CPI (M) State Secretary MV Govindan, Kerala High Court 
ಸುದ್ದಿಗಳು

ರಸ್ತೆ ತಡೆ ಪ್ರಕರಣ: ಖುದ್ದು ಹಾಜರಾಗುವಂತೆ ಸಿಪಿಎಂ ರಾಜ್ಯ ಕಾರ್ಯದರ್ಶಿಗೆ ಕೇರಳ ಹೈಕೋರ್ಟ್ ಆದೇಶ

ರಸ್ತೆ ಮತ್ತು ರಸ್ತೆ ಬದಿಗಳಲ್ಲಿ ಸಾರ್ವಜನಿಕ ಸಭೆಗಳನ್ನು ನಿಷೇಧಿಸಿ 2010ರಲ್ಲಿ ನೀಡಿದ್ದ ತೀರ್ಪಿಗೆ ಉದ್ದೇಶಪೂರ್ವಕವಾಗಿ ಅವಿಧೇಯತೆ ತೋರಿದ ಆರೋಪಕ್ಕೆ ಸಂಬಂಧಿಸಿದಂತೆ ಎನ್ ಪ್ರಕಾಶ್ ಎಂಬುವವರು ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಿದ್ದರು.

Bar & Bench

ತಿರುವನಂತಪುರದ ಪಾಳಯಂನಲ್ಲಿ ಪ್ರಾದೇಶಿಕ ಸಮ್ಮೇಳನ ನಡೆಸುವುದಕ್ಕಾಗಿ ಸಿಪಿಎಂ ಪಕ್ಷದ ಸದಸ್ಯರು ಸಾರ್ವಜನಿಕ ರಸ್ತೆಯನ್ನು ನಿರ್ಬಂಧಿಸಿದ್ದಕ್ಕೆ ಸಂಬಂಧಿಸಿದಂತೆ ಹೂಡಲಾದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ನಡೆಸಿರುವ ಕೇರಳ ಹೈಕೋರ್ಟ್‌ ಪಕ್ಷದ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಫೆಬ್ರವರಿ 12ರಂದು (ಬುಧವಾರ) ಖುದ್ದು ಹಾಜರಿರಬೇಕು ಎಂದು ಸೂಚಿಸಿದೆ [ಎನ್ ಪ್ರಕಾಶ್ ಮತ್ತು ಎಂ.ವಿ. ಗೋವಿಂದನ್ ಇನ್ನಿತರರ ನಡುವಣ ಪ್ರಕರಣ].

ರಸ್ತೆ ಮತ್ತು ರಸ್ತೆ ಬದಿಗಳಲ್ಲಿ ಸಾರ್ವಜನಿಕ ಸಭೆಗಳನ್ನು ನಿಷೇಧಿಸಿ 2010ರಲ್ಲಿ ನೀಡಿದ್ದ ತೀರ್ಪಿಗೆ ಉದ್ದೇಶಪೂರ್ವಕವಾಗಿ ಅವಿಧೇಯತೆ ತೋರಿದ ಆರೋಪಕ್ಕೆ ಸಂಬಂಧಿಸಿದಂತೆ ಎನ್ ಪ್ರಕಾಶ್ ಎಂಬುವವರು ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಿದ್ದರು.

ಫೆಬ್ರವರಿ 9ರಿಂದ 11ರವರೆಗೆ ಸಿಪಿಎಂ ತ್ರಿಶೂರ್ ಜಿಲ್ಲಾ ಸಮ್ಮೇಳನ ನಡೆಯಲಿದ್ದು ನಂತರ ನ್ಯಾಯಾಲಯಕ್ಕೆ ಹಾಜರಾಗುವುದಾಗಿ ಗೋವಿಂದನ್‌  ಮಧ್ಯಂತರ ಅರ್ಜಿ ಸಲ್ಲಿಸಿದ್ದರು.

ಮನವಿ ಪುರಸ್ಕರಿಸಿದ ನ್ಯಾಯಮೂರ್ತಿಗಳಾದ ಅನಿಲ್‌ ಕೆ ನರೇಂದ್ರನ್‌ ಮತ್ತು ಮುರಳೀ ಕೃಷ್ಣ ಎಸ್‌ ಅವರಿದ್ದ ವಿಭಾಗೀಯ ಪೀಠ ಫೆಬ್ರವರಿ 10ರಂದು (ನಾಳೆ) ಅವರ ಹಾಜರಾತಿಯನ್ನು ರದ್ದುಪಡಿಸಿತು. ಬದಲಿಗೆ ಫೆಬ್ರವರಿ 12ರಂದು ಸಂಜೆ 4 ಗಂಟೆಯೊಳಗೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ತಾಕೀತು ಮಾಡಿತು. ಇದೇ ವೇಳೆ ಪ್ರಕರಣದ ಉಳಿದ ಪ್ರತಿವಾದಿಗಳು ನಾಳೆಯೇ ಉಪಸ್ಥಿತರಿರಬೇಕು ಎಂದು ಅದು ಹೇಳಿದೆ.

ಪಾಳಯಂನಲ್ಲಿ ಪ್ರಾದೇಶಿಕ  ಸಮ್ಮೇಳನ ನಡೆಸುವುದಕ್ಕಾಗಿ ವಂಚಿಯೂರ್ ನ್ಯಾಯಾಲಯ ಸಂಕೀರ್ಣ ಮತ್ತು ಪೊಲೀಸ್ ಠಾಣೆಯ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ, ಸಿಪಿಎಂ ಸದಸ್ಯರು ವೇದಿಕೆ ನಿರ್ಮಿಸಿದ್ದಾರೆ ಎಂದು ಪ್ರಕಾಶ್‌ ದೂರಿದ್ದರು.

ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸುವುದು ಸಂವಿಧಾನದ 19(1)(ಡಿ) (ಸ್ವತಂತ್ರವಾಗಿ ಸಂಚರಿಸುವ ಹಕ್ಕು) ಮತ್ತು 21 (ಜೀವಿಸುವ ಹಕ್ಕು) ಅಡಿಯಲ್ಲಿ ನಾಗರಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಅವರು ವಾದಿಸಿದ್ದರು.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

N_Prakash_v_MV_Govindan___ors.pdf
Preview