ಎನ್‌ಎಲ್‌ಎಸ್‌ಐಯು ಸಾಮೂಹಿಕ ಅತ್ಯಾಚಾರ ಪ್ರಕರಣ: ಆರೋಪಿಗಳಿಗೆ ಮರಣದಂಡನೆ ಶಿಕ್ಷೆಗೆ ಶಿಫಾರಸು ಮಾಡಿದ ಹೈಕೋರ್ಟ್

ಬೆಂಗಳೂರಿನಲ್ಲಿ 2012ರಲ್ಲಿ ಎನ್‌ಎಲ್‌ಎಸ್‌ಐಯು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸೆಗಿದ್ದ ಏಳು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿರುವುದನ್ನು ಎತ್ತಿ ಹಿಡಿದಿರುವ ನ್ಯಾಯಾಲಯವು ಮರಣದಂಡನೆ ಶಿಕ್ಷೆಗೆ ಶಿಫಾರಸು ಮಾಡಿದೆ.
Gang Rape, Capital Punishment, Karnataka High Court
Gang Rape, Capital Punishment, Karnataka High Court
Published on

ಕೊಲೆಗಿಂತಲೂ ಸಾಮೂಹಿಕ ಅತ್ಯಾಚಾರ ಅತ್ಯಂತ ಘೋರ ಎಂದಿರುವ ಕರ್ನಾಟಕ ಹೈಕೋರ್ಟ್‌ ಹಾಲಿ ಇರುವ ಜೀವಾವಧಿ ಶಿಕ್ಷೆ ಹಾಗೂ ದಂಡದ ಜೊತೆಗೆ ಮರಣದಂಡನೆ ಶಿಕ್ಷೆ ವಿಧಿಸಲು ಶಿಫಾರಸು ಮಾಡಿದೆ.

ಬೆಂಗಳೂರಿನಲ್ಲಿ 2012ರಲ್ಲಿ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಏಳು ಮಂದಿಗೆ ಜೀವಾವಧಿ ಶಿಕ್ಷೆಯನ್ನು ಖಾಯಂಗೊಳಿಸಿರುವ ನ್ಯಾಯಾಲಯವು ಮೇಲಿನ ಶಿಫಾರಸು ಮಾಡಿದೆ.

ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ಕೆ ನಟರಾಜನ್‌ ಅವರಿದ್ದ ವಿಭಾಗೀಯ ಪೀಠವು ತನ್ನ ಆದೇಶದಲ್ಲಿ, ಹೀಗೆ ಹೇಳಿದೆ,

“ಸಮಾಜದಲ್ಲಿ ʼಸಾಮೂಹಿಕ ಅತ್ಯಾಚಾರ’ದ ಪಿಡುಗನ್ನು ತಡೆಯುವ ಸಲುವಾಗಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 10ರ ಅಡಿಯಲ್ಲಿ ‘ಮಹಿಳೆ’ ವ್ಯಾಖ್ಯಾನವನ್ನು ಗಮನದಲ್ಲಿರಿಸಿಕೊಂಡು ಈಗಾಗಲೇ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 376AB ಮತ್ತು 376DBಗೆ ಸಮಾನವಾಗಿ ಜಾರಿಯಲ್ಲಿರುವ ಜೀವಾವಧಿ ಶಿಕ್ಷೆ ಮತ್ತು ದಂಡದ ಜೊತೆಗೆ ಐಪಿಸಿಯ ಸೆಕ್ಷನ್‌ 376D ಗೆ ತಿದ್ದುಪಡಿ ಮಾಡುವ ಮೂಲಕ ಸಾಮೂಹಿಕ ಅತ್ಯಾಚಾರ ಅಪರಾಧದ ಶಿಕ್ಷೆಯನ್ನು ಮರಣದಂಡನೆ ಶಿಕ್ಷೆಯಾಗಿ ತಿದ್ದುಪಡಿ ಮಾಡುವ ಸಂಬಂಧ ವಿಧಾನ ಮಂಡಲ/ಕೇಂದ್ರ ಸರ್ಕಾರಕ್ಕೆ ನಾವು ಈ ಮೂಲಕ ಶಿಫಾರಸು ಮಾಡುತ್ತಿದ್ದೇವೆ.”
ಕರ್ನಾಟಕ ಹೈಕೋರ್ಟ್

