Karnataka High Court and KFCC 
ಸುದ್ದಿಗಳು

ಚಲಚನಚಿತ್ರ ಮಂಡಳಿ ಚುನಾವಣೆ ಜ.31ಕ್ಕೆ ; ಮತದಾರರ ಪಟ್ಟಿ ವಿವಾದ ಸಿವಿಲ್‌ ದಾವೆ ಮೂಲಕ ಇತ್ಯರ್ಥಕ್ಕೆ ನಿರ್ದೇಶನ

“ಈ ಹಂತದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಬೈಲಾ ಸಂಖ್ಯೆ 17 ಉಲ್ಲಂಘನೆಯಾಗಿದೆ ಎಂದು ಹೇಳುವ ಇಚ್ಛೆಯನ್ನು ನ್ಯಾಯಾಲಯ ಹೊಂದಿಲ್ಲ” ಎಂದಿರುವ ಹೈಕೋರ್ಟ್‌.

Bar & Bench

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ (ಕೆಎಫ್‌ಸಿಸಿ) ನಡೆಯುವ ಚುನಾವಣೆಯಲ್ಲಿ ಭಾಗವಹಿಸುವ ಮತದಾರರ ಅಂತಿಮ ಪಟ್ಟಿಯನ್ನು ಎಂದು ಪ್ರಕಟಿಸಲಾಗಿದೆ ಎಂಬ ವಿವಾದವನ್ನು ಸಕ್ಷಮ ನ್ಯಾಯಾಲಯದಲ್ಲಿ ಸಿವಿಲ್‌ ದಾವೆ ಹೂಡಿ ಪರಿಹರಿಸಿಕೊಳ್ಳಲು ಕರ್ನಾಟಕ ಹೈಕೋರ್ಟ್‌ ಗುರುವಾರ ನಿರ್ದೇಶಿಸಿದೆ. ಇದರಿಂದ ಕೆಎಫ್‌ಸಿಸಿ ಚುನಾವಣೆಯು ಅಬಾಧಿತವಾಗಿ ನಡೆಯಲಿದೆ.

ಚುನಾವಣಾ ವೇಳಾಪಟ್ಟಿ ಪ್ರಕಟಿಸಿರುವ ಹಿಂದಿನ ದಿನ ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಿರುವುದರಿಂದ ಚುನಾವಣೆ ರದ್ದುಪಡಿಸುವಂತೆ ಕೋರಿ ಅಭ್ಯರ್ಥಿಯೂ ಆಗಿರುವ ಬೆಂಗಳೂರಿನ ಎನ್‌ ಆರ್‌ ಕೆ ವಿಶ್ವನಾಥ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಬಿ ಎಂ ಶ್ಯಾಮ್‌ ಪ್ರಸಾದ್‌ ಅವರ ಏಕಸದಸ್ಯ ಪೀಠ ವಿಲೇವಾರಿ ಮಾಡಿತು.

“ನ್ಯಾಯಾಲಯದ ನಿರ್ದೇಶನದಂತೆ ಚುನಾವಣಾಧಿಕಾರಿ ಮೆಮೊ ಸಲ್ಲಿಸಿದ್ದು, ಅದರಲ್ಲಿ ಮತದಾರರ ಅಂತಿಮ ಪಟ್ಟಿಯನ್ನು ಚುನಾವಣಾ ವೇಳಾಪಟ್ಟಿ ಪ್ರಕಟಿಸುವುದಕ್ಕೂ ಹಿಂದೆ ಪ್ರಕಟಿಸಲಾಗಿದೆ ಎಂದು ಹೇಳಲಾಗಿದೆ. ಚುನಾವಣಾಧಿಕಾರಿಯು ಡಿಸೆಂಬರ್‌ 17/19ರಂದು ಮತದಾರರ ಪಟ್ಟಿ ಪ್ರಕಟಿಸಲಾಗಿದೆ ಎಂದು ಹೇಳಿದ್ದಾರೆ. ಅರ್ಜಿದಾರರು ಜನವರಿ 14ರಂದು ಮತದಾರರ ಪಟ್ಟಿ ಪ್ರಕಟಿಸಿದ್ದಾರೆ ಎಂದು ವಾದಿಸಿದ್ದಾರೆ. ಈ ಸಂಬಂಧ ಸಕ್ಷಮ ನ್ಯಾಯಾಲಯದಲ್ಲಿ ಸಿವಿಲ್‌ ದಾವೆ ಹೂಡಿ ಅರ್ಜಿದಾರರು ಪರಿಹಾರ ಪಡೆಯಬಹುದು. ಈ ಹಂತದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಲಾಗದು” ಎಂದು ಹೇಳಿ, ನ್ಯಾಯಾಲಯವು ಅರ್ಜಿ ಇತ್ಯರ್ಥಪಡಿಸಿದೆ.

