Playground 
ಸುದ್ದಿಗಳು

ರಜೆ ವೇಳೆ ತರಗತಿ ಮುಂದುವರಿಕೆಗೆ ಕೇರಳ ಹೈಕೋರ್ಟ್ ನಕಾರ: ಮಕ್ಕಳು ನಲಿಯಲು ಶಿಕ್ಷಣದಿಂದ ಬಿಡುವು ಬೇಕು ಎಂದ ಪೀಠ

ಹದಿನಾಲ್ಕು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ರಜೆಯ ತರಗತಿ ನಡೆಸಲು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ವ್ಯಾಪ್ತಿಯ ಶಾಲೆಗಳಿಗೆ ಅನುಮತಿ ನೀಡಿದ್ದ ಮಧ್ಯಂತರ ಆದೇಶ ವಿಸ್ತರಿಸಲು ನ್ಯಾಯಮೂರ್ತಿ ಪಿವಿ ಕುಂಞಿಕೃಷ್ಣನ್ ನಿರಾಕರಿಸಿದರು.

Bar & Bench

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ವ್ಯಾಪ್ತಿಯ ಶಾಲೆಗಳಿಗೆ 14 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ತರಗತಿ ತೆಗೆದುಕೊಳ್ಳಲು ಅನುಮತಿ ನೀಡಿದ್ದ ಮಧ್ಯಂತರ ಆದೇಶ ವಿಸ್ತರಿಸಲು ಕೇರಳ ಹೈಕೋರ್ಟ್ ಬುಧವಾರ ನಿರಾಕರಿಸಿದೆ [ಕೇರಳ ಸಿಬಿಎಸ್‌ಇ ಶಾಲಾ ನಿರ್ವಹಣಾ ಸಂಸ್ಥೆ ಮತ್ತಿತರರು ಮತ್ತುಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಯೋಗಕ್ಷೇಮಕ್ಕಾಗಿ ಇರುವ ಬೇಸಿಗೆ ರಜೆಯ ಪ್ರಾಮುಖ್ಯತೆ ಬಗ್ಗೆ ನ್ಯಾ. ಪಿ ವಿ ಕುಂಞಿಕೃಷ್ಣನ್ ಅವರಿದ್ದ ಏಕಸದಸ್ಯ ಪೀಠ ಕೆಲವು ಮಹತ್ವದ ಅವಲೋಕನಗಳನ್ನು ಮಾಡಿತು.

“ಕಠಿಣವಾದ ಶೈಕ್ಷಣಿಕ ವರ್ಷದ ಬಳಿಕ ವಿದ್ಯಾರ್ಥಿಗಳಿಗೆ ವಿರಾಮ ಬೇಕು. ಅದಕ್ಕಾಗಿಯೇ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ ನೀಡಲಾಗುತ್ತದೆ. ವಿದ್ಯಾರ್ಥಿಗಳು ರಜೆಯನ್ನು ಆನಂದಿಸಿ ತಮ್ಮ ಮುಂದಿನ ಶೈಕ್ಷಣಿಕ ವರ್ಷಕ್ಕೆ ನವ ಚೈತನ್ಯ ಪಡೆಯಬೇಕಿರುತ್ತದೆ. ರಜೆಯ ಬಿಡುವು ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕ ಅಧ್ಯಯನ ವಿಧಾನಗಳಿಂದ ತಮ್ಮ ಗಮನ ಬೇರೆಡೆಗೆ ಹರಿಸಲು ಅನುವು ಮಾಡಿಕೊಡುತ್ತದೆ. ಸಾಮಾನ್ಯವಾಗಿ ಶೈಕ್ಷಣಿಕ ವರ್ಷದಲ್ಲಿ ತೊಡಗಿಕೊಳ್ಳಲಾಗದ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಂಡು ಬೇರೆ ಆಸೆಗಳನ್ನು ಅವರು ಈಡೇರಿಸಿಕೊಳ್ಳಬಹುದಾಗಿದೆ” ಎಂದು ನ್ಯಾಯಾಲಯ ಹೇಳಿದೆ.

ಮತ್ತೊಂದು ಕಠಿಣ ಶೈಕ್ಷಣಿಕ ವರ್ಷ ಎದುರಾಗುವುದರಿಂದ ಮಕ್ಕಳು ತಮ್ಮ ಕುಟುಂಬ, ಸ್ನೇಹಿತರೊಂದಿಗೆ ವಿರಾಮದ ಸಮಯವನ್ನು ಆನಂದಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿಗಳು ನುಡಿದರು.

ಸಿಬಿಎಸ್‌ಇ ಶಾಲೆಗಳಲ್ಲಿ ರಜೆ ತರಗತಿಗಳನ್ನು ನಡೆಸಲು ಅನುಮತಿಸುವುದಕ್ಕಾಗಿ ಸಿಬಿಎಸ್‌ಇ ಪ್ರಾದೇಶಿಕ ನಿರ್ದೇಶಕರಿಗೆ ಮಧ್ಯಂತರ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ಮೇರೆಗೆ ಈ ಆದೇಶ ನೀಡಲಾಗಿದೆ.

ರಜೆ ತರಗತಿಗಳಿಗೆ ಆಕ್ಷೇಪ ವ್ಯಕ್ತಪಡಿಸಿ ಕೇರಳದ ಸಾಮಾನ್ಯ ಶಿಕ್ಷಣ ನಿರ್ದೇಶಕರು (ಡಿಜಿಇ) ಸುತ್ತೋಲೆ ಹೊರಡಿಸಿದ್ದರು. ಈ ಸುತ್ತೋಲೆಯ ವಿರುದ್ಧ ಕೇರಳ ಸಿಬಿಎಸ್‌ಇ ಶಾಲಾ ನಿರ್ವಹಣಾ ಸಂಸ್ಥೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Kerala_CBSE_School_Management_Association___Ors__v__State_of_Kerala___Ors_.pdf
Preview