“ಮಹಿಳೆಯರ ಭದ್ರತೆಯ ದೃಷ್ಟಿಯಿಂದ ಲಿಂಗ ಸಂವೇದನೆ ಹೆಚ್ಚಿಸುವುದು ಅತಿಮುಖ್ಯ ಎಂಬ ಭರವಸೆ ಮತ್ತು ನಂಬಿಕೆಯನ್ನು ನಾವು ಹೊಂದಿದ್ದೇವೆ. ನಿರ್ಭಯಾ ಪ್ರಕರಣದ ನಂತರ ಕಾನೂನಿಗೆ ತಿದ್ದುಪಡಿ ಮಾಡಿ ಗಂಭೀರ ಕ್ರಮಕೈಗೊಂಡಿದ್ದರೂ ಮಹಿಳಾ ಸುರಕ್ಷತೆ ಖಾತರಿಪಡಿಸಲಾಗಿಲ್ಲ. ಗೃಹ ಇಲಾಖೆ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಗಳು, ಮಹಿಳಾ ಸಂಸ್ಥೆಗಳು, ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಬೇಕು” ಎಂದು ನ್ಯಾಯಪೀಠ ಸಲಹೆ ನೀಡಿದೆ.

“…ಪ್ರಾಯೋಗಿಕ ಭಾಗವಾಗಿ ಕೆಲವು ಸಲಹೆಗಳನ್ನು ಪರಿಗಣಿಸುವುದು ಉತ್ತಮ. ಸಾರ್ವಜನಿಕ ಸಾರಿಗೆಗಳಾದ ಆಟೊ, ಟ್ಯಾಕ್ಸಿ ಮತ್ತು ಬಸ್‌ ಇತರೆ ಕಡೆ ಬ್ಯಾನರ್‌ ಮತ್ತು ಭಿತ್ತಿಪತ್ರಗಳನ್ನು ಅಂಟಿಸಬೇಕು. ಬೀದಿ ದೀಪಗಳು, ಬಸ್‌ ನಿಲ್ದಾಣಗಳಲ್ಲಿ ವಿದ್ಯುತ್‌ ವ್ಯವಸ್ಥೆ, ಪ್ರಮುಖ ಸಮಯದಲ್ಲಿ ಹೆಚ್ಚಿನ ಪೊಲೀಸ್‌ ಗಸ್ತು ವ್ಯವಸ್ಥೆ ಮಾಡಬೇಕು. ಕತ್ತಲು ವ್ಯಾಪಿಸಿರುವ ಪ್ರದೇಶ ಮತ್ತು ಏಕಾಂತದ ಸ್ಥಳಗಳಾದ ಪಾರ್ಕ್‌ಗಳು, ಹಾದಿಗಳು ಮತ್ತಿತರ ಕಡೆ ಪೊಲೀಸ್/ಭದ್ರತೆ ಕಲ್ಪಿಸಬೇಕು. ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು…” ಎಂದೂ ಸಲಹೆ ನೀಡಿದೆ.

ಘಟನೆಯ ಹಿನ್ನೆಲೆ: 2012ರ ಅಕ್ಟೋಬರ್‌ 13ರಂದು ಬೆಂಗಳೂರು ವಿಶ್ವವಿದ್ಯಾಲಯದ ಪ್ರಮುಖ ಕಟ್ಟಡ ಮತ್ತು ಎನ್‌ಎಲ್‌ಎಸ್‌ಐಯು ನಡುವಿನ ರಸ್ತೆಯಲ್ಲಿ ಕಾರು ನಿಲ್ಲಿಸಿಕೊಂಡು ಸಂತ್ರಸ್ತೆ ಮತ್ತು ಆಕೆಯ ಗೆಳೆಯ ಕುಳಿತಿದ್ದರು. ಈ ವೇಳೆ ಕಬ್ಬಿಣದ ರಾಡು, ಚಾಕು, ಕಠಾರಿ ಮತ್ತು ರೋಪ್‌ ಒಳಗೊಂಡ ಮಾರಕಾಸ್ತ್ರಗಳ ಹೊಂದಿದ್ದ ಅಪರಾಧಿಗಳು ಯುವತಿಯರ ಕಾರನ್ನು ಸುತ್ತುವರಿದರು. ಅಪರಾಧಿಗಳು ಕಾರಿನ ಎಡಭಾಗದ ಮುಂದಿನ ಬಾಗಿಲನ್ನು ಬಲವಂತವಾಗಿ ತೆರೆದು ಸಂತ್ರಸ್ತ ಯುವತಿಯನ್ನು ಕಾಡಿನ ಒಳಗೆ ಎಳೆದೊಯ್ದು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು.

