Suresh Gopi and Kerala High Court facebook
ಸುದ್ದಿಗಳು

ಲೋಕಸಭೆಗೆ ಆಯ್ಕೆ ಪ್ರಶ್ನಿಸಿದ್ದ ಅರ್ಜಿ: ಕೇಂದ್ರ ಸಚಿವ ಸುರೇಶ್ ಗೋಪಿ ಪ್ರತಿಕ್ರಿಯೆ ಕೇಳಿದ ಕೇರಳ ಹೈಕೋರ್ಟ್

ನವೆಂಬರ್ 22ರೊಳಗೆ ಸಮನ್ಸ್‌ಗೆ ಪ್ರತಿಕ್ರಿಯೆ ನೀಡುವಂತೆ ಗೋಪಿ ಅವರಿಗೆ ನ್ಯಾಯಮೂರ್ತಿ ಕೌಸರ್ ಎಡಪ್ಪಾಗತ್ ಅವರು ಸೂಚಿಸಿದರು.

Bar & Bench

ಕಳೆದ ಲೋಕಸಭಾ ಚುನಾವಣೆ ವೇಳೆ ತ್ರಿಶೂರ್ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸಚಿವ, ನಟ ಹಾಗೂ ಕೇರಳದ ಏಕೈಕ ಬಿಜೆಪಿ ಸಂಸದ ಸುರೇಶ್ ಗೋಪಿ ಅವರಿಗೆ ಕೇರಳ ಹೈಕೋರ್ಟ್ ಬುಧವಾರ ನೋಟಿಸ್ ಜಾರಿ ಮಾಡಿದೆ. [ಬಿನೋಯ್ ಎಎಸ್  ಮತ್ತು ಸುರೇಶ್ ಗೋಪಿ ನಡುವಣ ಪ್ರಕರಣ]

ನವೆಂಬರ್ 22ರೊಳಗೆ ಸಮನ್ಸ್‌ಗೆ ಪ್ರತಿಕ್ರಿಯೆ ನೀಡುವಂತೆ ಗೋಪಿ ಅವರಿಗೆ ನ್ಯಾಯಮೂರ್ತಿ ಕೌಸರ್ ಎಡಪ್ಪಾಗತ್ ಸೂಚಿಸಿದರು.

ಗೋಪಿ ಅವರ ಗೆಲುವು ಪ್ರಕಟಿಸಿದ ಚುನಾವಣಾ ಫಲಿತಾಂಶ ಪ್ರಶ್ನಿಸಿ ಅಖಿಲ ಭಾರತ ಯುವ ಒಕ್ಕೂಟದ (ಎಐವೈಎಫ್‌) ನಾಯಕ ಮತ್ತು ತ್ರಿಶೂರ್ ಕ್ಷೇತ್ರದ ಮತದಾರನಾಗಿರುವ ಬಿನೋಯ್ ಎ ಎಸ್, ಅವರು ಅರ್ಜಿ ಸಲ್ಲಿಸಿದ್ದರು.

ಗೋಪಿ ಅವರ ಚುನಾವಣಾ ಏಜೆಂಟರು ಭ್ರಷ್ಟಾಚಾರದಲ್ಲಿ ತೊಡಗಿದ್ದು ಪ್ರಜಾಪ್ರತಿನಿಧಿ ಕಾಯಿದೆ, 1951ರ ಸೆಕ್ಷನ್ 123ರ ಅಡಿ ಇದು ಅಪರಾಧ ಎಂದು ಅರ್ಜಿಯಲ್ಲಿ ಆಕ್ಷೇಪಿಸಿದ್ದರು.

ಏಪ್ರಿಲ್ 26ರ ಮತದಾನದ ದಿನಾಂಕದವರೆಗೆ ಚುನಾವಣಾ ಪ್ರಚಾರದ ಸಮಯದಲ್ಲಿ, ಗೋಪಿ, ಅವರ ಚುನಾವಣಾ ಏಜೆಂಟ್ ಮತ್ತು ಸಹಚರರು ಪ್ರಜಾಪ್ರತಿನಿಧಿ ಕಾಯ್ದೆ, 1951 ರ ಸೆಕ್ಷನ್ 123 ರ ಅಡಿಯಲ್ಲಿ ವ್ಯಾಖ್ಯಾನಿಸಿದಂತೆ ವಿವಿಧ ಭ್ರಷ್ಟ ಆಚರಣೆಗಳಲ್ಲಿ ತೊಡಗಿದ್ದರು ಎಂದು ಬಿನೊಯ್ ಹೇಳಿಕೊಂಡಿದ್ದಾರೆ.

ಲಂಚ, ಅನಗತ್ಯ ಪ್ರಭಾವ, ಧರ್ಮ, ಜಾತಿ ಅಥವಾ ಭಾಷೆಯ ಆಧಾರದ ಮೇಲೆ ವಿವಿಧ ವರ್ಗದ ನಾಗರಿಕರ ನಡುವೆ ದ್ವೇಷಕ್ಕೆ ಕುಮ್ಮಕ್ಕು ನೀಡುವುದು ಹಾಗೂ ಮತಗಳಿಕೆಗಾಗಿ ಧಾರ್ಮಿಕ ಮನವಿ ಮಾಡುವುದು ಸೇರಿದಂತೆ ಭಾರತದಲ್ಲಿ ಚುನಾವಣೆ ವೇಳೆ ಭ್ರಷ್ಟ ನಡೆ ಎಂದು ಪರಿಗಣಿಸಲಾದ ಕಾರ್ಯಗಳು ನಡೆದಿದ್ದರೆ ಅಂತಹವರನ್ನು ಪ್ರಜಾಪ್ರತಿನಿಧಿ ಕಾಯಿದೆ, 1951 ರ ಸೆಕ್ಷನ್ 123 ಅನರ್ಹಗೊಳಿಸುತ್ತದೆ.

ಗೋಪಿ ಅವರು ಧಾರ್ಮಿಕ ಚಿಹ್ನೆಗಳನ್ನು ದುರುಪಯೋಗಪಡಿಸಿಕೊಂಡಿದ್ದಲ್ಲದೆ ಮತ ನೀಡಿದರೆ ಮೊಬೈಲ್‌ ಫೋನ್‌ ಸೇರಿದಂತೆ ಉಡುಗೊರೆಗಳ ಭರವಸೆ ನೀಡಿದ್ದಾರೆ ಈ ಹಿನ್ನೆಲೆಯಲ್ಲಿ ಗೋಪಿ ಅವರ ಚುನಾವಣೆಯನ್ನು ಅನೂರ್ಜಿತಗೊಳಿಸಬೇಕು ಎಂದಿರುವ ಅರ್ಜಿದಾರ ಇದಕ್ಕೆ ಸಂಬಂಧಿಸಿದ ವಿಡಿಯೋ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.