
ಕೇರಳದ ವಯನಾಡ್‌ನಲ್ಲಿ 2024ರ ಭೂಕುಸಿತದಿಂದ ಹಾನಿಗೊಳಗಾದವರ ಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರ ನಿರಾಕರಿಸಿದ ಬಗ್ಗೆ ಕೇರಳ ಹೈಕೋರ್ಟ್ ಬುಧವಾರ ಕೆಂಡಾಮಂಡಲವಾಯಿತು.
ಕೇಂದ್ರ ಸರ್ಕಾರ ಕೇರಳದ ಜನರನ್ನು ಮಣಿಸಿದ್ದು ಕೇಂದ್ರದ ದಯೆ ಇಲ್ಲದೆಯೂ ರಾಜ್ಯಕ್ಕೆ ಬದುಕುವುದು ಗೊತ್ತಿದೆ ಎಂದು ನ್ಯಾಯಮೂರ್ತಿಗಳಾದ ಎ ಕೆ ಜಯಶಂಕರನ್ ನಂಬಿಯಾರ್ ಮತ್ತು ನ್ಯಾಯಮೂರ್ತಿ ಜೋಬಿನ್ ಸೆಬಾಸ್ಟಿಯನ್ ಅವರಿದ್ದ ವಿಭಾಗೀಯ ಪೀಠ ಗುಡುಗಿತು.
"ಕೇಂದ್ರ ಸರ್ಕಾರ ಕೇರಳದ ಜನತೆಯನ್ನು ಹತಾಶಗೊಳಿಸಿದೆ ಎಂಬುದನ್ನು ಅದಕ್ಕೆ ದಯವಿಟ್ಟು ತಿಳಿಸಿ. ಕೇಂದ್ರ ಸರ್ಕಾರವು ಕ್ರಮ ಕೈಗೊಳ್ಳಲು ಅಸಹಾಯಕವಾಗಿರುವಂತಹ ಸನ್ನಿವೇಶ ಇದಲ್ಲ ಎಂದು ನಾವು ಸ್ಪಷ್ಟವಾಗಿ ಹೇಳಿದ್ದೇವೆ. ನೀವು ಅಧಿಕಾರ ವಾದದ ಹಿಂದೆ ಅಡಗಿಕೊಂಡಿದ್ದೀರಿ ಎಂಬುದನ್ನು ನಿಮ್ಮ ಅಫಿಡವಿಟ್ ಹೇಳುತ್ತಿದೆ. ಕಾರ್ಯನಿರ್ವಹಿಸಲು ನಿಮಗೆ ಅಧಿಕಾರವಿಲ್ಲ ಎಂದು ನೀವು ಹೇಳುತ್ತಿದ್ದೀರಿ. ಏಕೆ ಹೀಗೆ ಮಾಡಲಾಗುತ್ತಿದೆ?” ಎಂದು ನ್ಯಾಯಪೀಠವು ಕೇಂದ್ರಕ್ಕೆ ಕಠಿಣವಾಗಿ ಹೇಳಿತು.
ವಯನಾಡು ಭೂಕುಸಿತ ಸಂತ್ರಸ್ತರ ಪುನರ್ವಸತಿ ಪ್ರಯತ್ನಗಳನ್ನು ಮೇಲ್ವಿಚಾರಣೆ ಮಾಡಲು ಪೀಠ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ವೇಳೆ ಸಂತ್ರಸ್ತರ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ ಎಂಬ ಕೇಂದ್ರ ಸರ್ಕಾರದ ವಾದವನ್ನು ಉಲ್ಲೇಖಿಸಿದ ನ್ಯಾಯಾಲಯ ಕೇಂದ್ರದ ಈ ನಿಲುವು ಅಧಿಕಾರಶಾಹಿಯ ಪ್ರಲಾಪವಲ್ಲದೇ ಬೇರೇನೂ ಅಲ್ಲ ಎಂದು ಕಿಡಿಕಾರಿತು. ಕೇಂದ್ರ ಸರ್ಕಾರಕ್ಕೆ ಕೆಲಸ ಮಾಡಲು ಇಷ್ಟ ಇಲ್ಲ ಎಂದರೆ ಅದನ್ನಾದರೂ ಧೈರ್ಯವಾಗಿ ಹೇಳಲಿ. ನೀವು ಯಾರನ್ನು ಮೂರ್ಖರನ್ನು ಮಾಡಲು ಹೊರಟಿದ್ದೀರಿ ಎಂದು ಪೀಠವು ಪ್ರಶ್ನಿಸಿತು.