ಅಪರಾಧಿಗಳನ್ನು ಬಂಧನದ ನಂತರ ಅವರ ವಿರುದ್ಧ ಐಪಿಯ ಸೆಕ್ಷನ್‌ಗಳಾದ 427, 366, 323, 324, 397, 376(2)(g)‌ ಮತ್ತು ಅದರೊಟ್ಟಿಗೆ ಸೆಕ್ಷನ್ 149ರ ಅಡಿ ಪರಿಗಣಿಸಿ ವಿಚಾರಣಾಧೀನ ನ್ಯಾಯಾಲಯವು ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯಲ್ಲಿ ಮಧ್ಯಪ್ರವೇಶಿಸಲು ಹೈಕೋರ್ಟ್‌ ನಿರಾಕರಿಸಿದೆ.

“ಆರೋಪಿತರು ಮೃಗಗಳ ರೀತಿಯಲ್ಲಿ ವರ್ತಿಸಿದ್ದಾರೆ. ಮೊಲವನ್ನು ಕಾಡುಪ್ರಾಣಿಗಳು ಬೇಟೆಯಾಡುವ ರೀತಿಯಲ್ಲಿ ತಮ್ಮ ಲೈಂಗಿಕ ದಾಹ ತೀರಿಸಿಕೊಳ್ಳಲು ಅಪರಾಧಿಗಳು ಯುವತಿಯ ಮೇಲೆ ಎರಗಿದ್ದಾರೆ. ಹಾಲಿ ಪ್ರಕರಣದಲ್ಲಿ ಅಪರಾಧಿಗಳು ತಮ್ಮ ಲೈಂಗಿಕ ದಾಹ ತೀರಿಸಿಕೊಳ್ಳುವ ಉದ್ದೇಶದಿಂದ ಸಂತ್ರಸ್ತ ಯುವತಿಯ ಮೇಲೆ ಏಕಕಾಲಕ್ಕೆ ಒಬ್ಬರಾದ ಮೇಲೆ ಒಬ್ಬರು, ಕೆಲವರು ಎರಡು ಮತ್ತು ಮೂರು ಬಾರಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಇದು ಮನುಷ್ಯರೊಬ್ಬರ ಮೇಲೆ ಎಸಗುವ ಹೇಯ ಕೃತ್ಯವಾಗಿದ್ದು, ಅಪರಾಧಿಗಳು ಕ್ರೂರ ಪ್ರಾಣಿಗಳಿಗಿಂತಲೂ ಕಡೆಯಾಗಿದ್ದಾರೆ, ಇದನ್ನು ಸಹಿಸಲಾಗದು.”
ಕರ್ನಾಟಕ ಹೈಕೋರ್ಟ್

ಸಂತ್ರಸ್ತೆಗೆ ಗಂಭೀರ ಹಾನಿ ಮಾಡಲಾಗಿದ್ದು ಅದನ್ನು ಸರಿಪಡಿಸಲಾಗದು. ಜೀವನ ಪರ್ಯಂತ ಸಂತ್ರಸ್ತೆ ಯಾತನೆ ಅನುಭವಿಸಬೇಕಿದೆ ಎಂದು ಕನಿಕರದ ತೋರುವಂತೆ ಅಪರಾಧಿಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

"ಸಾರ್ವಜನಿಕ ಜಿಗುಪ್ಸೆಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ ನ್ಯಾಯಾಲಯವು ಅಪರಾಧವನ್ನು ಆಧರಿಸಿ ಶಿಕ್ಷೆ ವಿಧಿಸಬೇಕೆಂದು ನ್ಯಾಯದಾನ ಬಯಸುತ್ತದೆ. ನ್ಯಾಯಸಮ್ಮತ ಶಿಕ್ಷೆ ವಿಧಿಸುವಾಗ ನ್ಯಾಯಾಲಯವು ಅಪರಾಧಿಯ ಹಕ್ಕುಗಳ ಮೇಲಷ್ಟೇ ಅಲ್ಲ ದುಷ್ಕೃತ್ಯದ ಸಂತ್ರಸ್ತರ ಹಕ್ಕುಗಳ ಮೇಲೂ ಗಮನವಿಟ್ಟರಬೇಕಾಗುತ್ತದೆ” ಎಂದು ಹೇಳಿದೆ.

