Kochadaiyaan Cinema Poster 
ಸುದ್ದಿಗಳು

ಕೊಚಾಡಿಯನ್ ಆರ್ಥಿಕ ನಷ್ಟ: ರಜಿನಿಕಾಂತ್‌ ಪತ್ನಿ ಲತಾ ವಿರುದ್ಧ ಫೋರ್ಜರಿ ಪ್ರಕರಣ ಕೈಬಿಡಲು ನ್ಯಾಯಾಲಯ ನಕಾರ

ಕೊಚಾಡಿಯನ್ ಸಿನಿಮಾ ನಷ್ಟಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಫೋರ್ಜರಿ, ಸುಳ್ಳು ಹೇಳಿಕೆ ಮತ್ತು ವಂಚನೆ ಆರೋಪಗಳನ್ನು ಕೈ ಬಿಡಬೇಕು ಎಂದು ಲತಾ ಕೋರಿದ್ದರು.

Bar & Bench

ತಮಿಳು ಚಿತ್ರರಂಗದ ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಅವ ಪತ್ನಿ ಲತಾ ಅವರ ವಿರುದ್ಧದ ಫೋರ್ಜರಿ (ನಕಲಿ ದಾಖಲೆ ಸೃಷ್ಟಿಸಿದ) ಪ್ರಕರಣದ ಆರೋಪಗಳನ್ನು ಕೈ ಬಿಡಲು ಬೆಂಗಳೂರಿನ ಮುಖ್ಯ ಮೆಟ್ರೊಪಾಲಿಟನ್‌ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ಈಚೆಗೆ ನಿರಾಕರಿಸಿದೆ.

ಕೊಚಾಡಿಯನ್ ಸಿನಿಮಾ ನಷ್ಟಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಫೋರ್ಜರಿ, ಸುಳ್ಳು ಹೇಳಿಕೆ ಮತ್ತು ವಂಚನೆ ಆರೋಪಗಳನ್ನು ಕೈ ಬಿಡಬೇಕು ಎಂದು ಕೋರಿ ಲತಾ ರಜಿನಿಕಾಂತ್‌ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ಜ್ಯೋತಿ ಶಾಂತಪ್ಪ ಕಾಳೆ ತಿರಸ್ಕರಿಸಿದ್ದಾರೆ.

ಪ್ರಕರಣದಲ್ಲಿ ತಮ್ಮ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸುವ ದಾಖಲೆಗಳನ್ನು ಪ್ರಾಸಿಕ್ಯೂಷನ್‌ ನ್ಯಾಯಾಲಯಕ್ಕೆ ಒದಗಿಸಿಲ್ಲ. ಆದ್ದರಿಂದ ಆರೋಪಗಳನ್ನು ಕೈ ಬಿಡಬೇಕು ಎಂಬ ಲತಾ ರಜಿನಿಕಾಂತ್‌ ಅವರು ಮಂಡಿಸಿದ್ದ ವಾದವನ್ನು ನ್ಯಾಯಾಲಯ ತಳ್ಳಿಹಾಕಿದೆ.

