ಕರ್ನಾಟಕಕ್ಕೆ ಹೊಂದಿಕೊಂಡಂತಿರುವ ಕೇರಳದ ವಯನಾಡ್ ಜಿಲ್ಲೆಯಲ್ಲಿ 2024ರಲ್ಲಿ ಸಂಭವಿಸಿದ ಭೂಕುಸಿತದ ಸಂತ್ರಸ್ತರ ಸಾಲ ವಸೂಲಾತಿ ಮಾಡದಂತೆ ವಿವಿಧ ಬ್ಯಾಂಕ್‌ಗಳಿಗೆ ಕೇರಳ ಹೈಕೋರ್ಟ್ ಬುಧವಾರ ತಡೆ ನೀಡಿದೆ [ಕೇರಳದಲ್ಲಿ ನೈಸರ್ಗಿಕ ವಿಕೋಪಗಳ ತಡೆ ಮತ್ತು ನಿರ್ವಹಣೆ ಕುರಿತ ಸ್ವಯಂ ಪ್ರೇರಿತ ಪ್ರಕರಣ].
ಕೇಂದ್ರ ಸರ್ಕಾರ ಸಾಲಮನ್ನಾಕ್ಕೆ ನಿರಾಕರಿಸಿದ ಬೆನ್ನಲ್ಲೇ ನ್ಯಾಯಮೂರ್ತಿಗಳಾದ ಎ ಕೆ ಜಯಶಂಕರನ್ ನಂಬಿಯಾರ್ ಮತ್ತು ಜೋಬಿನ್ ಸೆಬಾಸ್ಟಿಯನ್ ಅವರಿದ್ದ ವಿಭಾಗೀಯ ಪೀಠ ಸಾಲ ವಸೂಲಾತಿ ಪ್ರಕ್ರಿಯೆಗೆ ತಡೆ ನೀಡಿದೆ. ವಯನಾಡು ಭೂಕುಸಿತ ಸಂತ್ರಸ್ತರ ಪುನರ್ವಸತಿ ಪ್ರಯತ್ನಗಳನ್ನು ಮೇಲ್ವಿಚಾರಣೆ ಮಾಡಲು ಪೀಠ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿತ್ತು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಫೆಡರಲ್ ಬ್ಯಾಂಕ್ ಹಾಗೂ ಕೇರಳ ಗ್ರಾಮೀಣ ಬ್ಯಾಂಕ್ ಸೇರಿದಂತೆ 12 ಪ್ರಮುಖ ಬ್ಯಾಂಕ್‌ಗಳನ್ನು ಕೂಡ ಪ್ರತಿವಾದಿಗಳನ್ನಾಗಿ ಮಾಡಿದ ನ್ಯಾಯಾಲಯ ಅವು ಸಾಲವನ್ನು ಭಾಗಶಃ ಅಥವಾ ಸಂಪೂರ್ಣ ಮನ್ನಾ ಮಾಡಲು ಸಿದ್ಧ ಇವೆಯೇ ಎಂಬ ಕುರಿತು ಅಫಿಡವಿಟ್ ಸಲ್ಲಿಸುವಂತೆ ನಿರ್ದೇಶಿಸಿತು.
ಸಾಲ ವಸೂಲಾತಿ ಪ್ರಕ್ರಿಯೆ ಕುರಿತು ಬ್ಯಾಂಕ್‌ಗಳಿಂದ ಸೂಕ್ತ ಸಮರ್ಥನೆ ದೊರೆತ ನಂತರ ಬ್ಯಾಂಕ್‌ಗಳಿಗೆ ಈಗ ವಿಧಿಸಿರುವ ತಡೆಯಾಜ್ಞೆ ಬದಲಿಸಲಾಗುವುದು ಎಂದು ಪೀಠ ತಿಳಿಸಿತು.
ಸಂವಿಧಾನದ ಮೂಲಭೂತ ಲಕ್ಷಣ ಎಂದು ಗುರುತಿಸಲಾದ ಕಾನೂನಾತ್ಮಕ ಆಡಳಿತದ ಪ್ರಮುಖ ಲಕ್ಷಣಗಳಲ್ಲಿ ನ್ಯಾಯಸಮ್ಮತತೆ ಕೂಡ ಒಂದಾಗಿದ್ದು ಭೂ ಕುಸಿತ ಸಂತ್ರಸ್ತರು ತಮ್ಮ ಜೀವನವನ್ನು ಸಾಮಾನ್ಯ ಸ್ಥಿತಿಗೆ ತರಲು ಹೆಣಗಾಡುತ್ತಿರುವಾಗ ಸಂಬಂಧಪಟ್ಟ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳು ಅವರ ಮೂಲಭೂತ ಹಕ್ಕುಗಳ ಮೇಲೆ ಒರಟು ಸವಾರಿ ಮಾಡಲು ಅನುಮತಿಸಲಾಗದು ಎಂದು ನ್ಯಾಯಾಲಯ ವಿವರಿಸಿತು.
ನೈಸರ್ಗಿಕ ವಿಕೋಪಗಳಿಂದ ಪೀಡಿತ ಪ್ರದೇಶಗಳಲ್ಲಿ ಬ್ಯಾಂಕುಗಳಿಂದ ಪರಿಹಾರ ಕ್ರಮಗಳ ಕುರಿತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಸ್ಟರ್ ನಿರ್ದೇಶನಗಳ (2018) ಪ್ರಕಾರ ಸಾಲ ಮನ್ನಾಕ್ಕೆ ಯಾವುದೇ ಅವಕಾಶವಿಲ್ಲ ಎಂದು ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಸಿತ್ತು. ಸಾರ್ವಜನಿಕ ವಲಯದ ಬ್ಯಾಂಕುಗಳು ಸ್ವತಂತ್ರ ವಾಣಿಜ್ಯ ಸಂಸ್ಥೆಗಳಾಗಿದ್ದು, ಅವುಗಳು ತಮ್ಮ ಷೇರುದಾರರಿಗೆ ಹೊಣೆಗಾರವಾಗಿರುತ್ತವೆ ಮತ್ತು ಕೇಂದ್ರ ಸರ್ಕಾರ ಅವುಗಳ ವಾಣಿಜ್ಯ ನಿರ್ಧಾರಗಳಲ್ಲಿ ಹಸ್ತಕ್ಷೇಪ ಮಾಡಲಾಗದು ಎಂದು ಅಫಿಡವಿಟ್‌ನಲ್ಲಿ ಹೇಳಲಾಗಿತ್ತು.
ಆದರೆ ಈ ನಿಲುವನ್ನು ತಿರಸ್ಕರಿಸಿದ ನ್ಯಾಯಾಲಯ ನೈಸರ್ಗಿಕ ವಿಕೋಪಗಳಂತಹ ಅಸಾಧಾರಣ ಸಂದರ್ಭಗಳಲ್ಲಿ, ಅದರಲ್ಲಿಯೂ ನಾಗರಿಕರ ಜೀವ ಮತ್ತು ಘನತೆಗೆ ಅಪಾಯ ಎದುರಾಗಿದ್ದಾಗ, ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಲು ಸಂವಿಧಾನದ 73 ನೇ ವಿಧಿ ಅಧಿಕಾರ ನೀಡುತ್ತದೆ ಎಂದಿತು.
2005ರ ವಿಪತ್ತು ನಿರ್ವಹಣಾ ಕಾಯಿದೆಯಡಿ ವಯನಾಡ್ ಭೂಕುಸಿತವನ್ನು 'ತೀವ್ರ' ವಿಪತ್ತು ಎಂದು ಘೋಷಿಸಿದ್ದರೂ, ಕೇಂದ್ರ ಸರ್ಕಾರ ಸಾಲ ಮನ್ನಾ ರೂಪದಲ್ಲಿ ಸಂತ್ರಸ್ತರಿಗೆ ಆರ್ಥಿಕ ಪರಿಹಾರವನ್ನು ನೀಡಲು ಇಚ್ಛಿಸಿಲ್ಲ. ಆದರೆ ಬೇರೆ ರಾಜ್ಯಗಳಲ್ಲಿ ಇದೇ ಬಗೆಯ ನೆರವನ್ನು ಕೇಂದ್ರ ನೀಡಿತ್ತು ಎಂದು ನ್ಯಾಯಾಲಯ ಹೇಳಿದೆ.
