ಸುದ್ದಿಗಳು

ತಾಯಿಯ ಕೊಲೆ ಮಾಡಿ ಭಕ್ಷಣೆಗಾಗಿ ದೇಹ ತುಂಡರಿಸಿದ್ದ ವ್ಯಕ್ತಿಗೆ ಗಲ್ಲುಶಿಕ್ಷೆ ವಿಧಿಸಿದ ಕೊಲ್ಹಾಪುರ ನ್ಯಾಯಾಲಯ

Bar & Bench

ವಿರಳ ಪ್ರಕರಣವೊಂದರಲ್ಲಿ ತನ್ನ ತಾಯಿಯನ್ನು ಅಮಾನುಷವಾಗಿ ಹತ್ಯೆ ಮಾಡಿ ತಿನ್ನುವ ಉದ್ದೇಶದಿಂದ ದೇಹ ತುಂಡರಿಸಿದ್ದ 35 ವರ್ಷದ ವ್ಯಕ್ತಿಯೊಬ್ಬನಿಗೆ ಮಹಾರಾಷ್ಟ್ರದ ಕೊಲ್ಹಾಪುರದ ನ್ಯಾಯಾಲಯವೊಂದು ಮರಣದಂಡನೆ ವಿಧಿಸಿದೆ.

ಆರೋಪಿ ಸುನೀಲ್ ರಾಮ ಕುಚ್ಕೋರವಿಗೆ ನೇಣುಶಿಕ್ಷೆ ವಿಧಿಸುವಂತೆ ಕೊಲ್ಹಾಪುರದ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಮಹೇಶ್ ಕೃಷ್ಟಾಜಿ ಜಾಧವ್ ಆದೇಶ ಹೊರಡಿಸಿದ್ದು ಇದು ಹೈಕೋರ್ಟ್‌ ದೃಢೀಕರಣಕ್ಕೆ ಒಳಪಡುತ್ತದೆ ಎಂದು ತಿಳಿಸಿದ್ದಾರೆ. ಈ ಕೆಳಕಂಡ ಅಂಶಗಳನ್ನು ಆಧರಿಸಿ ನ್ಯಾಯಾಲಯ ಆರೋಪಿಗೆ ಗಲ್ಲುಶಿಕ್ಷೆ ವಿಧಿಸಿದೆ:

  • ಅಪರಾಧದ "ಸಮಾಜ ವಿರೋಧಿ" ಸ್ವರೂಪವನ್ನು, ಪ್ರಕರಣಕ್ಕೆ ಸಂಬಂಧಿಸಿದ ಸಂಗತಿಗಳು ಚಿತ್ರಿಸಿವೆ ಮತ್ತು ಈ ಘಟನೆ ಸಮಾಜದ ಸಮಷ್ಠಿ ಪ್ರಜ್ಞೆಯನ್ನು ಘಾಸಿಗೊಳಿಸಿದೆ.

  • ತಾಯಿಯನ್ನು ಸ್ವಂತ ಮಗನೇ ಕೊಲ್ಲುವ ಸುದ್ದಿ ಸಮಾಜದಲ್ಲಿ ತೀವ್ರ ದುಃಖ ಮತ್ತು ನೋವುಂಟು ಮಾಡುತ್ತದೆ.

  • ಪ್ರಸ್ತುತ ಪ್ರಕರಣದಲ್ಲಿ ಕೇವಲ ಕೊಲೆಯೊಂದೇ ನಡೆಯದೆ ತೀವ್ರ ಕ್ರೌರ್ಯ ಮತ್ತು ಲಜ್ಜಾಹೀನತೆ ಎದ್ದುಕಾಣುತ್ತದೆ. ಆರೋಪಿ ತನ್ನ ತಾಯಿಯ ಹೃದಯ ಮತ್ತು ಪಕ್ಕೆಲಬುಗಳನ್ನು ತಿನ್ನಲು ಉದ್ದೇಶಿಸಿದ್ದ.

  • ಶವಪರೀಕ್ಷೆ ವೇಳೆ ಬಹಳ ಕ್ರೂರ ರೀತಿಯಲ್ಲಿ ಕೃತ್ಯ ಎಸಗಿರುವುದು ಕಂಡುಬಂದಿದೆ.

  • ಆಕೆ ಅನುಭವಿಸಿದ ಯಾತನೆ ಅವರ್ಣನೀಯ. ಮದ್ಯದಾಹಕ್ಕಾಗಿ ಆತ ಈ ಕೃತ್ಯ ಎಸಗಿದ್ದಾನೆ. ತನ್ನ ಅಸಹಾಯಕ ತಾಯಿಯ ಬದುಕನ್ನು ಬಲವಂತವಾಗಿ ಕಿತ್ತುಕೊಂಡಿದ್ದು ಇದು ತಾಯ್ತನಕ್ಕೆ ಎಸಗುವ ಅತಿದೊಡ್ಡ ಅವಮಾನ.

  • ಜನನಾಂಗ, ಕುತ್ತಿಗೆ ಮತ್ತಿತರ ಕಡೆ ಆದ ಗಾಯಗಳು, ತಾಯಿಯ ಹೃದಯ ಮತ್ತು ಪಕ್ಕೆಲಬುಗಳನ್ನು ತಿನ್ನಲು ಯತ್ನಿಸಿರುವುದು ಪೈಶಾಚಿಕ ಕೃತ್ಯವನ್ನು ಸಾಬೀತುಪಡಿಸುತ್ತದೆ. ಅಪರೂಪದಲ್ಲೇ ಅಪರೂಪವಾದ ಈ ಪ್ರಕರಣದಲ್ಲಿ ಮರಣದಂಡನೆ ವಿಧಿಸಬೇಕಿದೆ.

ಆಗಸ್ಟ್ 2017ರಲ್ಲಿ ಆರೋಪಿ ಕುಚ್ಕೋರವಿಯ ತಾಯಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಮತ್ತುಆಕೆಯ ಆಕ್ರಂದನ ಕೇಳಿ ನೆರೆಹೊರೆಯವರು ಪೊಲೀಸರಿಗೆ ದೂರು ನೀಡಿದರು. ಆಕೆಯ ರಕ್ತಸಿಕ್ತ ದೇಹದಿಂದ ಅಂಗಾಂಗಗಳು ಹೊರಬಂದಿರುವುದು ಪೊಲೀಸರಿಗೆ ಕಂಡುಬಂದಿತ್ತು. ಉದ್ರಿಕ್ತ ಜನರ ಗುಂಪು ಆರೋಪಿಯನ್ನು ಥಳಿಸಲು ಮುಂದಾದಾಗ ಪೊಲೀಸರು ಆತನನ್ನು ರಕ್ಷಿಸಿ ಠಾಣೆಗೆ ಎಳೆದೊಯ್ದರು. ಆರೋಪಿಯ ಸಹೋದರ ಬಳಿಕ ದೂರು ನೀಡಿದ್ದ. ಘಟನೆಯನ್ನು ಕಣ್ಣಾರೆ ಕಂಡ ಪ್ರತ್ಯಕ್ಷದರ್ಶಿಗಳು ಇಲ್ಲದಿರುವುದರಿಂದ ಪ್ರಕರಣ ಸಾಂದರ್ಭಿಕ ಸಾಕ್ಷ್ಯವನ್ನು ಅವಲಂಬಿಸಿತ್ತು. ಆರೋಪಿ ಪರ ವಕೀಲ ವಿ ಡಿ ಲಂಬೋದರ್‌ ಅವರು ವಾದ ಮಂಡಿಸಿದ್ದರು.