ಮಲಯಾಳಂ ಚಲನಚಿತ್ರೋದ್ಯಮದಲ್ಲಿ (ಮಾಲಿವುಡ್) ಲೈಂಗಿಕ ಕಿರುಕುಳ ಮತ್ತು ಲಿಂಗ ಅಸಮಾನತೆಯ ಗಂಭೀರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಬಹು ನಿರೀಕ್ಷಿತ ನ್ಯಾಯಮೂರ್ತಿ ಕೆ ಹೇಮಾ ಸಮಿತಿಯ ವರದಿಯನ್ನು ಕೇರಳ ಸರ್ಕಾರ ಸೋಮವಾರ ಬಿಡುಗಡೆ ಮಾಡಿದೆ.
ಸಮಿತಿಯಲ್ಲಿ ಕೇರಳ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ ಹೇಮಾ ಅಧ್ಯಕ್ಷರಾಗಿದ್ದರೆ ನಟಿ ಟಿ ಶಾರದಾ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಕೆ ಬಿ ವಲ್ಸಲಕುಮಾರಿ ಸದಸ್ಯರಾಗಿದ್ದರು.
ವರದಿ ಬಿಡುಗಡೆಯಾಗದಂತೆ ಹೈಕೋರ್ಟ್‌ನಲ್ಲಿ ಎರಡು ಮೊಕದ್ದಮೆಗಳನ್ನು ಹೂಡಿದ್ದರೂ ಯಶಸ್ಸು ದೊರೆತಿರಲಿಲ್ಲ. ಅದರ ಬೆನ್ನಿಗೇ ಆಗಸ್ಟ್ 19ರಂದು ಮಧ್ಯಾಹ್ನ 2.30ಕ್ಕೆ ಬಿಡುಗಡೆಯಾದ ವರದಿ ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಮಹಿಳೆಯರ ಕೆಲಸದ ಸ್ಥಿತಿಗತಿಯ ಕರಾಳ ಆಯಾಮಗಳನ್ನು ಬಿಚ್ಚಿಟ್ಟಿದೆ.
ವರದಿಯ ಪ್ರಮುಖಾಂಶಗಳು
ಮಲಯಾಳಂ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಅಥವಾ ಸಿನಿಮಾದಲ್ಲಿ ಅವಕಾಶ ನೀಡಲು ಲೈಂಗಿಕ ಬಯಕೆಗಳ ಈಡೇರಿಕೆ ವ್ಯಾಪಕವಾಗಿದೆ.
ಹಿಂದಿನ ದಿನ ತನ್ನ ಮೇಲೆ ದೌರ್ಜನ್ಯ ಎಸಗಿದ ನಟನ ಪತ್ನಿಯಾಗಿ ನಟಿಸುವಂತೆ ಅಭಿನೇತ್ರಿಯೊಬ್ಬರಿಗೆ ಬಲವಂತಪಡಿಸಲಾಗಿತ್ತು. ಅವರಿಬ್ಬರ ಅಪ್ಪುಗೆಯ ದೃಶ್ಯ ಚಿತ್ರೀಕರಣಕ್ಕಾಗಿ 17 ಟೇಕ್ ತೆಗೆದುಕೊಳ್ಳಾಗಿತ್ತು. ಇಷ್ಟು ಟೇಕ್ ತೆಗೆದುಕೊಳ್ಳುತ್ತಿರುವುದಕ್ಕೆ ನಟಿಯೇ ಕಾರಣ ಎಂದು ನಿರ್ದೇಶಕ ಟೀಕಿಸಿದ್ದರು.
ಮಹಿಳೆಯರು ತಿರುಗಿಬೀಳುವವರು ಎಂದು ಕಂಡು ಬಂದರೆ ಅವರನ್ನು 'ಮೀ ಟೂ ವ್ಯಕ್ತಿಗಳು' ಎಂದು ಹಣೆಪಟ್ಟಿ ಹಚ್ಚಿ ಅವರಿಗೆ ಅವಕಾಶಗಳನ್ನು ನಿರಾಕರಿಸುವ ಅಪಾಯ ಇದೆ.
