Nipun Cherian and Kerala High Court
Nipun Cherian and Kerala High Court Linkedin
ಸುದ್ದಿಗಳು

ನ್ಯಾಯಮೂರ್ತಿ ವಿರುದ್ಧ ಹೇಳಿಕೆ: ʼವಿ4 ಕೊಚ್ಚಿʼ ಅಧ್ಯಕ್ಷನಿಗೆ 4 ತಿಂಗಳ ಜೈಲು ಶಿಕ್ಷೆ ವಿಧಿಸಿದ ಕೇರಳ ಹೈಕೋರ್ಟ್

Bar & Bench

ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ ಹಿನ್ನೆಲೆಯಲ್ಲಿ 'ವಿ4 ಕೊಚ್ಚಿ' ಸಂಘಟನೆಯ ಅಧ್ಯಕ್ಷ ನಿಪುಣ್‌ ಚೆರಿಯನ್ ಅವರು ನ್ಯಾಯಾಂಗ ನಿಂದನೆಗಾಗಿ ಕೇರಳ ಉಚ್ಚ ನ್ಯಾಯಾಲಯ ಗುರುವಾರ ನಾಲ್ಕು ತಿಂಗಳ ಜೈಲು ಶಿಕ್ಷೆ ಮತ್ತು ₹ 2,000 ದಂಡ ವಿಧಿಸಿದೆ [ನ್ಯಾಯಾಲಯ ದಾಖಲಿಸಿಕೊಂಡಿದ್ದ ಸ್ವಯಂ ಪ್ರೇರಿತ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಮತ್ತು ನಿಪುಣ್‌ ಚೇರಿಯನ್‌ ನಡುವಣ ಪ್ರಕರಣ].

ಫೇಸ್‌ಬುಕ್‌ನ ವಿ4 ಕೊಚ್ಚಿ ಪುಟದಲ್ಲಿ ಈ ಆರೋಪ ಮಾಡಿದ್ದ ಚೆರಿಯನ್ ವಿರುದ್ಧ ಸ್ವಯಂ ಪ್ರೇರಿತ ಕ್ರಿಮಿನಲ್ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಲಾಗಿತ್ತು.

ಚೆರಿಯನ್ ಅವರನ್ನು ಕ್ರಿಮಿನಲ್ ನ್ಯಾಯಾಂಗ ನಿಂದನೆಯ ತಪ್ಪಿತಸ್ಥರೆಂದು ನ್ಯಾಯಮೂರ್ತಿಗಳಾದ ಎ ಕೆ ಜಯಶಂಕರನ್ ನಂಬಿಯಾರ್ ಮತ್ತು ನ್ಯಾಯಮೂರ್ತಿ ಮೊಹಮ್ಮದ್ ನಿಯಾಸ್ ಸಿ  ಪಿ ಅವರನ್ನೊಳಗೊಂಡ ವಿಭಾಗೀಯ ಪೀಠ ಪರಿಗಣಿಸಿತು. ಜೊತೆಗೆ ಚೆರಿಯನ್‌ ವಿರುದ್ಧದ ಆರೋಪ ಸಾಬೀತಾಗಿದೆ, ಏಕೆಂದರೆ ಅವರು ತಮ್ಮ ಆರೋಪ ಸಮರ್ಥಿಸಲು ಕೇವಲ ಹೇಳಿಕೆ- ಕೇಳಿಕೆ ಮಾತುಗಳನ್ನಷ್ಟೇ ಅವಲಂಬಿಸಿದ್ದಾರೆ ಎಂದು ಅದು ನುಡಿಯಿತು.

ನ್ಯಾಯಾಲಯದ ವಿರುದ್ಧ ನ್ಯಾಯಯುತ ಮತ್ತು ಸಮತೋಲಿತ ಟೀಕೆಗಳನ್ನು ಮಾಡಿದರೆ ಅದು ಎಷ್ಟೇ ಕಟುವಾಗಿದ್ದರೂ ಕೂಡ ಅದರ ವಿರುದ್ಧ ನ್ಯಾಯಾಲಯಕ್ರಮ ಕೈಗೊಳ್ಳದೇ ಇರಬಹುದು. ನ್ಯಾಯಾಲಯವನ್ನು ತಿರಸ್ಕಾರ ಅಥವಾ ದ್ವೇಷಕ್ಕೆ ಈಡು ಮಾಡುವ ಮೂಲಕ ನ್ಯಾಯಾಂಗದಲ್ಲಿ ಜನರ ವಿಶ್ವಾಸ ತಗ್ಗುವಂತೆ ಮಾಡುವ ಆರೋಪಗಳನ್ನು ನ್ಯಾಯಾಂಗದ ಘನತೆ ಎತ್ತಿಹಿಡಿಯುವುದಕ್ಕಾಗಿ ನ್ಯಾಯಾಂಗ ನಿಂದನೆ ವ್ಯಾಪ್ತಿಗೆ ತರಬೇಕಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಸಿತು.  

ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಚೆರಿಯನ್ ಅವರ ನಡವಳಿಕೆಯು ದುರಹಂಕಾರ ಮತ್ತು ಹಠಮಾರಿತನದಿಂದ ಕೂಡಿತ್ತು. ಆದ್ದರಿಂದ ಅವರು ಯಾವುದೇ ದಯೆಗೆ ಅರ್ಹರಲ್ಲ ಎಂದು ನ್ಯಾಯಾಲಯ ತಿಳಿಸಿತು.