅರ್ಜಿಗಳನ್ನು ಪ್ರತ್ಯೇಕವಾಗಿ ಸಲ್ಲಿಸಿದ್ದರು.

ರಾಜ್ಯ ಸರ್ಕಾರ ಸಲ್ಲಿಸಿರುವ ಪ್ರಸ್ತುತ ದೂರಿನಲ್ಲಿ, ಪರಿಸರ ಮಾಲಿನ್ಯ ಹಾನಿಗೆ ಪರಿಹಾರ ರೂಪದಲ್ಲಿ ₹8,626.12 ಕೋಟಿ, ಪರಿಸರ ಶುಚೀಕರಣಕ್ಕಾಗಿ ₹378.48 ಕೋಟಿ, ಮೀನುಗಾರರು ಮತ್ತು ಕರಾವಳಿ ಸಮುದಾಯಗಳು ಅನುಭವಿಸಿದ ಆರ್ಥಿಕ ನಷ್ಟ ಸರಿದೂಗಿಸಲು ₹526.51 ಕೋಟಿ ನೀಡುವಂತೆ ಕೋರಿದೆ.

ದಾಖಲೆಗಳನ್ನು ಗಮನಿಸಿದ ನ್ಯಾಯಾಲಯ ಸರ್ಕಾರದ ವಾದದಲ್ಲಿ ಹುರುಳಿದೆ ಎಂದಿತು. ಅಂತೆಯೇ ಹಡಗಿನ ಮಾಲೀಕರು ₹9,531ಕೋಟಿ ಠೇವಣಿ ಇಡುವವರೆಗೆ ಅಥವಾ ಸೂಕ್ತ ಹಣಕಾಸು ಭದ್ರತೆ ಒದಗಿಸುವವರೆಗೆ ಎಂಎಸ್‌ಸಿ ಅಕಿಟೇಟಾ II ಹಡಗನ್ನು ವಶಕ್ಕೆ ಪಡೆಯುವಂತೆ ಆದೇಶಿಸಿತು. ಹಡಗನ್ನು ತನ್ನ ಸುಪರ್ದಿಯಲ್ಲಿರಿಸಿಕೊಳ್ಳುವಂತೆ ಅದಾನಿ ವಿಳಿಜ್ಞಂ ಬಂದರು ಪ್ರೈವೇಟ್‌ ಲಿಮಿಟೆಡ್‌ಗೆ ಅದು ಸೂಚಿಸಿತು.

[ತೀರ್ಪಿನ ಪ್ರತಿ]

State_of_Kerala_v_MV_MSC_Akiteta_II__IMO_NO__9220847____ors.pdf
Preview