Krishna Janmabhumi Case
Krishna Janmabhumi Case 
ಸುದ್ದಿಗಳು

[ಕೃಷ್ಣ ಜನ್ಮಭೂಮಿ ಪ್ರಕರಣ] ಮಸೀದಿ ನೆಲಸಮಕ್ಕೆ ಒಪ್ಪಿದರೆ ದೊಡ್ಡ ಪ್ರಮಾಣದ ಭೂಮಿ ನೀಡಲಾಗುವುದು ಎಂದ ಹಿಂದೂ ಸಂಘಟನೆ

Bar & Bench

ಮಥುರಾದ ಕೃಷ್ಣ ಜನ್ಮಭೂಮಿಯ ಬಳಿಯಿರುವ ಶಾಹಿ ಈದ್ಗಾ ಮಸೀದಿಯನ್ನು ನೆಲಸಮ ಮಾಡಲು ಒಪ್ಪಿದರೆ ಮುಸ್ಲಿಂ ಪಕ್ಷಕಾರರಿಗೆ (ಮಸೀದಿಯ ನಿರ್ವಹಣಾ ಸಮಿತಿ) ದೊಡ್ಡ ಪ್ರಮಾಣದ ಜಮೀನು ನೀಡಲಾಗುವುದು ಎಂದು ಮಥುರಾ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಶ್ರೀ ಕೃಷ್ಣ ಜನ್ಮಭೂಮಿ ಮುಕ್ತಿ ಆಂದೋಲನ ಸಮಿತಿ ತಿಳಿಸಿದೆ.

ಮಥುರಾದ ಸೀನಿಯರ್‌ ಡಿವಿಷನ್‌ನ ಸಿವಿಲ್‌ ನ್ಯಾಯಾಧೀಶರ ಎದುರು ವಕೀಲ ಮಹೇಂದ್ರ ಪ್ರತಾಪ್ ಸಿಂಗ್ ಅವರ ಮೂಲಕ ಮನವಿ ಸಲ್ಲಿಸಲಾಗಿದ್ದು ದೇವಾಲಯ ನೆಲಸಮಗೊಳಿಸಿದ ಬಳಿಕ ಮೊಘಲ್‌ ಚಕ್ರವರ್ತಿ ಔರಂಗಜೇಬ್‌ ದೇಗುಲದ ಕಲ್ಲುಗಳಿಂದ ಮಸೀದಿ ನಿರ್ಮಿಸಿದ್ದಾನೆ ಎಂದು ಆರೋಪಿಸಲಾಗಿದೆ.

“ಹಿಂದೂ ಧರ್ಮೋಕ್ತಿಗಳಿರುವ ಹಲವು ಕಲ್ಲುಗಳು ಗೋಚರಿಸಿದ್ದು ಔರಂಗಾಜೇಬನ ಆದೇಶದ ಮೇರೆಗೆ ದೇಗುಲ ನಾಶಪಡಿಸಿ ಬಳಿಕ ಮಸೀದಿ ನಿರ್ಮಿಸಲಾಗಿದೆ” ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಸುಪ್ರೀಂ ಕೋರ್ಟ್‌ 2019ರ ನವೆಂಬರ್‌ನಲ್ಲಿ ನೀಡಿದ್ದ ರಾಮ ಜನ್ಮಭೂಮಿ ತೀರ್ಪಿನ ಮೇಲೆ ಅರ್ಜಿ ಅವಲಂಬಿತವಾಗಿದೆ. ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ಹಿಂದೂ ಪಕ್ಷಕಾರರ ಪರವಾಗಿ ತೀರ್ಪು ನೀಡಿತ್ತು ಅಲ್ಲದೆ ಮುಸ್ಲಿಮರು ಮಸೀದಿ ನಿರ್ಮಿಸಿಕೊಳ್ಳಲು ಪರ್ಯಾಯ ಭೂಮಿ ಒದಗಿಸುವಂತೆ ಸರ್ಕಾರಕ್ಕೆ ಸೂಚಿಸಿತ್ತು.