ಪ್ರಕರಣ ಸಂಬಂಧ ಪೊಲೀಸರು ಎಫ್‌ಐಆರ್‌ ದಾಖಲಿಸಿ, ತನಿಖೆ ನಡೆಸಿದ್ದಾರೆ. ಸಾಕ್ಷಿಗಳ ಹೇಳಿಕೆ ದಾಖಲಿಸಿದ್ದಾರೆ ಹಾಗೂ ಮಹಜರು ನಡೆಸಿದ್ದಾರೆ. ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿ ಸಾಕ್ಷಿಗಳನ್ನು ಉಲ್ಲೇಖಿಸಿದ್ದು, ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದಾರೆ. ಸಾಕ್ಷಿಗಳಿಗೆ ಹೇಳಿಕೆಗಳನ್ನು ಮ್ಯಾಜಿಸ್ಟ್ರೇಟ್‌ ಕೋರ್ಟ್‌ ದಾಖಲಿಸಿಕೊಂಡಿದೆ. ವಿವಾದಿತ ದಾಖಲೆಗಳು, ಮಹಜರು, ಆಸ್ತಿ ನಮೂನೆ, ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಸಹ ಇದೆ. ಅವುಗಳನ್ನು ಪರಿಶೀಲನೆ ನಡೆಸಬೇಕಿದೆ. ಕೇವಲ ಅಸ್ಪಷ್ಟ ಹೇಳಿಕೆ ನೀಡಿರುವುದನ್ನು ಹೊರತಪಡಿಸಿ ತಮ್ಮ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ದಾಖಲೆಗಳು ಮೇಲ್ನೋಟಕ್ಕೆ ಇಲ್ಲ ಎಂಬ ವಾದವನ್ನು ದೃಢಪಡಿಸುವಂತಹ ಯಾವುದೇ ಆಧಾರಗಳನ್ನು ಆರೋಪಿಯು ನ್ಯಾಯಾಲಯದ ಮುಂದಿಟ್ಟಿಲ್ಲ ಎಂದು ಆದೇಶದಲ್ಲಿ ಪೀಠ ತಿಳಿಸಿದೆ.

ಅಲ್ಲದೆ, ಎಫ್‌ಐಆರ್‌, ದೂರು ಮತ್ತು ಆರೋಪ ಪಟ್ಟಿಯಲ್ಲಿ ತಮ್ಮ ವಿರುದ್ಧ ಯಾವುದೇ ಆರೋಪಗಳಿಲ್ಲ ಮತ್ತು ಇದು ಸಂಪೂರ್ಣವಾಗಿ ಸಿವಿಲ್‌ ಸ್ವರೂಪದ ಪ್ರಕರಣವಾಗಿದೆ ಎಂಬುದಾಗಿ ಆರೋಪಿ ನೀಡಿರುವ ಕಾರಣಗಳು ಆರೋಪಗಳನ್ನು ಕೈ ಬಿಡಲುವುದಕ್ಕೆ ಸಾಕಾಗುವುದಿಲ್ಲ. ಆರೋಪಗಳನ್ನು ಹೊರಿಸುವ ಸಂದರ್ಭದಲ್ಲಿ ಆರೋಪಿ ವಿರುದ್ಧದ ಪ್ರಕ್ರಿಯೆ ಮುಂದುವರಿಯಲು ಮೇಲ್ನೋಟಕ್ಕೆ ಲಭ್ಯವಿರುವ ದಾಖಲೆಗಳನ್ನು ಪರಿಗಣಿಸಬೇಕಾಗುತ್ತದೆ ಎಂಬುದು ಸಿದ್ಧಸೂತ್ರವಾಗಿದೆ. ಆರೋಪಿಗಳ ವಿರುದ್ಧ ಮುಂದುವರಿಯಲು ತನಿಖಾಧಿಕಾರಿಗಳು ಪ್ರಾಥಮಿಕ ದಾಖಲೆ ಮತ್ತು ಹೇಳಿಕೆಗಳನ್ನು ಮೇಲ್ನೋಟಕ್ಕೆ ತೋರಿಸಿದ್ದಾರೆ. ಆದ್ದರಿಂದ, ಲತಾ ಅವರ ವಿರುದ್ಧದ ಆರೋಪಗಳನ್ನು ಕೈ ಬಿಡಲು ಸೂಕ್ತ ಕಾರಣಗಳಿಲ್ಲ ಎಂದು ತಿಳಿಸಿರುವ ನ್ಯಾಯಾಲಯ ಅರ್ಜಿ ವಜಾಗೊಳಿಸಿದೆ.

