ಕೊಚಾಡಿಯನ್ ಆರ್ಥಿಕ ನಷ್ಟ ಪ್ರಕರಣ: ರಜನಿಕಾಂತ್‌ ಪತ್ನಿ ಲತಾ ವಿರುದ್ಧ ಫೋರ್ಜರಿ ಕೇಸ್ ಮುಂದುವರಿಸಲು ಹೈಕೋರ್ಟ್‌ ಆದೇಶ

ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ವಂಚನೆ, ಸುಳ್ಳು ಹೇಳಿಕೆ ಮತ್ತು ನಕಲಿ ಸಾಕ್ಷ್ಯ ಬಳಕೆ ಆರೋಪಗಳನ್ನು ರದ್ದುಪಡಿಸಿ ಕರ್ನಾಟಕ ಹೈಕೋರ್ಟ್‌ ಆದೇಶ ಮಾಡಿದೆ.
Kochadaiyaan Cinema Poster
Kochadaiyaan Cinema Poster
Published on

ತಮಿಳು ಚಿತ್ರರಂಗದ ಸೂಪರ್‌ ಸ್ಟಾರ್‌ ರಜನಿಕಾಂತ್ ಅವರ ಪತ್ನಿ ಲತಾ ವಿರುದ್ಧದ ಫೋರ್ಜರಿ (ನಕಲಿ ದಾಖಲೆ) ಪ್ರಕರಣವನ್ನು ಮುಂದುವರಿಸಲು ವಿಚಾರಣಾಧೀನ ನ್ಯಾಯಾಲಯಕ್ಕೆ ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶಿಸಿದೆ.

ಕೊಚಾಡಿಯನ್ ಸಿನಿಮಾದಿಂದ ಆದ ಆರ್ಥಿಕ ನಷ್ಟಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ನಕಲಿ, ಸುಳ್ಳು ಹೇಳಿಕೆ ಮತ್ತು ವಂಚನೆ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಲತಾ ಅವರು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಅರ್ಜಿದಾರರ ವಿರುದ್ಧದ ವಂಚನೆ ಹಾಗೂ ಸುಳ್ಳು ಪ್ರಕರಣವನ್ನು ಮಾತ್ರ ರದ್ದುಪಡಿಸಿದೆ.

ನಕಲು ಮಾಡಿರುವ ಆಪಾದನೆಯ ಪ್ರಕರಣವನ್ನು ಮುಂದುವರಿಸಿ ಕಾನೂನು ಪ್ರಕಾರ ಇತ್ಯರ್ಥಪಡಿಸುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಪೀಠ ಆದೇಶ ಮಾಡಿದೆ.

ಪ್ರಕರಣದ ಹಿನ್ನೆಲೆ: ರಜನಿಕಾಂತ್ ಅವರ ಪುತ್ರಿ ತಮಿಳು ಚಿತ್ರ ಕೊಚಾಡಿಯನ್ ಸಿನಿಮಾವನ್ನು ನಿರ್ದೇಶಿಸಿದ್ದರು. ಆ ಚಿತ್ರದ ಸಂಬಂಧ ಮೆರ್ಸಸ್ ಆ್ಯಡ್ ಬ್ಯೂರೊ ಅಡ್ವರ್‌ಟೈಸ್ಮೆಂಟ್ ಪ್ರೈವೇಟ್ ಲಿಮಿಟೆಡ್ ಮತ್ತು ಮೆರ್ಸಸ್ ಮೀಡಿಯಾ ಒನ್ ಗ್ಲೋಬಲ್ ಎಂಟರ್‌ಟೈನ್‌ಮಂಟ್‌ ಲಿಮಿಟೆಡ್ ನಡುವೆ ಹಣಕಾಸು ವ್ಯವಹಾರ ನಡೆದಿತ್ತು.

ಮೀಡಿಯಾ ಒನ್ ಕಂಪೆನಿ ಪರವಾಗಿ ಲತಾ ಅವರು ಭದ್ರತಾ ಖಾತರಿ ನೀಡಿದ್ದರು. ಆದರೆ, ಚಿತ್ರ ನಷ್ಟಕ್ಕೆ ಗುರಿಯಾಗಿದ್ದರೂ ಮೆರ್ಸಸ್ ಆ್ಯಡ್ ಬ್ಯೂರೊ ಅಡ್ವರ್‌ಟೈಸ್ಮಂಟ್ ಪ್ರೈವೇಟ್ ಲಿಮಿಟೆಡ್‌ಗೆ ನಷ್ಟ ಪರಿಹಾರ ತುಂಬಿಕೊಟ್ಟಿರಲಿಲ್ಲ. ಈ ವಿವಾದ ಪತ್ರಿಕೆ ಹಾಗೂ ವಿದ್ಯುನ್ಮಾನ ಮಾಧ್ಯಮದಲ್ಲಿ ಪ್ರಸಾರವಾಗಿತ್ತು. ಈ ಕುರಿತ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರಬೇಕು ಎಂದು ಕೋರಿ ಲತಾ ಅವರು ಬೆಂಗಳೂರಿನ ನಗರ ಸಿವಿಲ್ ಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ನ್ಯಾಯಾಲಯವು 2014ರ ಡಿಸೆಂಬರ್‌ 2ರಂದು ಮಾಧ್ಯಮಗಳ ವಿರುದ್ದ ಪ್ರತಿಬಂಧಕಾದೇಶ ಮಾಡಿತ್ತು. ಆದರೆ, 2015ರಲ್ಲಿ ಫೆಬ್ರವರಿ 13ರಂದು ವಿಚಾರಣೆಯನ್ನು ವಿಚಾರಣಾ ವ್ಯಾಪ್ತಿ ಹೊಂದಿರುವ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು. ಈ ವೇಳೆ ಮಾಧ್ಯಮಗಳಿಗೆ ನಿರ್ಬಂಧ ಹೇರಿದ್ದ ಆದೇಶವನ್ನು ರದ್ದುಪಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಲತಾ ಅವರ ಅರ್ಜಿಯನ್ನು ಹೈಕೋರ್ಟ್ 2016ರಲ್ಲಿ ವಜಾಗೊಳಿಸಿತ್ತು.

ಈ ಮಧ್ಯೆ, ಮಾಧ್ಯಮಗಳ ವಿರುದ್ಧ ಪ್ರತಿಬಂಧಕಾದೇಶ ಪಡೆಯಲು ಬೆಂಗಳೂರು ಪ್ರೆಸ್‌ಕ್ಲಬ್ ಅಧೀನದಲ್ಲಿ ಇರದ ಸಂಸ್ಥೆಯೊಂದರ ನಕಲಿ ದಾಖಲೆಯನ್ನು ಲತಾ ಅವರು ಸಲ್ಲಿಸಿದ್ದಾರೆ ಎಂದು ಆರೋಪಿಸಿ ಮೆರ್ಸಸ್ ಆ್ಯಡ್ ಬ್ಯೂರೊ ಅಡ್ವರ್‌ಟೈಸ್ಮೆಂಟ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯು 2015ರ ಮೇ 30ರಂದು ಹಲಸೂರು ಗೇಟ್ ಪೊಲೀಸ್ ಠಾಣೆಗೆ ಖಾಸಗಿ ದೂರು ದಾಖಲಿಸಿತ್ತು. 2015ರ ಜೂನ್‌ 9ರಂದು ಲತಾ ಅವರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ನಂತರ ತನಿಖೆ ಪೂರ್ಣಗೊಳಿಸಿ ಅಧೀನ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

Also Read
ಪಿಎಸ್‌ಐ ಹಗರಣ: ಜಾಮೀನು ಕೋರಿ ಸೆಷನ್ಸ್‌ ನ್ಯಾಯಾಲಯದ ಕದ ತಟ್ಟಿದ ಪೌಲ್‌; ಆಕ್ಷೇಪಣೆ ಸಲ್ಲಿಸಲು ಸಿಐಡಿಗೆ ನಿರ್ದೇಶನ

ಪ್ರಕರಣದ ಸಂಬಂಧ 1ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಸುಳ್ಳು ಹಾಗೂ ನಕಲಿ ಸಾಕ್ಷ್ಯ ಬಳಕೆ, ಸುಳ್ಳು ಹೇಳಿಕೆ, ವಂಚನೆ, ನಕಲಿ ಪ್ರಕರಣ ಸಂಬಂಧ ಸಂಜ್ಞೇಯ (ಕಾಗ್ನಿಜೆನ್ಸ್) ಪರಿಗಣಿಸಿ ಲತಾ ಅವರಿಗೆ ಸಮನ್ಸ್ ಜಾರಿ ಮಾಡಿ 2021ರ ಮಾರ್ಚ್‌ 27ರಂದು ಆದೇಶಿಸಿತ್ತು. ಈ ಸಂಬಂಧದ ಎಫ್‌ಐಆರ್‌ ಮತ್ತು ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಲತಾ 2021ರಲ್ಲಿ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು.

ಈಗ ಹೈಕೋರ್ಟ್, ಅರ್ಜಿದಾರರ ವಿರುದ್ಧ ನಕಲು ಆರೋಪಕ್ಕೆ ಸಂಬಂಧಿಸಿದಂತೆ ದೋಷಾರೋಪ ಪಟ್ಟಿಯಲ್ಲಿ ಸಾಕ್ಷ್ಯಧಾರಗಳು ಲಭ್ಯ ಇವೆ. ಆ ಪ್ರಕರಣದ ಕುರಿತ ವಿಚಾರಣೆಯನ್ನು ಅಧೀನ ನ್ಯಾಯಾಲಯ ಮುಂದುವರಿಸಬಹುದು ಎಂದು ಆದೇಶಿಸಿದೆ. ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ವಂಚನೆ, ಸುಳ್ಳು ಹೇಳಿಕೆ ಮತ್ತು ನಕಲಿ ಸಾಕ್ಷ್ಯ ಬಳಕೆ ಆರೋಪಗಳನ್ನು ರದ್ದುಪಡಿಸಿದೆ.

Kannada Bar & Bench
kannada.barandbench.com