ಮಸೀದಿಯನ್ನು ನೆಲಸಮ ಮಾಡಲು ಒಪ್ಪಿದರೆ ಮುಸ್ಲಿಂ ಪಕ್ಷಕಾರರಿಗೆ ಈಗ ಇರುವ ಭೂಮಿಗಿಂತಲೂ ದೊಡ್ಡ ಜಾಗವನ್ನು ನೀಡುವ ಮೂಲಕ ವಿವಾದ ಬಗೆಹರಿಸಲಾಗುವುದು. ಅರ್ಜಿಯನ್ನು ನ್ಯಾಯಾಲಯ ಅಧಿಕೃತವಾಗಿ ಪರಿಗಣಿಸಿ ಮಸೀದಿ ನೆಲಸಮಗೊಳಿಸುವಂತೆ ಕಳೆದ ವರ್ಷ ಹೂಡಲಾಗಿದ್ದ ಮೊಕದ್ದಮೆಯ ಭಾಗವಾಗಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

ಕಳೆದ ವರ್ಷ ಅಂದರೆ 2020ರ ಸೆಪ್ಟೆಂಬರ್ 25ರಂದು ಬಾಲ ದೇವತೆ ಶ್ರೀ ಕೃಷ್ಣ ವಿರಾಜಮಾನ್‌ ಪರವಾಗಿ ಮಥುರಾದ ಹಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶರ ಮುಂದೆ ಮೊಕದ್ದಮೆ ಹೂಡಲಾಗಿತ್ತು. ದೇವತೆಯ ವಾದ ಮಿತ್ರರಾಗಿ ವಕೀಲರಾದ ರಂಜನಾ ಅಗ್ನಿಹೋತ್ರಿ ಮತ್ತು ಆರು ಫಿರ್ಯಾದುದಾರರ ಮೂಲಕ ಅರ್ಜಿ ಸಲ್ಲಿಸಿ ಮಥುರಾದ ಶ್ರೀಕೃಷ್ಣ ದೇಗುಲಕ್ಕೆ ಹೊಂದಿಕೊಂಡಂತಿರುವ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸುವಂತೆ ಪ್ರಾರ್ಥಿಸಲಾಗಿತ್ತು.

ಈದ್ಗಾ ಮಸೀದಿಯ ನಿರ್ವಹಣಾ ಸಮಿತಿ ಕಾನೂನಿನ ಅಧಿಕಾರವಿಲ್ಲದೆ ಮತ್ತು ನ್ಯಾಯಾಲಯ ತೀರ್ಪನ್ನು ಉಲ್ಲಂಘಿಸಿ ಕೆಲ ಮುಸ್ಲಿಮರ ನೆರವಿನೊಂದಿಗೆ ದೊಡ್ಡದೊಂದು ನಿರ್ಮಿತಿ ತಲೆ ಎತ್ತುವಂತೆ ಮಾಡಿತು ಮತ್ತು ಶ್ರೀ ಕೃಷ್ಣ ಜನ್ಮಸ್ಥಾನ ಟ್ರಸ್ಟ್‌ ಮತ್ತು ದೇವತೆಗೆ ಸೇರಿದ ಕತ್ರ ಕೇಶವ ದೇವ್‌ ಭೂಮಿಯನ್ನು ಅತಿಕ್ರಮಿಸಿತು ಎಂದು ದಾವೆಯಲ್ಲಿ ಆರೋಪಿಸಲಾಗಿದೆ.

2020ರ ಸೆಪ್ಟೆಂಬರ್‌ನಲ್ಲಿ ಸಿವಿಲ್ ನ್ಯಾಯಾಲಯ ಈ ಮೊಕದ್ದಮೆಯನ್ನು ವಜಾಗೊಳಿಸಿತು. 2020 ರ ಅಕ್ಟೋಬರ್‌ನಲ್ಲಿ ಇದನ್ನು ಪ್ರಶ್ನಿಸಿ ಮಥುರಾದ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಯಿತು. ಅದರ ವಿಚಾರಣೆಗೆ ನ್ಯಾಯಾಲಯದಿಂದ ಅನುಮತಿ ದೊರೆತಿತ್ತು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಜರಿಲ್ಲದ ಕಾರಣ ಪ್ರಸ್ತುತ ಅರ್ಜಿಯನ್ನು ಎರಡನೇ ಸಿವಿಲ್ ನ್ಯಾಯಾಧೀಶರಾದ ಅನುಪಮ್ ಸಿಂಗ್ ಅವರ ಮುಂದೆ ಸಲ್ಲಿಸಲಾಯಿತು. ಪ್ರಕರಣದ ವಿಚಾರಣೆ ಜುಲೈ 5ಕ್ಕೆ ನಿಗದಿಯಾಗಿದೆ.

[ಕೃಷ್ಣ ಜನ್ಮಭೂಮಿ ಮುಕ್ತಿ ಆಂದೋಲನ್ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ಇಲ್ಲಿ ಓದಿ]

Application_by_Sri_Krishna_Janmabhumi_Mukti_Aandolan_Samiti.pdf
Preview