ಅಧಿಕಾರ ಪ್ರತ್ಯೇಕತೆಯ ತತ್ವದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ತಾನು ನಿರ್ದೇಶನ ನೀಡಲು ಹೋಗುವುದಿಲ್ಲ ಎಂದ ನ್ಯಾಯಾಲಯ ಅಸಮಾನವಾಗಿ ನಡೆದುಕೊಂಡ ಕೇಂದ್ರವನ್ನು ಟೀಕಿಸಿತು. ನಾಗರಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸುವ ಕರ್ತವ್ಯವನ್ನು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸೇರಿದಂತೆ 'ಪ್ರಭುತ್ವದ'ದ ಮೇಲೆ ವಿಧಿಸಿರುವ ಸಂವಿಧಾನದ ಭಾಗ III ಅನ್ನು ನೆನಪಿಸಿತು.
ಪ್ರಜಾಪ್ರಭುತ್ವ ಗಣರಾಜ್ಯದಲ್ಲಿ ಜನರ ಮೂಲಭೂತ ಹಕ್ಕುಗಳ ರಕ್ಷಣೆಯ ಸಾಂವಿಧಾನಿಕ ಖಾತರಿಯನ್ನು ಪಕ್ಷ ರಾಜಕಾರಣ ನಿರಾಕರಿಸುವಂತಿಲ್ಲ.ಕೇರಳ ಹೈಕೋರ್ಟ್
ಕೇಂದ್ರ ಸರ್ಕಾರ ಯಾವುದೇ ನಿರ್ದಿಷ್ಟ ರಾಜ್ಯದ ನಾಗರಿಕರಿಗೆ ಭೇದಭಾವ ಮಾಡುವಂತಿಲ್ಲ ಎಂದು ಸಂವಿಧಾನದಡಿ ರೂಪಿಸಲಾದ ಒಕ್ಕೂಟ ತತ್ವ ಹೇಳುತ್ತದೆ. ಪ್ರಜಾಪ್ರಭುತ್ವ ಗಣರಾಜ್ಯದಲ್ಲಿ ಜನರ ಮೂಲಭೂತ ಹಕ್ಕುಗಳ ರಕ್ಷಣೆ ಎಂಬ ಸಂವಿಧಾನಾತ್ಮಕ ಭರವಸೆಯನ್ನು ಪಕ್ಷ ರಾಜಕಾರಣ ಮಸುಕಾಗಿಸುವಂತಿಲ್ಲ. ಪ್ರಸ್ತುತ ಪ್ರಕರಣದಲ್ಲಿ ವಯನಾಡಿನ ಭೂಕುಸಿತ ಸಂತ್ರಸ್ತರ ಘನತೆಯಿಂದ ಬದುಕುವ ಮೂಲಭೂತ ಹಕ್ಕು ಅಪಾಯದಲ್ಲಿದೆ " ಎಂದು ಪೀಠ ನುಡಿಯಿತು.
ಅದರಂತೆ, ಭೂಕುಸಿತ ಸಂತ್ರಸ್ತರ ವಿರುದ್ಧ ಬ್ಯಾಂಕುಗಳು ಆರಂಭಿಸಿರುವ ಎಲ್ಲಾ ವಸೂಲಾತಿ ಕ್ರಮಗಳನ್ನು ಅರ್ಜಿ ವಿಲೇವಾರಿಯಾಗುವವರೆಗೆ ರದ್ದುಗೊಳಿಸಿತು. ಎರಡು ವಾರಗಳ ಬಳಿಕ ಅದು ಪ್ರಕರಣ ಆಲಿಸಲಿದೆ.