ಕೇವಲ ಅನುಮಾನದ ಆಧಾರದ ಮೇಲೆ ಮಹಿಳೆಯೊಬ್ಬರ ಬ್ಯಾಂಕ್ ಖಾತೆ ಸ್ಥಗಿತಗೊಳಿಸಿದ ಜಾರಿ ನಿರ್ದೇಶನಾಲಯವನ್ನು (ಇ ಡಿ) ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ [ಉಪ ನಿರ್ದೇಶಕರ ಮೂಲಕ ಜಾರಿ ನಿರ್ದೇಶನಾಲಯ ಮತ್ತು ಪೂನಂ ಮಲಿಕ್ ನಡುವಣ ಪ್ರಕರಣ]
ನ್ಯಾಯ ನಿರ್ಣಯ ಅಧಿಕಾರಿ ವಿವೇಚನೆ ಬಳಸದೆ ಹಣ ಅಕ್ರಮ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್‌ಎ) ಅಡಿ ಆದೇಶ ನೀಡಿದ್ದಾರೆ ಎಂದು ನ್ಯಾಯಮೂರ್ತಿ ಸುಬ್ರಮೋಣಿಯಂ ಪ್ರಸಾದ್ ಮತ್ತು ಹರೀಶ್ ವೈದ್ಯನಾಥನ್ ಶಂಕರ್ ಅವರಿದ್ದ ಪೀಠ ನುಡಿದಿದೆ.
ಮುಟ್ಟುಗೋಲು, ಸ್ಥಗಿತ ಹಾಗೂ ಸ್ವಾಧೀನ ಪದಗಳನ್ನು ಇ ಡಿ ಮತ್ತು ನ್ಯಾಯ ನಿರ್ಣಯ ಅಧಿಕಾರಿ ಕಲಸುಮೇಲೋಗರ ಮಾಡಿದ್ದಾರೆ ಎಂದು ನ್ಯಾಯಾಲಯ ಲಘು ಧಾಟಿಯಲ್ಲಿ ಹೇಳಿದೆ. ಈ ಪದಗಳು ಪರಸ್ಪರ ಭಿನ್ನ ಅರ್ಥಗಳನ್ನು ಹೊಂದಿದೆ ಎಂದು ಅದು ನುಡಿದಿದೆ.
ನ್ಯಾಯ ನಿರ್ಣಯ ಅಧಿಕಾರಿ ಆಸ್ತಿ ಮುಟ್ಟುಗೋಲು ಹಾಕಿಕೊಂಡ ತಕ್ಷಣವೇ ಅಥವಾ ಸ್ಥಗಿತಗೊಂಡ ಕೂಡಲೇ ರಿಟೆನ್ಷನ್ ಅಥವಾ ಕಂಟಿನ್ಯೂಯೇಷನ್‌ಗೆ ಆದೇಶ ನೀಡುವ ಅಧಿಕಾರ ಹೊಂದಿಲ್ಲ. ಅವರು ಮೊದಲು ಪಿಎಂಎಲ್‌ಎಯಲ್ಲಿ ಸೂಚಿಸಲಾದ ಕಡ್ಡಾಯ ಪ್ರಕ್ರಿಯೆಗಳನ್ನು ಪಾಲಿಸಲೇ ಬೇಕು. ಉಲ್ಲಂಘಿಸಿದರೆ ಅದು ನ್ಯಾಯಕ್ಕೆ ಮಾಡುವ ವಂಚನೆಯಾಗಲಿದ್ದು ಪಿಎಂಎಲ್‌ಎ ಅಡಿ ಒದಗಿಸಲಾದ ರಕ್ಷಣೆಗಳನ್ನು ಕಸಿದುಕೊಳ್ಳುತ್ತದೆ ಎಂದಿದೆ.
