ಸರಕು ನಾಪತ್ತೆಯಾದ ಇನ್ನೊಂದು ಪ್ರಕರಣ: ಮುಳುಗಿದ ಹಡಗಿನ ಸಮೂಹದ ಮತ್ತೊಂದು ಹಡಗು ವಶಕ್ಕೆ ಕೇರಳ ಹೈಕೋರ್ಟ್ ಆದೇಶ

ಹಡಗಿನಲ್ಲಿದ್ದ ಗೋಡಂಬಿಯ ಸರಕಿನ ಸಂಬಂಧ ₹74 ಲಕ್ಷ ಠೇವಣಿ ಇಡಬೇಕಿರುವ ಹಿನ್ನೆಲೆಯಲ್ಲಿ ಕಂಪೆನಿಯ ಮತ್ತೊಂದು ಹಡಗು ಎಂಎಸ್ಸಿ ಪೊಲೊ-IIವನ್ನು ವಶಕ್ಕೆ ಪಡೆಯುವಂತೆ ನ್ಯಾಯಾಲಯ ಆದೇಶಿಸಿದೆ.
Ship
ShipImage for representative purpose
Published on

ಕೇರಳದ ಕೊಚ್ಚಿ ಬಳಿಯ ಅಲಪ್ಪುಳ ಕರಾವಳಿಯಲ್ಲಿ ಮೇ 24 ರಂದು ಲೈಬೀರಿಯಾದ ಸರಕು ಸಾಗಣೆ ಹಡಗು ಎಂಎಸ್ಸಿ ಎಲ್ಸಾ 3 ಮುಳುಗಿದ ಪರಿಣಾಮ ಉಂಟಾಗಿರುವ ಸರಕು ನಷ್ಟಕ್ಕೆ ಸಂಬಂಧಿಸಿದಂತೆ ಹಡಗು ಮುಳುಗಿದ ಹಡಗಿನ ಸಮೂಹದ ಮತ್ತೊಂದು ಹಡಗನ್ನು ಷರತ್ತುಬದ್ಧವಾಗಿ ವಶಕ್ಕೆ ಪಡೆಯಲು ಆದೇಶಿಸಿದೆ [ಸ್ಯಾನ್ಸ್ ಕ್ಯಾಶ್ಯೂ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಎಂವಿ ಎಂಎಸ್ಸಿ ಪೊಲೊ II ಹಡಗಿನ ಮಾಲೀಕರು ಇನ್ನಿತರ ಪಕ್ಷಕಾರರ ನಡುವಣ ಪ್ರಕರಣ].

ತನ್ನ ಕಚ್ಚಾ ಗೋಡಂಬಿ ಸರಕು ಕಳೆದುಹೋಗಿದೆ ಎಂದು ಆರೋಪಿಸಿ ಸಾನ್ಸ್ ಕ್ಯಾಶ್ಯೂ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ನೌಕಾ ಮೊಕದ್ದಮೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ಎ ಅಬ್ದುಲ್ ಹಖೀಮ್ ಅವರು ಅರ್ಜಿ ಪುರಸ್ಕರಿಸಿ ಮಧ್ಯಂತರ ಆದೇಶ ಹೊರಡಿಸಿದರು.

Also Read
ಕೊಚ್ಚಿ ಹಡಗು ದುರಂತ: ಮುಳುಗಿದ ಹಡಗಿನ ಸಮೂಹದ ಮತ್ತೊಂದು ಹಡಗನ್ನು ವಶಕ್ಕೆ ಪಡೆಯಲು ಸೂಚಿಸಿದ ಕೇರಳ ಹೈಕೋರ್ಟ್‌

ಕಳೆದ ವಾರ ಇದೇ ಘಟನೆಗೆ ಸಂಬಂಧಿಸಿದಂತೆ ಕಚ್ಚಾ ಗೋಡಂಬಿಯ ಕಂಟೇನರ್ಗಳು ನಾಪತ್ತೆಯಾದ ಹಿನ್ನೆಲೆಯಲ್ಲಿ ಐವರು ಸರಕು ಮಾಲೀಕರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಎಂಎಸ್ಸಿ ನಿರ್ವಹಿಸುವ ಮತ್ತೊಂದು ಹಡಗಾದ ಮಾನಸ-ಎಫ್ ವಶಕ್ಕೆ ಪಡೆಯುವಂತೆ ನ್ಯಾಯಾಲಯ ಆದೇಶಿಸಿತ್ತು. ಹಡಗು ಬಿಡುಗಡೆ ಮಾಡಬೇಕು ಎಂದರೆ ಸುಮಾರು ₹6 ಕೋಟಿಯನ್ನು ಠೇವಣಿಯಾಗಿ ಇಡಬೇಕು ಎಂದು ಷರತ್ತು ವಿಧಿಸಲಾಗಿತ್ತು.

Also Read
ಕೊಚ್ಚಿ ಬಳಿ ಹಡಗು ಮುಳುಗಡೆ: ರಾಸಾಯನಿಕ ಮತ್ತು ತೈಲ ಸೋರಿಕೆ ಮಾಹಿತಿ ಬಿಡುಗಡೆಗೆ ಕೇರಳ ಹೈಕೋರ್ಟ್ ಆದೇಶ

ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಎಸ್ಸಿ ಎಲ್ಸಾ-3 ಮುಳುಗಿದ್ದು ದೇಶದಲ್ಲಿ ಎಂಎಸ್ಸಿಯ ಯಾವುದೇ ಆಸ್ತಿ ಇಲ್ಲದಿರುವುದರಿಂದ ಅದರ ಮತ್ತೊಂದು ಹಡಗನ್ನು ವಶಕ್ಕೆ ಪಡೆಯುವಂತೆ ಕೋರಿ ಸಾನ್ಸ್ ಕ್ಯಾಶ್ಯೂ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹೈಕೋರ್ಟ್ ಮೊರೆ ಹೋಗಿತ್ತು.

ವಿಳಿಜ್ಞಂಗೆ ತೆರಳುತ್ತಿದ್ದ ಲೈಬೀರಿಯಾ ಧ್ವಜವುಳ್ಳ ಎಂಎಸ್ಸಿ ಪೊಲೊ IIವನ್ನು ವಶಪಡಿಸಿಕೊಳ್ಳಲು ಆದೇಶಿಸಿದ ನ್ಯಾಯಾಲಯ ವಾದಿಗೆ ಭದ್ರತೆ ರೂಪದಲ್ಲಿ 74 ಲಕ್ಷವನ್ನು ಹೈಕೋರ್ಟ್ನಲ್ಲಿ ಠೇವಣಿ ಇಡುವಂತೆ ಎಂಎಸ್ಸಿಗೆ ನಿರ್ದೇಶಿಸಿತು. ಠೇವಣಿ ಇರಿಸಿದ ಬಳಿಕ ಷರತ್ತುಬದ್ಧವಾಗಿ ವಶದಲ್ಲಿರಿಸಿಕೊಳ್ಳುವ ಆದೇಶ ಮುಂದಿನ ಯಾವುದೇ ನಿರ್ದೇಶನದ ಅಗತ್ಯವಿಲ್ಲದೆ ತನ್ನಿಂತಾನೇ ರದ್ದಾಗುತ್ತದೆ ಎಂದು ನ್ಯಾಯಲಯ ಇದೇ ವೇಳೆ ತಿಳಿಸಿತು. ಪ್ರಕರಣದ ಮುಂದಿನ ವಿಚಾರಣೆ ಜೂನ್ 23ರಂದು ನಡೆಯಲಿದೆ.

Kannada Bar & Bench
kannada.barandbench.com