JSK: Janaki v State of Kerala 
ಸುದ್ದಿಗಳು

ಎರಡು ಬದಲಾವಣೆಗಳಿಗೆ ಒಪ್ಪಿದ ನಿರ್ಮಾಪಕರು: ಜೆಎಸ್‌ಕೆಗೆ ಸೆನ್ಸಾರ್ ಪ್ರಮಾಣಪತ್ರ ನೀಡಲು ಕೇರಳ ಹೈಕೋರ್ಟ್ ಆದೇಶ

ಚಿತ್ರದ ಅಡಿ ಶೀರ್ಷಿಕೆಯಲ್ಲಿ 'ಜಾನಕಿ ವರ್ಸಸ್ ಸ್ಟೇಟ್ ಆಫ್ ಕೇರಳ' ಬದಲಿಗೆ ಜಾನಕಿ ವಿ ಅಥವಾ ವಿ ಜಾನಕಿ ವರ್ಸಸ್ ಸ್ಟೇಟ್ ಆಫ್ ಕೇರಳ ಎಂದು ಬದಲಿಸಲು ಹಾಗೂ ನ್ಯಾಯಾಲಯ ದೃಶ್ಯದಲ್ಲಿ ಜಾನಕಿ ಹೆಸರನ್ನು ಮ್ಯೂಟ್ ಮಾಡಲು ನಿರ್ಮಾಪಕರು ಒಪ್ಪಿದರು.

Bar & Bench

ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಸೂಚನೆಯಂತೆ ʼಜೆಎಸ್‌ಕೆ: ಜಾನಕಿ ವಿ ಸ್ಟೇಟ್ ಆಫ್ ಕೇರಳʼ ಮಲಯಾಳಂ ಚಿತ್ರದಲ್ಲಿ ಎರಡು ಬದಲಾವಣೆಗಳನ್ನು ಮಾಡಲು ಸಿನಿಮಾ ನಿರ್ಮಾಪಕರು ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಸೆನ್ಸಾರ್ ಪ್ರಮಾಣಪತ್ರ ನೀಡುವಂತೆ ಕೇರಳ ಹೈಕೋರ್ಟ್ ಬುಧವಾರ ಸಿಬಿಎಫ್‌ಸಿಗೆ ನಿರ್ದೇಶನ ನೀಡಿತು [ಕಾಸ್ಮೋಸ್ ಎಂಟರ್‌ಟೇನ್‌ಮೆಂಟ್‌ ಮತ್ತು ಪ್ರಾದೇಶಿಕ ಅಧಿಕಾರಿ ನಡುವಣ ಪ್ರಕರಣ].

ಕೇಂದ್ರ ಸಚಿವ ಸುರೇಶ್ ಗೋಪಿ ನಟಿಸಿರುವ  ಚಿತ್ರವನ್ನು ಜುಲೈ 5 ರಂದು ಕೊಚ್ಚಿಯ ಸ್ಟುಡಿಯೋವೊಂದರಲ್ಲಿ ನ್ಯಾಯಮೂರ್ತಿ ಎನ್ ನಾಗರೇಶ್ ವೀಕ್ಷಿಸಿದ್ದರು. ಇದಕ್ಕೂ ಮುನ್ನ ನಡೆದಿದ್ದ ವಿಚಾರಣೆಯಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಿರುವ ಅತ್ಯಾಚಾರ ಸಂತ್ರಸ್ತೆಯ ಪಾತ್ರಕ್ಕೆ ಜಾನಕಿ ಎಂದು ಏಕೆ ಹೆಸರಿಸಬಾರದು ಎಂದು ಅರ್ಥವಾಗುತ್ತಿಲ್ಲ ಎಂಬುದಾಗಿ ನ್ಯಾಯಮೂರ್ತಿಗಳು ಹೇಳಿದ್ದರು. ಕಲಾ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಸಿಬಿಎಫ್‌ಸಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಇಂದು, ಸಿಬಿಎಫ್‌ಸಿ ಪರ ಹಾಜರಾದ ವಕೀಲ ಅಭಿನವ್ ಚಂದ್ರಚೂಡ್, ಸೆನ್ಸಾರ್‌ ಮಂಡಳಿಯು ' ಜಾನಕಿ ವಿ ಸ್ಟೇಟ್ ಆಫ್ ಕೇರಳ ' ಚಿತ್ರಕ್ಕೆ 96 ಕಟ್‌ಗಳನ್ನು ಹೇಳಿತ್ತಾದರೂ ಎರಡು ನಿರ್ದಿಷ್ಟ ಬದಲಾವಣೆಗಳನ್ನಷ್ಟೇ ಕೋರುತ್ತಿದೆ ಎಂದು ತಿಳಿಸಿದರು.

ಚಿತ್ರದ ಅಡಿ ಶೀರ್ಷಿಕೆಯಲ್ಲಿ 'ಜಾನಕಿ ವರ್ಸಸ್ ಸ್ಟೇಟ್ ಆಫ್ ಕೇರಳ' ಬದಲಿಗೆ ಪಾತ್ರದ ಪೂರ್ಣ ಹೆಸರಾದ ಜಾನಕಿ ವಿದ್ಯಾಧರನ್‌ ಎನ್ನುವುದಕ್ಕೆ ಹೊಂದಿಕೆಯಾಗುವಂತೆ ಜಾನಕಿ ವಿ ಅಥವಾ ವಿ ಜಾನಕಿ ವರ್ಸಸ್ ಸ್ಟೇಟ್ ಆಫ್ ಕೇರಳ ಎಂದು ಬದಲಿಸಬೇಕು ಹಾಗೂ ನ್ಯಾಯಾಲಯ ದೃಶ್ಯದಲ್ಲಿ ಜಾನಕಿ ಹೆಸರನ್ನು ಮ್ಯೂಟ್ ಮಾಡಬೇಕು ಎಂದು ಅವರು ಮನವಿ ಮಾಡಿದರು.

ನಿರ್ಮಾಪಕರ ಪರವಾಗಿ ವಾದ ಮಂಡಿಸಿದ ವಕೀಲ ಹ್ಯಾರಿಸ್ ಬೀರನ್, ಮೊದಲ ಬದಲಾವಣೆಗೆ ತಕ್ಷಣವೇ ಸೂಚಿಸಿದರಾದರೂ ಎರಡನೆಯ ಬದಲಾವಣೆ ಕುರಿತು ಹಿಂದೆಗೆದರು. ಅಂತಿಮವಾಗಿ ನಿರ್ಮಾಪಕರು ಬದಲಾವಣೆಗೆ ಒಪ್ಪಿರುವುದಾಗಿ ಸಮ್ಮತಿ ಸೂಚಿಸಿದರು.

ಚಿತ್ರದ ಪರಿಷ್ಕೃತ ಆವೃತ್ತಿ ಸಲ್ಲಿಸಿದ ನಂತರ, ಸಿಬಿಎಫ್‌ಸಿ ಮೂರು ದಿನಗಳಲ್ಲಿ ಸೆನ್ಸಾರ್ ಪ್ರಮಾಣಪತ್ರ ನೀಡಲಿದೆ ಎಂದು ಚಂದ್ರಚೂಡ್ ನ್ಯಾಯಾಲಯಕ್ಕೆ ವಿವರಿಸಿದರು. ಇದನ್ನು ದಾಖಲಿಸಿಕೊಂಡ ನ್ಯಾಯಾಲಯ ವಾರದ ನಂತರ ಮತ್ತೆ ಪ್ರಕರಣದ ವಿಚಾರಣೆ ನಡೆಸುವುದಾಗಿ ತಿಳಿಸಿತು.