“ಬೈಲಾ ಸಂಖ್ಯೆ 17 ಪ್ರಕಾರ ಚುನಾವಣಾ ಪ್ರಕ್ರಿಯೆ ಆರಂಭಕ್ಕೂ 15 ದಿನ ಮುನ್ನಾ ಮತದಾರರ ಪಟ್ಟಿ ಪ್ರಕಟಿಸಬೇಕು ಎಂದಿದೆ. ಈ ಹಂತದಲ್ಲಿ ಮಂಡಳಿಯ ಬೈಲಾ ಸಂಖ್ಯೆ 17 ಉಲ್ಲಂಘನೆಯಾಗಿದೆ ಎಂದು ಹೇಳುವ ಇಚ್ಛೆಯನ್ನು ನ್ಯಾಯಾಲಯ ಹೊಂದಿಲ್ಲ” ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ಇದಕ್ಕೂ ಮುನ್ನ, ಅರ್ಜಿದಾರರ ಪರ ಹಿರಿಯ ವಕೀಲ ವಿವೇಕ್‌ ಸುಬ್ಬಾರೆಡ್ಡಿ “ಚುನಾವಣಾ ವೇಳಾಪಟ್ಟಿ ಪ್ರಕಟಿಸುವ ಹಿಂದಿನ ದಿನ ಮತದಾರರ ಪಟ್ಟಿ ಪ್ರಕಟಿಸಿರುವುದರಿಂದ ಹಲವು ಅರ್ಹ ಮತದಾರರು ವಂಚಿತರಾಗಲಿದ್ದಾರೆ. 15 ದಿನ ಮುಂಚಿತವಾಗಿ ಮತದಾರರ ಪಟ್ಟಿ ಪ್ರಕಟಿಸಿ, ಯಾರ ಹೆಸರಿಲ್ಲವೋ ಅವರು ತಮ್ಮ ಹೆಸರು ಸೇರಿಸಲು ಐದು ದಿನ ಅವಕಾಶ ಮಾಡಿಕೊಡಬೇಕು. ಚುನಾವಣಾಧಿಕಾರಿಯು ಜನವರಿ 14ರಂದು ಮತದಾರರ ಪಟ್ಟಿಗೆ ಸಹಿ ಹಾಕಿರುವುದರಿಂದ ಆ ದಿನವನ್ನು ಪರಿಗಣಿಸಬೇಕಾಗುತ್ತದೆ. ಚುನಾವಣಾಧಿಕಾರಿ ಸಹಿ ಇಲ್ಲದೇ ಚುನಾವಣಾ ಪ್ರಕ್ರಿಯೆ ನಡೆಸಲಾಗದು” ಎಂದರು.

ಚುನಾವಣಾಧಿಕಾರಿ ಸುರೇಶ್‌ ಬಫ್ನಾ ಪ್ರತಿನಿಧಿಸಿದ್ದ ಹಿರಿಯ ವಕೀಲ ಉದಯ್‌ ಹೊಳ್ಳ “ಮಂಡಳಿಯ ಚುನಾವಣೆ ಮುಂದೂಡಲು ನ್ಯಾಯಾಲಯ ಬಯಸಿದರೆ ನಾವು ಅದಕ್ಕೆ ಬದ್ಧವಾಗಿರುತ್ತೇವೆ. ಮತದಾರರ ಪಟ್ಟಿಯನ್ನು 2025ರ ಡಿಸೆಂಬರ್‌ 17ರಂದು ನೋಟಿಸ್‌ ಬೋರ್ಡ್‌ನಲ್ಲಿ ಹಾಕಿದ್ದು, ಕೆಲವರು ಅದನ್ನು ತೆಗೆದುಕೊಂಡು ಹೋಗಿದ್ದಾರೆ. ಅದನ್ನು ಸಾಬೀತುಪಡಿಸುವಿರಾ ಎಂದು ನ್ಯಾಯಾಲಯ ಕೇಳಿದೆ. ಆದರೆ, ಸಾಧ್ಯವಿಲ್ಲ. ಇದಕ್ಕೆ ಪೂರಕವಾಗಿ ಮೆಮೊ ಸಲ್ಲಿಸಲಾಗಿದೆ” ಎಂದರು.

