ಕೋವಿಡ್ ಸಾಂಕ್ರಾಮಿಕದಿಂದಾಗಿ ಚೀನಾ ವೈದ್ಯಕೀಯ ವಿಶ್ವವಿದ್ಯಾಲಯಗಳಿಗೆ ತೆರಳಿ ಅಧ್ಯಯನ ಮಾಡಲಾಗದ ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳು ಅಲ್ಲಿಗೆ ಮರಳುವವರೆಗೆ, ತಾತ್ಕಾಲಿಕವಾಗಿ ಭಾರತೀಯ ವೈದ್ಯಕೀಯ ಕಾಲೇಜುಗಳಲ್ಲಿ ತರಗತಿಗಳಿಗೆ ಹಾಜರಾಗಲು ಅನುಮತಿ ನೀಡುವಂತೆ ಕೋರಿರುವ ಮನವಿಗೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್ ಇತ್ತೀಚೆಗೆ ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‌ಎಂಸಿ) ಅಭಿಪ್ರಾಯ ಕೇಳಿದೆ [ವಿದೇಶಿ ವೈದ್ಯಕೀಯ ವಿದ್ಯಾರ್ಥಿಗಳ ಪೋಷಕ ಸಂಘ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ವಕೀಲರು, ಅರ್ಜಿದಾರರು ಚೀನಾಕ್ಕೆ ಮರಳಲು ಸಾಧ್ಯವಾಗುವವರೆಗೆ ತಾತ್ಕಾಲಿಕ ಕ್ರಮವಾಗಿ ವೈದ್ಯಕೀಯ ಕಾಲೇಜುಗಳಲ್ಲಿ ತರಗತಿಗಳಿಗೆ ಹಾಜರಾಗಲು ವಿದ್ಯಾರ್ಥಿಗಳಿಗೆ ಅನುಮತಿ ನೀಡಬಹುದೇ ಎಂಬ ಬಗ್ಗೆ ಆಯೋಗದ ನಿಲುವೇನು ಎಂಬ ಕುರಿತು ಎನ್‌ಎಂಸಿಯ ಜವಾಬ್ದಾರಿಯುತ ಅಧಿಕಾರಿಯೊಬ್ಬರು ಅಫಿಡವಿಟ್ ಸಲ್ಲಿಸಬೇಕು ಎಂದು ನ್ಯಾಯಮೂರ್ತಿ ವಿ ಜಿ ಅರುಣ್ ಸೂಚಿಸಿದ್ದಾರೆ.
ವಿದೇಶದಲ್ಲಿ, ಅದರಲ್ಲಿಯೂ ಚೀನಾದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಭಾರತೀಯ ವಿದ್ಯಾರ್ಥಿಗಳ ಯೋಗಕ್ಷೇಮಕ್ಕಾಗಿ ರೂಪಿಸಲಾದ ನೋಂದಾಯಿತ ಸಂಸ್ಥೆಯಾದ ವಿದೇಶಿ ವೈದ್ಯಕೀಯ ವಿದ್ಯಾರ್ಥಿಗಳ ಪೋಷಕರ ಸಂಘ ಸಲ್ಲಿಸಿದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
ಕೋವಿಡ್‌ನಿಂದಾಗಿ 2020 ರ ಆರಂಭದಲ್ಲಿ 90 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾರತಕ್ಕೆ ಮರಳುವಂತಾಗಿತ್ತು. ಸಾಂಕ್ರಾಮಿಕ ರೋಗ ಶೂನ್ಯ ಸ್ಥಿತಿಗೆ ಬರುವವರೆಗೆ ಚೀನಾ ಸರ್ಕಾರ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ತನ್ನ ವಿವಿಗಳಲ್ಲಿ ಅವಕಾಶ ಕಲ್ಪಿಸುವುದು ಅಸಂಭವದ ಮಾತಾಗಿದೆ. ಭಾರತೀಯ ವೈದ್ಯಕೀಯ ಕಾಲೇಜುಗಳಿಗೆ ಸಮನಾದ ಸೌಲಭ್ಯಗಳನ್ನು ಪಡೆದ ಮತ್ತು ಎನ್‌ಎಂಸಿ ಅನುಮೋದಿಸಿರುವ ಚೀನಾದ ವಿವಿಗಳಲ್ಲಿ ವಿದ್ಯಾರ್ಥಿಗಳು ಪದವಿ ಪಡೆಯುತ್ತಿದ್ದಾರೆ ಎಂದು ಅರ್ಜಿ ವಿವರಿಸಿದೆ.
ಅವರು ಭಾರತಕ್ಕೆ ಮರಳಿದಾಗಿನಿಂದಲೂ ಆನ್‌ಲೈನ್ ತರಗತಿಗಳಿಗೆ ಹಾಜರಾಗುತ್ತಿದ್ದು ಪ್ರಾಯೋಗಿಕ ತರಗತಿಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಭಾರತೀಯ ವೈದ್ಯಕೀಯ ಕಾಲೇಜುಗಳಲ್ಲಿ ಈ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಗತಿಗೆ ಹಾಜರಾಗಲು ಅನುವು ಮಾಡಿಕೊಡಬೇಕು ಎಂದು ಕೋರಲಾಗಿದೆ.
ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್ 29ಕ್ಕೆ ನಿಗದಿಯಾಗಿದ್ದು ಅಷ್ಟರೊಳಗೆ ಎನ್‌ಎಂಸಿ ಅಫಿಡವಿಟ್ ಸಲ್ಲಿಸುವ ನಿರೀಕ್ಷೆ ಇದೆ.