ಅನುದಾನಿತ ಮತ್ತು ಸರ್ಕಾರಿ ಶಾಲೆಗಳಿಗೆ 2024-25ರ ಶೈಕ್ಷಣಿಕ ವರ್ಷದಲ್ಲಿ ಶನಿವಾರವನ್ನೂ ಕಡ್ಡಾಯ ಕೆಲಸದ ದಿನವನ್ನಾಗಿ ಮಾರ್ಪಡಿಸುವ ರಾಜ್ಯ ಶಿಕ್ಷಣ ಇಲಾಖೆಯ ನಿರ್ಧಾರವನ್ನು ಕೇರಳ ಹೈಕೋರ್ಟ್ ಇತ್ತೀಚೆಗೆ ರದ್ದುಗೊಳಿಸಿದೆ [ಕೇರಳ ಪ್ರದೇಶ ಶಾಲಾ ಶಿಕ್ಷಕರ ಸಂಘ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ ಇನ್ನಿತರ ಸಂಬಂಧಿತ ಪ್ರಕರಣಗಳು].
ಆ ಮೂಲಕ ಪ್ರಸಕ್ತ ಸಾಲಿನ 35 ಶನಿವಾರಗಳಲ್ಲಿ 25 ಅನ್ನು ಕೆಲಸದ ದಿನಗಳಾಗಿ ಕಡ್ಡಾಯಗೊಳಿಸುವ ಪ್ರಸಕ್ತ ಸಾಲಿನ ಶೈಕ್ಷಣಿಕ ಪಂಚಾಂಗವನ್ನು ನ್ಯಾಯಮೂರ್ತಿ ಜಿಯಾದ್ ರೆಹಮಾನ್ ಎ ಎ ಅವರು ರದ್ದುಗೊಳಿಸಿದ್ದಾರೆ.
ಭಾಗೀದಾರರೊಂದಿಗೆ ಸಮಾಲೋಚನೆ ನಡೆಸದೆ ಇರುವುದು ಮತ್ತು ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಪ್ರಭಾವದ ಮೌಲ್ಯಮಾಪನ ಮಾಡದೇ ಇರುವುದರಿಂದ ಶನಿವಾರವನ್ನು ಕೆಲಸದ ದಿನವನ್ನಾಗಿ ಮಾಡುವ ಮೂಲಕ ಶಾಲಾದಿನಗಳನ್ನು ಹೆಚ್ಚಿಸುವ ನಿರ್ಧಾರ ಸಮರ್ಥನೀಯವಲ್ಲ ಎಂದು ನ್ಯಾಯಾಲಯ ನುಡಿಯಿತು.
ಶೈಕ್ಷಣಿಕ ಅರಿವು ಎಂಬುದು ಕೇವಲ ಕಲಿಕೆಯಲ್ಲದೇ ರಾಷ್ಟ್ರೀಯ ಕೆಡೆಟ್ ಕೋರ್ (ಎನ್‌ಸಿಸಿ) ಮತ್ತು ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ರೀತಿಯ ಸಂಸ್ಥೆಗಳಲ್ಲಿ ಭಾಗವಹಿಸುವಂತೆ ಮಾಡುವ ಮೂಲಕ ಸಾಮಾಜಿಕ ಸಂವಹನ, ಮನರಂಜನಾ ಚಟುವಟಿಕೆ, ಕ್ರೀಡೆ, ಕಲೆಗಳಂತಹ ಪಠ್ಯೇತರ ಅನ್ವೇಷಣೆಯಲ್ಲಿ ಭಾಗಿಯಾಗುವಂತೆ ಮಾಡಿ ವೈಯಕ್ತಿಕ ಬೆಳವಣಿಗೆಗಳನ್ನು ಪ್ರೋತ್ಸಾಹಿಸುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.
ಪ್ರಸಕ್ತ ಸಾಲಿನ ಶೈಕ್ಷಣಿಕ ಕ್ಯಾಲೆಂಡರ್ ಬಿಡುಗಡೆ ಮಾಡುವ ಸಾಮಾನ್ಯ ಶಿಕ್ಷಣ ಇಲಾಖೆ ನಿರ್ದೇಶಕರ ಅಧಿಕಾರ ಪ್ರಶ್ನಿಸಿ ಶಿಕ್ಷಕರ ಸಂಘಗಳು, ಪೋಷಕರು ಹಾಗೂ ವಿದ್ಯಾರ್ಥಿಗಳು ಸಲ್ಲಿಸಿದ್ದ ವಿವಿಧ ರಿಟ್ ಅರ್ಜಿಗಳಿಗೆ ಸಂಬಂಧಿಸಿದಂತೆ ಈ ತೀರ್ಪು ನೀಡಲಾಯಿತು.
ಹಾಗೆ ಕೆಲಸದ ಅವಧಿಯಲ್ಲಿ ಬದಲಾವಣೆ ತರುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಮಾತ್ರ ಇದೆಯೇ ವಿನಾ ಶಿಕ್ಷಣ ಇಲಾಖೆಗೆ ಅಲ್ಲ. ಇದರಲ್ಲಿ ಶಿಕ್ಷಣ ಇಲಾಖೆ ನಿರ್ದೇಶಕರು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ನಡೆದುಕೊಂಡಿದ್ದಾರೆ ಎಂದು ಅರ್ಜಿದಾರರು ದೂರಿದ್ದರು.
ಈ ನಿರ್ಧಾರದಿಂದಾಗಿ ಪರೀಕ್ಷಾ ದಿನಗಳನ್ನು ಹೊರತುಪಡಿಸಿ ಪ್ರೌಢಶಾಲೆಗಳ ಕೆಲಸದ ದಿನಗಳು 205ರಿಂದ 220ಕ್ಕೆ ಹೆಚ್ಚಳವಾಗಿದ್ದವು, ಮಾಧ್ಯಮಿಕ ಶಾಲೆ ತರಗತಿಗಳ ಕೆಲಸದ ದಿನ 195 ದಿನಗಳಿಗೆ ಹೆಚ್ಚಳವಾಗಿತ್ತು. ಸಾಮಾನ್ಯವಾಗಿ, ರಾಜ್ಯದ ಸರ್ಕಾರಿ ಶಾಲೆಗಳಿಗೆ ಶನಿವಾರ ಮತ್ತು ಭಾನುವಾರ ರಜೆ ಇದ್ದು ವಾರದಲ್ಲಿ ಐದು ದಿನ ಕಾರ್ಯನಿರ್ವಹಿಸುತ್ತವೆ.