ಪುರುಷ ಮತ್ತು ಮಹಿಳೆ ಇಬ್ಬರೂ ತಮ್ಮ ಜೀವ ಭಯ ಅಥವಾ ಅವಕಾಶಗಳನ್ನು ಕಳೆದುಕೊಳ್ಳುವ ಕಾರಣದಿಂದ ಉದ್ಯಮದಲ್ಲಿನ ವಿವಿಧ ಸಮಸ್ಯೆಗಳ ಬಗ್ಗೆ ಮಾತನಾಡಲು ಹಿಂಜರಿದಿದ್ದಾರೆ. ನೃತ್ಯಗಾರರ ವಾಟ್ಸಪ್ ಗ್ರೂಪ್‌ನಲ್ಲಿ ಲೈಂಗಿಕ ಶೋಷಣೆ ಬಗ್ಗೆ ಪ್ರಸ್ತಾಪಿಸುತ್ತಿದ್ದಂತೆ ಸದಸ್ಯರೆಲ್ಲರೂ ಗ್ರೂಪ್ ತೊರೆಯಲು ಆರಂಭಿಸಿದರು.
ಎಎಂಎಂಎ (ಮಲಯಾಳಂ ಚಲನಚಿತ್ರ ಕಲಾವಿದರ ಸಂಘ) ವಿರುದ್ಧ ಧ್ವನಿ ಎತ್ತಿದ್ದರಿಂದ ವಿಮೆನ್ ಇನ್ ಸಿನಿಮಾ ಕಲೆಕ್ಟಿವ್ (ಡಬ್ಲ್ಯುಸಿಸಿ) ಸದಸ್ಯರಿಗೆ ಚಲನಚಿತ್ರಗಳಲ್ಲಿ ಅವಕಾಶಗಳು ದೊರೆಯಲಿಲ್ಲ.
ಶೌಚಾಲಯ, ಬಟ್ಟೆ ಬದಲಾಯಿಸುವ ಕೊಠಡಿ, ಸುರಕ್ಷಿತ ವಸತಿ ಇತ್ಯಾದಿಗಳ ಕೊರತೆಯಿಂದ ಮಹಿಳೆಯರು ತೊಂದರೆ ಅನುಭವಿಸುತ್ತಿದ್ದಾರೆ.
ಇಂತಹ ಮೂಲ ಸೌಕರ್ಯಗಳ ಪರಿಸ್ಥಿತಿಗೆ ಹೊಂದಿಕೊಂಡು ಹೋಗುವುದನ್ನು ಕಲಿಯಿರಿ ಎಂದು ಪುರುಷ ಕಲಾವಿದರು ಮಹಿಳೆಯರಿಗೆ ಹೇಳುತ್ತಾರೆ. ಶೌಚಾಲಯ ಇಲ್ಲದಿರುವುದು ಗಂಭೀರ ಸಮಸ್ಯೆ ಅಲ್ಲ ಎಂದು ಅವರು ಹೇಳುತ್ತಾರೆ.
ಉದ್ಯಮದೊಳಗಿನ ಪ್ರಬಲ ಗುಂಪುಗಳು ("ಮಾಫಿಯಾ") ಪ್ರತೀಕಾರ ಅಥವಾ ನಿಯಂತ್ರಣದ ರೂಪವಾಗಿ ಸಿನಿಮಾ ಕಲಾವಿದರ ಮೇಲೆ ಅನಧಿಕೃತ ಮತ್ತು ಕಾನೂನುಬಾಹಿರ ನಿಷೇಧ ವಿಧಿಸುತ್ತಿದ್ದಾರೆ.
ಬಹಳ ಕ್ಷುಲ್ಲಕ ಕಾರಣಗಳಿಗಾಗಿ ಮತ್ತು ಪ್ರಭಾವಿ ವ್ಯಕ್ತಿಗಳ ಕೋಪಕ್ಕೆ ತುತ್ತಾಗಿ ಕೆಲ ಪುರುಷ ನಟರೂ ಕೂಡ ನಿಷೇಧಕ್ಕೆ ತುತ್ತಾಗಿದ್ದಿದೆ.
ಪುರುಷರೇ ಆಗಿರುವ ಕೆಲವೇ ನಿರ್ಮಾಪಕರು, ನಿರ್ದೇಶಕರು, ನಟರ ಹಿಡಿತದಲ್ಲಿ ಚಿತ್ರೋದ್ಯಮ ಇದೆ. ಅವರ ಆದೇಶ ಪಾಲಿಸದವರ ಭವಿಷ್ಯವೇ ಅಳಿಸಿಹೋಗುವ ಅಪಾಯ ಇದೆ ಎಂದು ಸಮಿತಿಗೆ ತಿಳಿಸಲಾಗಿದೆ.
ಪುರುಷರಿಗಿಂತ ಮಹಿಳೆಯರ ಸಂಭಾವನೆ ಕಡಿಮೆ ಇರುವುದು ಮಲಯಾಳಂ ಚಿತ್ರೋದ್ಯಮದಲ್ಲಿ ಸಾಮಾನ್ಯವಾಗಿದೆ.
'ಟೇಕ್ ಆಫ್' ಮತ್ತು 'ಹೌ ಓಲ್ಡ್ ಆರ್ ಯು' ರೀತಿಯ ಚಿತ್ರಗಳಲ್ಲಿ ನಟಿಯರಿಂದಾಗಿ ಸಿನಿಮಾ ಯಶಸ್ಸು ಗಳಿಸಿದ್ದರೂ ಪುರುಷ ನಟರಿಗಿಂತಲೂ ಅವರು ಪಡೆದ ಸಂಭಾವನೆ ಹಾಗೂ ತೆರೆ ಮೇಲೆ ಅವರು ಕಾಣಿಸಿಕೊಂಡ ಅವಧಿ ಕಡಿಮೆ.
ಪುರುಷ ನಾಯಕ ನಟರ ಮಾರುಕಟ್ಟೆ ಮೌಲ್ಯವನ್ನು ಅಭಿಮಾನಿ ಸಂಘಗಳು ಕೃತಕವಾಗಿ ಹೆಚ್ಚಿಸುತ್ತವೆ.
ಉದ್ಯಮದ ಲಿಂಗ ಪಕ್ಷಪಾತವನ್ನು ನಿಭಾಯಿಸಲು ಚಲನಚಿತ್ರಗಳ ತಯಾರಿಕೆಯಲ್ಲಿ ಹೆಚ್ಚಿನ ಮಹಿಳೆಯರು ತೊಡಗಿಸಿಕೊಳ್ಳುವುದು ಅಗತ್ಯ.
ಚಿತ್ರ ಕಲಾವಿದರನ್ನು ನಿಯಂತ್ರಿಸುವ ಸಂಸ್ಥೆಗಳಲ್ಲಿ ಲಿಂಗ ಸಮತೋಲನ, ಲಿಂಗ ನ್ಯಾಯದ ಕುರಿತ ಸಿನಿಮಾಗಳಿಗೆ ಹೆಚ್ಚಿನ ಬಜೆಟ್ ಬೆಂಬಲ ಒದಗಿಸಬೇಕು, ಚಲನಚಿತ್ರಗಳ ಪ್ರದರ್ಶನಕ್ಕಾಗಿ ಚಿತ್ರಮಂದಿರಗಳನ್ನು ಮೀಸಲಿಡಬೇಕು.
