Kerala Story and Kerala high court 
ಸುದ್ದಿಗಳು

ಹಿಂದೂ ಸನ್ಯಾಸಿಗಳನ್ನು ಅತ್ಯಾಚಾರಿಗಳು ಎಂದು ಬಿಂಬಿಸಿದ ಸಿನಿಮಾಗಳಿವೆ: ಕೇರಳ ಸ್ಟೋರಿ ತಡೆಗೆ ನಿರಾಕರಿಸಿದ ಹೈಕೋರ್ಟ್‌

ಟ್ರೇಲರ್‌ ವೀಕ್ಷಿಸಿದ ನ್ಯಾಯಮೂರ್ತಿಗಳಾದ ಎನ್‌ ನಗರೇಶ್‌ ಮತ್ತು ಸೋಫಿ ಥಾಮಸ್‌ ಅವರ ನೇತೃತ್ವದ ವಿಭಾಗೀಯ ಪೀಠವು ಒಟ್ಟಾರೆಯಾಗಿ ಅದರಲ್ಲಿ ಇಸ್ಲಾಂ ಅಥವಾ ಮುಸ್ಲಿಮರ ಬಗ್ಗೆ ಏನೂ ಇಲ್ಲ. ಇದು ಐಸಿಸ್‌ ಕುರಿತಾದ ಚಿತ್ರ ಎಂದಿದೆ.

Bar & Bench

ಹಿಂದಿಯ ʼದಿ ಕೇರಳ ಸ್ಟೋರಿʼ ಸಿನಿಮಾ ಬಿಡುಗಡೆಗೆ ನಿರ್ಬಂಧ ವಿಧಿಸಲು ಕೇರಳ ಹೈಕೋರ್ಟ್‌ ಶುಕ್ರವಾರ ನಿರಾಕರಿಸಿತು.

ಟ್ರೇಲರ್‌ ವೀಕ್ಷಿಸಿದ ನ್ಯಾಯಮೂರ್ತಿಗಳಾದ ಎನ್‌ ನಗರೇಶ್‌ ಮತ್ತು ಸೋಫಿ ಥಾಮಸ್‌ ಅವರ ನೇತೃತ್ವದ ವಿಭಾಗೀಯ ಪೀಠವು ಒಟ್ಟಾರೆಯಾಗಿ ಅದರಲ್ಲಿ ಇಸ್ಲಾಂ ಅಥವಾ ಮುಸ್ಲಿಮರ ಬಗ್ಗೆ ಏನೂ ಇಲ್ಲ. ಇದು ಐಸಿಸ್‌ ಕುರಿತಾದ ಚಿತ್ರ ಎಂದಿದೆ.

“ಇದರಲ್ಲಿ ಇಸ್ಲಾಂ ವಿರುದ್ಧ ಏನಿದೆ? ಧರ್ಮದ ವಿರುದ್ಧ ಯಾವುದೇ ಆರೋಪ ಇಲ್ಲ. ಐಸಿಸ್ ವಿರುದ್ಧ ಆರೋಪಗಳಿವೆ” ಎಂದು ಪೀಠ ಹೇಳಿತು. ಅಲ್ಲದೇ, “ಸಿನಿಮಾ ಟ್ರೇಲರ್ ನೋಡಿದ ಬಳಿಕ ನಿರ್ದಿಷ್ಟ ಸಮುದಾಯಕ್ಕೆ ನೋವು ಉಂಟು ಮಾಡುವ ಯಾವುದೇ ಅಂಶ ಅಲ್ಲಿಲ್ಲ. ಯಾವೊಬ್ಬ ಅರ್ಜಿದಾರರೂ ಸಿನಿಮಾ ವೀಕ್ಷಿಸಿಲ್ಲ” ಎಂದು ಆದೇಶದಲ್ಲಿ ಹೇಳಿದೆ.

ಹಲವು ಸಿನಿಮಾಗಳಲ್ಲಿ ಹಿಂದೂ ಸನ್ಯಾಸಿಗಳನ್ನು ಕಳ್ಳಸಾಗಣೆಗಾರರು ಅಥವಾ ಅತ್ಯಾಚಾರಿಗಳು ಎಂದು ಬಿಂಬಿಸಲಾಗಿದೆ. ಆಗೆಲ್ಲಾ ಏನೂ ಆಗುವುದಿಲ್ಲ. ಯಾರೂ ಪ್ರತಿಭಟಿಸುವುದಿಲ್ಲ. ಇಂಥ ಹಲವು ಹಿಂದಿ ಮತ್ತು ಮಲೆಯಾಳಂ ಸಿನಿಮಾಗಳು ಇವೆ” ಎಂದು ನ್ಯಾ. ನಗರೇಶ್‌ ಅವರು ಮೌಖಿಕವಾಗಿ ಹೇಳಿದರು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ದುಷ್ಯಂತ್‌ ದವೆ ಅವರು “ಒಂದು ತಪ್ಪಿಗೆ ಸಮ್ಮತಿಸಲಾಗಿದೆ ಎಂದ ಮಾತ್ರಕ್ಕೆ ಮತ್ತೊಂದಕ್ಕೂ ಅವಕಾಶ ನೀಡಬಾರದು” ಎಂದರು. ಇದಕ್ಕೆ ಪೀಠವು “ನೀವು ಕೊನೆ ಗಳಿಗೆಯಲ್ಲಿ ಬಂದಿದ್ದೀರಿ” ಎಂದಿತು.

ಅಂತಿಮವಾಗಿ ಪೀಠವು “ಸಿಬಿಎಫ್‌ಸಿ ಮಾರ್ಗಸೂಚಿಯ ಪ್ರಕಾರ ಮಂಡಳಿಯು ಸಿನಿಮಾವನ್ನು ಪರಿಶೀಲಿಸಿ, ಪರಿಗಣಿಸಿದೆ. ಸಿನಿಮಾದ ನಿರ್ಮಾಪಕರು ಚಿತ್ರವು ಕಾಲ್ಪನಿಕ ಎಂದು ನಿರಾಕರಣೆ ಅಳವಡಿಸಿದ್ದಾರೆ. ಸಿನಿಮಾ ಪ್ರದರ್ಶನ ನಿರ್ಬಂಧಿಸಿ ಮಧ್ಯಂತರ ಆದೇಶ ಮಾಡುವ ಉದ್ದೇಶವನ್ನು ನ್ಯಾಯಾಲಯ ಹೊಂದಿಲ್ಲ” ಎಂದಿತು.