ಕೇಂದ್ರ ಸರ್ಕಾರ ಕಾನೂನಿನ ತಾಂತ್ರಿಕತೆ ಹಿಂದೆ ಅವಿತಿಟ್ಟುಕೊಳ್ಳುವ ಬದಲು ಜನರಿಗೆ ಸಹಾಯ ಮಾಡಲಾಗದು ಎಂಬುದನ್ನು ಬಹಿರಂಗವಾಗಿ ಹೇಳಬೇಕು ಎಂದು ನ್ಯಾಯಾಲಯ ಅತೃಪ್ತಿ ವ್ಯಕ್ತಪಡಿಸಿತು.
ತೀವ್ರ ವಿಪತ್ತು ವರ್ಗದಡಿ ಬರದಿದ್ದರೂ 2024ರಲ್ಲಿ ಪ್ರವಾಹಕ್ಕೆ ತುತ್ತಾಗಿದ್ದ ಅಸ್ಸಾಂ ಮತ್ತು ಗುಜರಾತ್‌ಗೆ ಕೇಂದ್ರ ಸರ್ಕಾರ ನೀಡಿದ್ದ ಭರಪೂರ ನೆರವನ್ನು ವಿವರಿಸುವ ಪತ್ರಿಕಾ ವರದಿಗಳನ್ನು ನ್ಯಾಯಾಲಯ ಓದಿ ಹೇಳಿತು.
ಕೇರಳ ರಾಜ್ಯಕ್ಕೆ ಕೇಂದ್ರ ಸರ್ಕಾರದ ದಯೆ ಬೇಕಿಲ್ಲ. ನ್ಯಾಯಾಲಯವು ಸಂವಿಧಾನವನ್ನು ಗೌರವಿಸುತ್ತದೆ ಮತ್ತು ತನ್ನನ್ನು ತಾನು ಭಾರತದ ಒಕ್ಕೂಟದ ಅವಿಭಾಜ್ಯ ಅಂಗವೆಂದು ಪರಿಗಣಿಸಸಲಾಗುವುದು. ಹೀಗಾಗಿ ಕೇಂದ್ರಕ್ಕೆ ಇನ್ನೂ ಹೆಚ್ಚಿನ ನಿರ್ದೇಶನ ನೀಡಲು ಹೋಗುವುದಿಲ್ಲ ಎಂದು ಪೀಠ ಕಟು ಶಬ್ದಗಳಲ್ಲಿ ನುಡಿಯಿತು,
ನಂತರ ನ್ಯಾಯಾಲಯ ಸಂತ್ರಸ್ತರ ವಸೂಲಾತಿ ಕ್ರಮಗಳನ್ನು ತಕ್ಷಣವೇ ನಿಲ್ಲಿಸುವಂತೆ ಬ್ಯಾಂಕುಗಳಿಗೆ ಆದೇಶಿಸಿತು. ಅಲ್ಲದೆ, ವಿಪತ್ತಿಗೂ ಮುನ್ನ ವಯನಾಡು ಸಂತ್ರಸ್ತರಿಗೆ ಸಾಲ ನೀಡಿದ್ದ ಬ್ಯಾಂಕುಗಳನ್ನು ಸಹ ಪ್ರಕರಣದಲ್ಲಿ ಪಕ್ಷಕಾರರನ್ನಾಗಿಸುವಂತೆ ಸೂಚಿಸಿತು. ಎರಡು ವಾರಗಳ ನಂತರ ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ.