Chief Minister of Kerala, Pinarayi Vijayan
Chief Minister of Kerala, Pinarayi Vijayan 
ಸುದ್ದಿಗಳು

ರಾಜ್ಯ ವ್ಯಾಪ್ತಿಯಲ್ಲಿ ತನಿಖೆ ನಡೆಸಲು ಸಿಬಿಐಗೆ ನೀಡಿದ್ದ ಅನುಮತಿ ಹಿಂಪಡೆದ ಕೇರಳ ಸರ್ಕಾರ

Bar & Bench

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರವು ದೆಹಲಿ ವಿಶೇಷ ಪೊಲೀಸ್‌ ಸ್ಥಾಪನಾ ಕಾಯಿದೆ-1946 ಸೆಕ್ಷನ್‌ 6ರ ಅಡಿ ರಾಜ್ಯದ ವ್ಯಾಪ್ತಿಯಲ್ಲಿ ತನಿಖೆ ನಡೆಸಲು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ನೀಡಲಾಗಿದ್ದ ಅನುಮತಿಯನ್ನು ಹಿಂಪಡೆದಿದೆ. ಈ ಸಂಬಂಧ ನವೆಂಬರ್‌ 4ರಂದು ಕೇರಳ ಸರ್ಕಾರವು ಆದೇಶ ಹೊರಡಿಸಿದೆ.

“ಡಿಎಸ್‌ಪಿಇ ಕಾಯಿದೆ 1946ರ (1946ರ ಕೇಂದ್ರ ಕಾಯಿದೆ 25) ಸೆಕ್ಷನ್‌ 6ರ ಅನ್ವಯ ದೆಹಲಿಯ ವಿಶೇಷ ಪೊಲೀಸ್‌ ದಳದ ಸದಸ್ಯರಿಗೆ ಕೇರಳ ಸರ್ಕಾರವು ನೀಡಿದ್ದ ಸಾಮಾನ್ಯ ಒಪ್ಪಿಗೆಯನ್ನು ಹಿಂಪಡೆದಿದ್ದು, ರಾಜ್ಯದಲ್ಲಿ ತನಿಖೆಗೆ ಸಂಬಂಧಿಸಿದಂತೆ ಅಧಿಕಾರ ಮತ್ತು ವ್ಯಾಪ್ತಿ ಪ್ರಯೋಗ ಕುರಿತಾಗಿ ಕಾಯಿದೆಯ ಸೆಕ್ಷನ್‌ 3ರ ಅಡಿ ಹೊರಡಿಸಿದ್ದ ಹಿಂದಿನ ಎಲ್ಲಾ ಅಧಿಸೂಚನೆಗಳನ್ನು ವಾಪಸ್‌ ಪಡೆಯಲಾಗಿದೆ” ಎಂದು ಹೇಳಿದೆ.

ಈ ಮೂಲಕ ಸಿಬಿಐ ತನಿಖೆಗೆ ನಿರ್ಬಂಧಿಸಿದ ಬಿಜೆಪಿಯೇತರ ರಾಜ್ಯಗಳ ಪಟ್ಟಿಗೆ ಕೇರಳ ಸೇರ್ಪಡೆಯಾಗಿದೆ. ಈ ಹಿಂದೆ ಮಹಾರಾಷ್ಟ್ರ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನ ರಾಜ್ಯ ಸರ್ಕಾರಗಳು ಸಿಬಿಐ ತನಿಖೆಗೆ ನೀಡಿದ್ದ ಒಪ್ಪಿಗೆ ಹಿಂಪಡೆದಿವೆ.

ಸದರಿ ಅಧಿಸೂಚನೆಯು ಭವಿಷ್ಯದಲ್ಲಿನ ಪ್ರಕರಣಗಳಿಗೆ ಸಂಬಂಧಿಸಿದ್ದಾಗಿದೆ ಎಂದು ಕೇರಳ ಸರ್ಕಾರ ಸ್ಪಷ್ಟಪಡಿಸಿದೆ. "ಕಾಯಿದೆಯ ಸೆಕ್ಷನ್ 6ರ ಅಡಿಯಲ್ಲಿ ಈಗಾಗಲೇ ಒಪ್ಪಿಗೆ ನೀಡಿದ್ದು ವಿಚಾರಣೆಗೆ ಬಾಕಿರುವ ಪ್ರಕರಣಗಳಿಗ ಸದರಿ ಅಧಿಸೂಚನೆ ಅನ್ವಯಿಸುವುದಿಲ್ಲ” ಎಂದು ಹೇಳಲಾಗಿದೆ.

ರಾಜ್ಯ ಸರ್ಕಾರದ ಅನುಮತಿ ಪಡೆಯದೇ ಸಿಬಿಐ ರಾಜ್ಯದ ಯಾವುದೇ ಮೂಲೆಯಲ್ಲೂ ಕಾಯಿದೆಯ ಅನ್ವಯ ತಮ್ಮ ಅಧಿಕಾರ ವ್ಯಾಪ್ತಿಯನ್ನು ಬಳಸಲಾಗದು.

ಡಿಎಸ್‌ಪಿಇ ಕಾಯಿದೆಯ ಸೆಕ್ಷನ್‌ 3ರ ಅಡಿ ಸೂಚಿಸಲಾಗಿರುವ ಅಪರಾಧಗಳ ತನಿಖೆ ನಡೆಸಲು ಸೆಕ್ಷನ್‌ 6ರ ಅಡಿ ಸಿಬಿಐ ತನ್ನ ತನಿಖಾ ವ್ಯಾಪ್ತಿಗೆ ಅನುಮತಿಯನ್ನು ರಾಜ್ಯ ಸರ್ಕಾರದಿಂದ ಪಡೆಯುವುದು ಅಗತ್ಯ.

ಕೇರಳ ಸರ್ಕಾರದ ಒಪ್ಪಿಗೆಯು ಈಗ ರದ್ದುಗೊಂಡಿದ್ದು, ಇದರಿಂದ ರಾಜ್ಯದಲ್ಲಿ ಸಿಬಿಐ ತನಿಖೆಗೆ ನಿರ್ಬಂಧವಾಗಿದೆ. ನಿರ್ದಿಷ್ಟ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ ಅಥವಾ ಸಂಬಂಧಪಟ್ಟ ಹೈಕೋರ್ಟ್‌ಗಳ ಸೂಚನೆಯ ಮೇರೆಗೆ ಮಾತ್ರ ಸಿಬಿಐ ತನಿಖೆ ನಡೆಸಬಹುದಾಗಿದೆ.

ಆಭರಣ ಕಳ್ಳಸಾಗಣೆ ಪ್ರಕರಣದ ತನಿಖೆಯಲ್ಲಿ ಸಿಬಿಐ ವ್ಯಾಪ್ತಿ ಮೀರಿದ್ದನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಉಲ್ಲೇಖಿಸಿದ್ದು, ಸಾಂವಿಧಾನಿಕವಾಗಿ ಚುನಾಯಿತವಾದ ಸರ್ಕಾರವನ್ನು ಕೆಡವಲು ಪ್ರಯತ್ನಿಸಲಾಗಿದೆ ಎಂದು ಆರೋಪಿಸಿದ್ದರು. ನಿರ್ಗತಿಕರಿಗೆ ಮನೆ ನಿರ್ಮಿಸಿಕೊಡುವ ಕೇರಳ ಸರ್ಕಾರದ ಲೈಫ್‌ ಮಿಷನ್‌ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ. ಇದಕ್ಕೆ ಕೇರಳ ಹೈಕೋರ್ಟ್‌ ಅಕ್ಟೋಬರ್‌ನಲ್ಲಿ ತಡೆಯಾಜ್ಞೆ ನೀಡಿದೆ.