ಸರಿಯಾದ ಒಪ್ಪಂದ ಇಲ್ಲದಿರುವುದು ಸಾಮಾನ್ಯವಾಗಿ ಅತೃಪ್ತಿಕರ ಸಂಭಾವನೆ, ವೇತನದಲ್ಲಿ ಸಮಾನತೆಯ ಕೊರತೆ ಮತ್ತು ಚಿತ್ರೀಕರಣದ ಸಮಯದಲ್ಲಿ ಅಸ್ವಸ್ಥತೆಯಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಚಿತ್ರೋದ್ಯಮ ಸಂಪೂರ್ಣ ಅಶಿಸ್ತಿನಿಂದ ತೊಂದರೆ ಎದುರಿಸುತ್ತಿದ್ದು, ಸೆಟ್‌ಗಳಲ್ಲಿ ಮದ್ಯ ಮತ್ತು ಮಾದಕ ದ್ರವ್ಯ ಸೇವಿಸುವ ಪರಿಪಾಠ ಇದೆ. ಹೀಗಾಗಿ ಸಿನಿ ಕೆಲಸದ ಸ್ಥಳಗಳಲ್ಲಿ ಮದ್ಯ ಮತ್ತು ಮಾದಕ ವಸ್ತುಗಳ ಸೇವನೆ ನಿಷೇಧಿಸಬೇಕು.
ಸಿನಿಮಾ ಲೊಕೇಶನ್‌ಗಳಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ. ನಟಿಯರು ಉಳಿದುಕೊಳ್ಳುವ ಹೋಟೆಲ್ ಕೊಠಡಿಗಳ ಬಾಗಿಲನ್ನು ಪುರುಷ ಚಿತ್ರಕರ್ಮಿಗಳು ಬಡಿಯುವುದಿದೆ. ಅವರಲ್ಲಿ ಬಹುಪಾಲು ಅಮಲಿನಲ್ಲಿರುತ್ತಾರೆ.
ಲೈಂಗಿಕ ಕಿರುಕುಳ ಚಲನಚಿತ್ರೋದ್ಯಮದಲ್ಲಿ ಬಹುಹಿಂದಿನಿಂದಲೂ ಇತ್ತಾದರೂ ಈಗಿನಷ್ಟು ವ್ಯಾಪಕವಾಗಿರಲಿಲ್ಲ.
ಪುರುಷರು ಮತ್ತು ಮಹಿಳೆಯರ ನಡುವಿನ ಸಂಬಂಧಗಳು ಈಗ ಭಿನ್ನವಾಗಿದ್ದು ಪಾಶ್ಚಿಮಾತ್ಯ ಜೀವನಶೈಲಿಯ ಪ್ರಭಾವದಿಂದ ಪುರುಷರು ಮತ್ತು ಮಹಿಳೆಯರು ಈಗ ಹೆಚ್ಚು ಮುಕ್ತವಾಗಿ ಬೆರೆಯುತ್ತಿದ್ದಾರೆ.
"ಕಾಸ್ಟಿಂಗ್ ಕೌಚ್" ಎಂಬುದು ಚಿತ್ರರಂಗದ ಹಳೆಯ ದಿನಗಳಲ್ಲಿಯೂ ಇತ್ತು. "ಆದರೆ ಇಂದು ಮಹಿಳೆಯರು ಅದರ ಬಗ್ಗೆ ಬಹಿರಂಗವಾಗಿ ಮಾತನಾಡಲು ಪ್ರಾರಂಭಿಸಿದ್ದಾರೆ". ಅಂತಹ ಮಾತು ಹಿಂದಿನ ದಿನಗಳಲ್ಲಿ ಮುಜುಗರ ಉಂಟುಮಾಡುತ್ತಿತ್ತು.
ಹಿಂದಿನ ಕಾಲದಲ್ಲಿ ದ್ವಂದ್ವಾರ್ಥದ ಸಂಭಾಷಣೆಗಳು ಕಡಿಮೆ ಇರುತ್ತಿದ್ದವು. ನಟಿಯರ, ಕಿರಿಯ ಕಲಾವಿದರ ಅಂಗಾಂಗಳನ್ನು ಮುಟ್ಟುವ ಲೈಂಗಿಕ ದೌರ್ಜನ್ಯಗಳು ಇರುತ್ತಿರಲಿಲ್ಲ.