ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಮಹಿಳೆಯರ ಕೆಲಸದ ಸ್ಥಿತಿಗತಿ ಕುರಿತು ನ್ಯಾಯಮೂರ್ತಿ ಹೇಮಾ ನೇತೃತ್ವದ ಸಮಿತಿ ನೀಡಿದ್ದ ವರದಿ ಪ್ರಕಟಿಸಲು ಅವಕಾಶ ನೀಡುವಂತೆ ಕೇರಳ ಹೈಕೋರ್ಟ್‌ನ ಏಕಸದಸ್ಯ ಪೀಠ ಈಚೆಗೆ ನೀಡಿದ್ದ ಆದೇಶವನ್ನು ರಂಜಿನಿ ಎಂದೇ ಜನಪ್ರಿಯವಾಗಿರುವ ನಟಿ ಸಶಾ ಸೆಲ್ವರಾಜ್ ಪ್ರಶ್ನಿಸಿದ್ದಾರೆ . ಪ್ರಕರಣವನ್ನು ನಾಳೆ ಉಚ್ಚ ನ್ಯಾಯಾಲಯ ಆಲಿಸಲಿದೆ. [ಸಶಾ ಸೆಲ್ವರಾಜ್ ಅಲಿಯಾಸ್ ರಂಜನಿ ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ವರದಿ ಪ್ರಕಟಣೆಗೆ ತಮ್ಮ ವಿರೋಧ ಇಲ್ಲವಾದರೂ ವರದಿಯ ಸೂಕ್ಷ್ಮ ಭಾಗಗಳನ್ನು ಸರಿಯಾಗಿ ಪರಿಷ್ಕರಣೆ ಮಾಡದಿದ್ದರೆ ತನ್ನ ಗೌಪ್ಯತೆಯ ಹಕ್ಕು ಉಲ್ಲಂಘನೆಯಾಗಬಹುದು ಎಂದು ಆಕೆ ಕಳವಳ ವ್ಯಕ್ತಪಡಿಸಿದ್ದಾರೆ.
ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎ ಮುಹಮ್ಮದ್ ಮುಸ್ತಾಕ್ ಮತ್ತು ನ್ಯಾಯಮೂರ್ತಿ ಎಸ್ ಮನು ಅವರಿದ್ಗ ವಿಭಾಗೀಯ ಪೀಠ ಪ್ರಕರಣವನ್ನು ನಾಳೆ (ಸೋಮವಾರ ಆಗಸ್ಟ್ 19) ಆಲಿಸಲಿದೆ.
ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಅಧ್ಯಯನ ಮಾಡಲು 'ವಿಮೆನ್ ಇನ್ ಸಿನಿಮಾ ಕಲೆಕ್ಟಿವ್' ಸಂಸ್ಥೆ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ 2017ರಲ್ಲಿ ಕೇರಳ ಸರ್ಕಾರ ನ್ಯಾಯಮೂರ್ತಿ ಕೆ ಹೇಮಾ ಅವರ ನೇತೃತ್ವದಲ್ಲಿ ಸಮಿತಿ ರಚಿಸಿತ್ತು.
ಅಧ್ಯಯನದ ಭಾಗವಾಗಿ ಸಮಿತಿಗೆ ಹೇಳಿಕೆ ನೀಡಿದವರಲ್ಲಿ ನಟಿ ರಂಜಿನಿಯೂ ಒಬ್ಬರು. ಗೌಪ್ಯತೆಯನ್ನು ಕಾಯ್ದುಕೊಳ್ಳಲಾಗುವುದು ಎಂಬ ಭರವಸೆ ನೀಡಿದ್ದರಿಂದ ತಾನು ಹೇಳಿಕೆ ನೀಡಿದ್ದೆ. ವರದಿ ಬಿಡುಗಡೆಗೂ ಮುನ್ನ ತನಗೆ ಸೂಚನೆ ನೀಡಲಾಗುವುದು ಮತ್ತು ತನ್ನ ವಾದ ಆಲಿಸಲಾಗುವುದು ಎಂಬ ಕಾನೂನು ಬದ್ಧ ನಿರೀಕ್ಷೆ ತನಗಿತ್ತು ಎಂದು ಅವರು ಹೇಳಿದ್ದಾರೆ.
ಸಮಿತಿಯು ತನ್ನ ವರದಿಯನ್ನು 2019ರಲ್ಲಿ ಸರ್ಕಾರಕ್ಕೆ ಸಲ್ಲಿಸಿತ್ತು. ವೈಯಕ್ತಿಕ ಮಾಹಿತಿಯನ್ನು ತಿದ್ದುಪಡಿ ಮಾಡಿದ ಬಂತರ ವರದಿಯ ಕೆಲ ಭಾಗಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲು ರಾಜ್ಯ ಮಾಹಿತಿ ಆಯೋಗ ಅವಕಾಶ ಮಾಡಿಕೊಟ್ಟಿತ್ತು.
ಈ ಕ್ರಮವನ್ನು ಚಲನಚಿತ್ರ ನಿರ್ಮಾಪಕ ಸಜಿಮೋನ್ ಪರಾಯಿಲ್ ಕೇರಳ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಆದರೆ, ಆಗಸ್ಟ್ 13ರಂದು ನ್ಯಾಯಮೂರ್ತಿ ವಿ ಜಿ ಅರುಣ್ (ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಮೂರ್ತಿ) ಅರ್ಜಿಯನ್ನು ವಜಾಗೊಳಿಸಿದ್ದರು.
ಏಕಸದಸ್ಯ ಪೀಠ ಆದೇಶವನ್ನು ಇದೀಗ ರಂಜಿನಿ ಪ್ರಶ್ನಿಸಿದ್ದಾರೆ. ವರದಿಯ ಸೂಕ್ಷ್ಮ ಭಾಗಗಳನ್ನು ಸರಿಪಡಿಸುವ ಕಾರ್ಯವನ್ನು ಕೇವಲ ಮಾಹಿತಿ ಅಧಿಕಾರಿಯ ವಿವೇಚನೆಗೆ ಬಿಟ್ಟ ಕಾರಣ ವರದಿ ಬಿಡುಗಡೆಯಾದರೆ ಅದು ತನ್ನ ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸಬಹುದು ಎಂದು ಆಕೆ ಕಳವಳ ವ್ಯಕ್ತಪಡಿಸಿದ್ದಾರೆ.