ಪ್ರಕರಣದ ಹಿನ್ನೆಲೆ: ರಜಿನಿಕಾಂತ್ ಅವರ ಪುತ್ರಿ ತಮಿಳು ಚಿತ್ರ ಕೊಚ್ಚಾಡಿಯನ್ ಸಿನಿಮಾವನ್ನು ನಿರ್ದೇಶಿಸಿದ್ದರು. ಆ ಚಿತ್ರದ ಸಂಬಂಧ ಮೆರ್ಸಸ್ ಆ್ಯಡ್ ಬ್ಯೂರೋ ಅಡ್ವರ್ಟೈಸ್‌ಮೆಂಟ್‌ ಪ್ರೈವೇಟ್ ಲಿಮಿಟೆಡ್ ಮತ್ತು ಮೆರ್ಸಸ್ ಮೀಡಿಯಾ ಒನ್ ಗ್ಲೋಬಲ್ ಎಂಟರ್‌ಟೈನ್ಮೆಂಟ್ ಲಿಮಿಟೆಡ್ ನಡುವೆ ಆರ್ಥಿಕ ವಹಿವಾಟು ನಡೆದಿತ್ತು. ಮೀಡಿಯಾ ಒನ್ ಕಂಪನಿ ಪರವಾಗಿ ಲತಾ ಅವರು ಭದ್ರತಾ ಖಾತರಿ ನೀಡಿದ್ದರು. ಆದರೆ, ಚಿತ್ರ ನಷ್ಟಕ್ಕೆ ಗುರಿಯಾಗಿದರೂ ಆ್ಯಡ್ ಬ್ಯೂರೋ ಅಡ್ವರ್ಟೈಸ್‌ಮೆಂಟ್‌ ಪ್ರೈವೇಟ್ ಲಿಮಿಟೆಡ್‌ಗೆ ನಷ್ಟ ಪರಿಹಾರ ತುಂಬಿಕೊಟ್ಟಿರಲಿಲ್ಲ. ಈ ವಿವಾದ ಪತ್ರಿಕೆ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು.

ಈ ಕುರಿತ ಸುದ್ದಿಯನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರಬೇಕು ಎಂದು ಕೋರಿ ಲತಾ ಅವರು ಬೆಂಗಳೂರು ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು 2014ರ ಡಿಸೆಂಬರ್‌ 2ರಂದು ಮಾಧ್ಯಮಗಳ ವಿರುದ್ಧ ಪ್ರತಿಬಂಧಕಾದೇಶ ಮಾಡಿತ್ತು. ಆದರೆ, ಮಾಧ್ಯಮಗಳ ವಿರುದ್ಧ ಪ್ರತಿಬಂಧಕಾದೇಶ ಪಡೆಯಲು ಬೆಂಗಳೂರು ಪ್ರೆಸ್‌ಕ್ಲಬ್‌ಗೆ ಸಂಬಂಧವಿರದ ಸಂಸ್ಥೆಯ ಹೆಸರಿನಲ್ಲಿ ನಕಲಿ ಲೆಟರ್‌ ಹೆಡ್‌ ಸೃಷ್ಟಿಸುವ ಮೂಲಕ ಲತಾ ಅವರು ನಕಲಿ ದಾಖಲೆ ಸಲ್ಲಿಸಿದ್ದಾರೆ ಎಂದು ಆರೋಪಿಸಿ ಮೆರ್ಸಸ್ ಆ್ಯಡ್ ಬ್ಯೂರೋ ಅಡ್ವರ್ಟೈಸ್‌ಮೆಂಟ್‌ ಪ್ರೈವೇಟ್ ಲಿಮಿಟೆಡ್ ಕಂಪನಿಯು 2015ರ ಮೇ 30ರಂದು ಹಲಸೂರು ಗೇಟ್ ಪೊಲೀಸ್ ಠಾಣೆಗೆ ಖಾಸಗಿ ದೂರು ದಾಖಲಿಸಿತ್ತು.

ಈ ದೂರು ಆಧರಿಸಿ ಪೊಲೀಸರು ಜೂನ್‌ 9ರಂದು ಲತಾ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ನಂತರ ತನಿಖೆ ಪೂರ್ಣಗೊಳಿಸಿ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಇದರಿಂದ ಆರೋಪ ಪಟ್ಟಿಯಲ್ಲಿ ತಮ್ಮ ವಿರುದ್ಧ ಮಾಡಲಾಗಿರುವ ಆರೋಪಗಳನ್ನು ಕೈ ಬಿಡಬೇಕು ಎಂದು ಕೋರಿ ಲತಾ ಅವರು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

Halsur Gate PS vs Latha Rajinikanth.pdf
Preview