Also Read
ಬ್ರೇಕಿಂಗ್: ಹಾಥ್‌ರಸ್‌ ಸಂತ್ರಸ್ತೆ ಅಂತ್ಯಕ್ರಿಯೆ ಕುರಿತು ಸ್ವಯಂಪ್ರೇರಿತ ವಿಚಾರಣೆಗೆ ಮುಂದಾದ ಅಲಹಾಬಾದ್ ಹೈಕೋರ್ಟ್‌

“ಸಂತ್ರಸ್ತ ಯುವತಿಯ ಮೇಲೆ ಆರೋಪಿಗಳು ಹೇಯ ಕೃತ್ಯ ಎಸಗಿರುವುದರಿಂದ ದೇಶದ ಕಾನೂನು ಮತ್ತು ಸುವ್ಯವಸ್ಥೆ, ವಿಶೇಷವಾಗಿ ಕರ್ನಾಟಕ ರಾಜ್ಯವನ್ನು ಜವಾಬ್ದಾರಿಯನ್ನಾಗಿಸಲಾಗುತ್ತದೆ. ದೇಶದ ವರ್ಚಸ್ಸಿಗೆ ಧಕ್ಕೆಯಾಗಿರುವುದರಿಂದ ಅಪರಾಧಿಗಳಿಗೆ ಯಾವುದೇ ತೆರನಾದ ಅನುಕಂಪ ತೋರಲಾಗದು” ಎಂದು ಪೀಠ ಹೇಳಿದೆ.

“ಅತ್ಯಾಚಾರ ಸಂತ್ರಸ್ತೆಯ ವಿರುದ್ಧದ ಅಪರಾಧ ಮಾತ್ರವಲ್ಲ. ಅದು ಇಡೀ ಸಮಾಜದ ವಿರುದ್ಧದ ಅಪರಾಧ” ಎಂದಿರುವ ಪೀಠವು ಸ್ವಾಮಿ ವಿವೇಕಾನಂದರ “ಒಂದು ದೇಶದ ಪ್ರಗತಿಯನ್ನು ಆ ದೇಶವು ಮಹಿಳೆಯರನ್ನು ನಡೆಸಿಕೊಳ್ಳುವುದರ ಮೇಲೆ ಅಳೆಯಲಾಗುತ್ತದೆ” ಎಂಬ ಹೇಳಿಕೆಯನ್ನು ಪ್ರಸ್ತಾಪಿಸಿತು. ಲಿಂಗ ಸಮಾನತೆಯ ವಿಚಾರವನ್ನು ಶಾಲಾ ಪಠ್ಯದ ಭಾಗವಾಗಿಸಬೇಕು ಎಂದೂ ಪೀಠ ಹೇಳಿದೆ.

“ನ್ಯಾಯಮೂರ್ತಿಗಳಾದ ನಾವು ಸಮಾಜದ ಪೋಷಕರು. ಹುಡುಗಿಯರು/ಮಹಿಳೆಯರ ಸಮಾಜದ ಬಗೆಗಿನ ನಮ್ಮ ಕಾಳಜಿಯನ್ನು ಒಂದೇ ವಾಕ್ಯದಲ್ಲಿ ಸಂಕ್ಷೇಪಿಸಿ ಹೇಳುವುದಾದರೆ “ಬೇರೊಬ್ಬರ ಪುತ್ರಿಯ ಮೇಲಿನ ದಾಳಿ, ನಮ್ಮ ಪುತ್ರಿಯ ಮೇಲಿನ ದಾಳಿಯಂತೆ.
ಕರ್ನಾಟಕ ಹೈಕೋರ್ಟ್‌
Kannada Bar & Bench
kannada.barandbench.com