ಕರ್ನಾಟಕ ಲೋಕಸೇವಾ ಆಯೋಗದ ಪಶು ವೈದ್ಯಾಧಿಕಾರಿ ಮತ್ತು ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆ ನೇಮಕಾತಿ ಹಗರಣದಲ್ಲಿ ಬಂಧಿತರಾಗಿರುವ ಅಮಾನತುಗೊಂಡಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರನ್ನು ಬೆಂಗಳೂರಿನ ವಿಶೇಷ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ನೀಡಿದೆ.
ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಗಂಗ್ವಾರ್ ಅವರ 14 ದಿನಗಳ ಕಸ್ಟಡಿ ಇಂದಿಗೆ ಕೊನೆಯಾದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅವರನ್ನು ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ್ ಸಂಗ್ರೇಶಿ ಅವರ ಮುಂದೆ ಹಾಜರುಪಡಿಸಿದರು.
ಜಾರಿ ನಿರ್ದೇಶನಾಲಯವು ಆರೋಪಿಯ ಕಸ್ಟಡಿ ಅವಧಿ ವಿಸ್ತರಣೆ ಕೋರದ ಹಿನ್ನೆಲೆಯಲ್ಲಿ ನ್ಯಾಯಾಲಯವು ಗಂಗ್ವಾರ್ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿತು.
ಇದರ ಬೆನ್ನಿಗೇ ಗಂಗ್ವಾರ್ ಪರ ವಕೀಲರು ಅವರಿಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಇ ಡಿಗೆ ನ್ಯಾಯಾಲಯ ನಿರ್ದೇಶಿಸಿದ್ದು, ವಿಚಾರಣೆಯನ್ನು ಅಕ್ಟೋಬರ್ 8ಕ್ಕೆ ಮುಂದೂಡಲಾಗಿದೆ.
ಅಪರಾಧ ತನಿಖಾ ದಳದ (ಸಿಐಡಿ) ಕಸ್ಟಡಿಯಲ್ಲಿದ್ದ ಜ್ಞಾನೇಂದ್ರ ಅವರನ್ನು ಜಾರಿ ನಿರ್ದೇಶನಾಲಯವು ಸೆಪ್ಟೆಂಬರ್ 21ರಂದು ತನ್ನ ಕಸ್ಟಡಿಗೆ ಪಡೆದುಕೊಂಡಿತ್ತು. ಮೊದಲಿಗೆ ಆರು ದಿನ ಮತ್ತು ಆನಂತರ ಎಂಟು ದಿನ ಸೇರಿ ಒಟ್ಟು 14 ದಿನ ಗಂಗ್ವಾರ್ ವಿಚಾರಣೆಯನ್ನು ಇ ಡಿ ನಡೆಸಿತ್ತು.
ಪಶು ವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಗಂಗ್ವಾರ್ ಮತ್ತು ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಹಾಗೂ ನೇಮಕಾತಿ ಹಗರಣದ ಕಿಂಗ್‌ಪಿನ್ ಬಸವರಾಜ್ ಕನ್ನಾಳೆ ಪಿತೂರಿ ನಡೆಸಿ, ಸೋರಿಕೆ ಮಾಡುವ ಮೂಲಕ ಆಕಾಂಕ್ಷಿಗಳಿಂದ ಲಕ್ಷಾಂತರ ರೂಪಾಯಿ ಸಂಗ್ರಹಿಸಿದ್ದಾರೆ ಎಂದು ಇ ಡಿ ಆರೋಪಿಸಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ ಕನ್ನಾಳೆಯು ₹1.50 ಕೋಟಿ ಲಂಚವನ್ನು ಮುಂಗಡವಾಗಿ ಸಂಗ್ರಹಿಸಿದ್ದು, ಈ ಪೈಕಿ ₹1.30 ಕೋಟಿಯನ್ನು ಗಂಗ್ವಾರ್‌ಗೆ ನಗದಿನ ರೂಪದಲ್ಲಿ ಪಾವತಿಸಿದ್ದಾನೆ. ಕೆಪಿಎಸ್‌ಸಿ ಮಾಜಿ ಅಧಿಕಾರಿಗೆ ₹23 ಲಕ್ಷದಲ್ಲಿ ಚಿನ್ನಾಭರಣ ಖರೀದಿಸಲಾಗಿದೆ ಎಂದು ಇ ಡಿ ಆರೋಪಿಸಿದೆ.
ಜನವರಿ 9ರಂದು ಪಶು ವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆ ನಡೆದಿದ್ದು, ಗಂಗ್ವಾರ್ ಅವರು ಜನವರಿ 7ರಂದು ಪ್ರಶ್ನೆ ಪತ್ರಿಕೆ ಮತ್ತು ಉತ್ತರಗಳನ್ನು ಕನ್ನಾಳೆಗೆ ಎಚ್‌ಪಿ ಪೆನ್‌ಡ್ರೈವ್‌ನಲ್ಲಿ ನೀಡಿದ್ದರು ಎಂಬುದು ಇ ಡಿ ಆರೋಪವಾಗಿದೆ.