ಅಂತೆಯೇ ಪೂನಂ ಮಲಿಕ್ ಅವರಿಗೆ ಸೇರಿದ ಬ್ಯಾಂಕ್ ಖಾತೆಗಳ ಸ್ಥಗಿತ ತೆರವುಗೊಳಿಸುವಂತೆ ಪಿಎಂಎಲ್‌ಎ ಮೇಲ್ಮನವಿ ನ್ಯಾಯಮಂಡಳಿ ನೀಡಿದ್ದ ಆದೇಶ ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಎರಡುಮೇಲ್ಮನವಿಗಳನ್ನು ಅದು ತಿರಸ್ಕರಿಸಿತು.
ಸ್ಟೆರ್ಲಿಂಗ್ ಬಯೋಟೆಕ್ ಸಮೂಹ ಪ್ರಕರಣದ ಆರೋಪಿಯಾದ ಗಗನ್ ಧವನ್ ಅವರ ಬಳಿ ಹಣಕಾಸು ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದ ರಂಜಿತ್ ಮಲಿಕ್ ಅವರ ಪತ್ನಿ ಪೂನಂ ಅವರ ಖಾತೆಗೆ ಲೆಕ್ಕಕ್ಕೆ ಸಿಗದ ಹಣವನ್ನು ಜಮಾ ಮಾಡಲಾಗಿದೆ. ಇದು ಅಕ್ರಮ ಹಣ ವರ್ಗಾವಣೆ ಎಂಬುದು ಇ ಡಿ ಆರೋಪವಾಗಿತ್ತು.
ವಾದ ಆಲಿಸಿದ ನ್ಯಾಯಾಲಯ ಇ ಡಿ ಅಗತ್ಯ ಕಾನೂನು ಕ್ರಮ ಪಾಲಿಸದೆ ಪೂನಂ ಮಲಿಕ್ ಅವರ ಹಣ ಬಳಕೆ ಹಕ್ಕನ್ನು ಮೊಟಕುಗೊಳಿಸಿದೆ. ಸ್ಥಗಿತ ಆದೇಶಕ್ಕೆ ಸಕಾರಣ ನೀಡಿಲ್ಲ. ಅಕ್ರಮ ಹಣ ವರ್ಗಾವಣೆಯಾಗಿದೆ ಎಂಬುದಕ್ಕೆ ಅದು ಆಧಾರ ಒದಗಿಸಿಲ್ಲ. ಕೇವಲ ಶಂಕೆಯ ಆಧಾರದಲ್ಲಿ ಕ್ರಮ ಕೈಗೊಂಡಿರುವುದಾಗಿ ಹೇಳಿದೆ. ಸಂದೇಹಕ್ಕೂ ನಂಬಲು ಕಾರಣ ಇವೆ ಎಂಬ ಪರಿಕಲ್ಪನೆಗೂ ವ್ಯತ್ಯಾಸ ಇದೆ. ಸಂದೇಹದ ಆಧಾರದಲ್ಲಿ ಕ್ರಮ ಕೈಗೊಳ್ಳುವುದು ಸಂವಿಧಾನದ 300 ಎ ವಿಧಿಯನ್ನು ನೇರವಾಗಿ ಉಲ್ಲಂಘಿಸುತ್ತದೆ. ಇಂತಹ ಗಂಭೀರಕ ಕ್ರಮ ಕೈಗೊಳ್ಳಬೇಕಾದರೆ ದೃಢವಾದ ಸಾಕ್ಷ್ಯಗಳನ್ನು ಒದಗಿಸಬೇಕೆ ವಿನಾ ಊಹೆಯಷ್ಟೇ ಸಾಲದು ಎಂದು ವಿವರಿಸಿದೆ.
ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ನೀಡಿದ್ದ ಬ್ಯಾಂಕ್ ಖಾತೆ ಸ್ಥಗಿತ ಆದೇಶ ಕಾನೂನುಬದ್ಧವಲ್ಲ. ಮೇಲ್ಮನವಿ ನ್ಯಾಯಮಂಡಳಿ ಹೇಳಿರುವಂತೆ ಇ ಡಿ ಆದೇಶ ರದ್ದಾಗಬೇಕು ಎಂದು ಅದು ತೀರ್ಪು ನೀಡಿತು.
[ತೀರ್ಪಿನ ಪ್ರತಿ]