“ಸಾಮಾನ್ಯ ಸಭೆಯು ಜನವರಿ 31ರಂದು ನಿಗದಿಯಾಗಿದ್ದು, ರಾಜ್ಯದಾದ್ಯಂತ ಇರುವ 1,400 ಜನರು ಬರುತ್ತಿದ್ದಾರೆ. ರೂ.15 ಲಕ್ಷವನ್ನು ಮಂಡಳಿ ಖರ್ಚು ಮಾಡಿದ್ದು, ಚುನಾವಣಾಧಿಕಾರಿಯೂ ರೂ. 5 ಲಕ್ಷ ಖರ್ಚು ಮಾಡಿದ್ದಾರೆ. ಚುನಾವಣೆ ಮುಂದೂಡಿದರೆ ಪುನಾ ಪ್ರಕ್ರಿಯೆ ನಡೆಸಬೇಕಾಗುತ್ತದೆ. ಅದು ಅಸಾಧ್ಯ” ಎಂದರು.

ಮಂಡಳಿಯನ್ನು ಪ್ರತಿನಿಧಿಸಿದ್ದ ವಕೀಲ ಧನರಾಜ್‌ ಅವರು “ಜನವರಿ 31ರಂದು ಸಾಮಾನ್ಯ ಸಭೆ ನಡೆಸಲು ಎಲ್ಲಾ ಸಿದ್ಧತೆ ಮಾಡಲಾಗಿದೆ. ಇದಕ್ಕೆ 19-20 ಲಕ್ಷ ರೂಪಾಯಿ ಖರ್ಚಾಗಿದೆ. 1,400 ಸದಸ್ಯರು ಚುನಾವಣೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಚುನಾವಣಾ ವೇಳಾಪಟ್ಟಿ ಪ್ರಕಟವಾದ ಮೇಲೆ ನ್ಯಾಯಾಲಯಕ್ಕೆ ಸೀಮಿತ ಪಾತ್ರವಿರುತ್ತದೆ” ಎಂದರು.

ಬೇಷರತ್‌ ಕ್ಷಮೆ ಕೋರಲು ವೆಂಕಟೇಶ್‌ಗೆ ನಿರ್ದೇಶನ

ಹಣಕಾಸು ಅಕ್ರಮ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ವೆಂಕಟೇಶ್‌ ಅವರ ಸದಸ್ಯತ್ವ ಅಮಾನತುಗೊಳಿಸಿ, ತನಿಖೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆದೇಶಿಸಿರುವುದನ್ನು ಏಕಸದಸ್ಯ ಪೀಠವು ವಜಾಗೊಳಿಸಿದೆ. ಈ ಆದೇಶವನ್ನು ಬದಿಗೆ ಸರಿಸುವಂತೆ ಕೋರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಡಿದ ಮನವಿಯನ್ನು ಪುರಸ್ಕರಿಸಲು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ವಿಭಾಗೀಯ ಪೀಠ ನಿರಾಕರಿಸಿತು.

ಅರ್ಜಿದಾರ ತೀಸಿ ವೆಂಕಟೇಶ್‌ ಅವರು ಬೇಷರತ್‌ ಕ್ಷಮೆ ಕೋರಲು ನಿರ್ಧರಿಸಿದ್ದು, ನಾಳೆಯೊಳಗೆ ಅವರು ಅದನ್ನು ಮಂಡಳಿಗೆ ಸಲ್ಲಿಸಬಹುದು. ಆನಂತರ ಮಂಡಳಿಯು ಈ ಸಂಬಂಧ ನಿರ್ಧರಿಸಬಹುದು ಎಂದಿದೆ. ಅಲ್ಲದೇ, ಪ್ರತಿವಾದಿ ವೆಂಕಟೇಶ್‌ಗೆ ನೋಟಿಸ್‌ ಜಾರಿಗೊಳಿಸಿ, ವಿಚಾರಣೆಯನ್ನು ಏಪ್ರಿಲ್‌ಗೆ ಮುಂದೂಡಿತು.

ಕೆಎಫ್‌ಸಿಸಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಲಕ್ಷ್ಮಿನಾರಾಯಣ್‌ ಅವರು “ಆಡಳಿತ ಮಂಡಳಿ ಸಭೆ ಸೇರಿ ವೆಂಕಟೇಶ್‌ ಅವರ ಬೇಷರತ್‌ ಕ್ಷಮೆ ಸಂಬಂಧ ನಿರ್ಧಾರ ಕೈಗೊಳ್ಳಲಿದೆ” ಎಂದರು.