ಸುದ್ದಿಗಳು

ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಪ್ರಕರಣ: ಹೈಕೋರ್ಟ್ ಆದೇಶ ಸೂಕ್ತವಾಗಿದೆ ಎಂದ ಸುಪ್ರೀಂ

ತಿದ್ದುಪಡಿಗೆ ಅವಕಾಶ ನೀಡಿದ ಹೈಕೋರ್ಟ್ ಆದೇಶದ ವಿರುದ್ಧ ಮುಸ್ಲಿಂ ಪಕ್ಷಕಾರರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.

Bar & Bench

ಶಾಹಿ ಈದ್ಗಾ - ಕೃಷ್ಣ ಜನ್ಮಭೂಮಿ ಪ್ರಕರಣದಲ್ಲಿ ಹಿಂದೂ ಪಕ್ಷಕಾರರು ತಮ್ಮ ದೂರನ್ನು ತಿದ್ದುಪಡಿ ಮಾಡಲು ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯನ್ನು(ಎಎಸ್‌ಐ) ಪ್ರಕರಣದ ಪಕ್ಷಕಾರನನ್ನಾಗಿ ಮಾಡಲು ಅಲಾಹಾಬಾದ್‌ ಹೈಕೋರ್ಟ್‌ ಈಚೆಗೆ  ಈಚೆಗೆ ನೀಡಿದ ಆದೇಶ ಮೇಲ್ನೋಟಕ್ಕೆ ಸೂಕ್ತವಾಗಿ ಇದೆ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಹೇಳಿದೆ [ಶಾಹಿ ಈದ್ಗಾ ಆಡಳಿತ ಟ್ರಸ್ಟ್‌ ಸಮಿತಿ ಮತ್ತು  ಭಗವಾನ್ ಶ್ರೀಕೃಷ್ಣ ವಿರಾಜಮಾನ್‌ ವಾದಮಿತ್ರ ಇನ್ನಿತರರ ನಡುವಣ ಪ್ರಕರಣ].

ಹೈಕೋರ್ಟ್ ಆದೇಶದ ವಿರುದ್ಧ ಮುಸ್ಲಿಂ ಪಕ್ಷಕಾರರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಪಿವಿ ಸಂಜಯ್ ಕುಮಾರ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

"ಒಂದು ವಿಚಾರ ಸ್ಪಷ್ಟವಾಗಿದೆ. ಹಿಂದೂ ವಾದಿಗಳು ಮೂಲ ದೂರಿಗೆ ಮಾಡಿರುವ ತಿದ್ದುಪಡಿಯನ್ನು ಪುರಸ್ಕರಿಸಬೇಕು" ಎಂದು ಪೀಠ ಮೌಖಿಕವಾಗಿ ಹೇಳಿದೆ.

ವಿವಾದಿತ ಕಟ್ಟಡ ಎಎಸ್‌ಐ ಅಡಿಯಲ್ಲಿ ಸಂರಕ್ಷಿತ ಸ್ಮಾರಕವಾಗಿದ್ದು, ಪೂಜಾ ಸ್ಥಳಗಳ ಸಂರಕ್ಷಣಾ ಕಾಯಿದೆ ಅಂತಹ ಸ್ಮಾರಕಕ್ಕೆ ಅನ್ವಯಿಸುವುದಿಲ್ಲ ಎಂದು ಹಿಂದೂ ಪಕ್ಷಕಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಪರಿಣಾಮವಾಗಿ, ಇದನ್ನು ಮಸೀದಿಯಾಗಿ ಬಳಸಲಾಗುವುದಿಲ್ಲ ಎಂದು ಅವರು ವಾದಿಸಿದ್ದರು.

ಆದ್ದರಿಂದ ಅವರು ಈ ಪ್ರಕರಣದಲ್ಲಿ ಎಎಸ್‌ಐಯನ್ನು ಪಕ್ಷಕಾರನನ್ನಾಗಿ ಸೇರಿಸಲು ವಿನಂತಿಸಿದ್ದರು. , ಅರ್ಜಿಯನ್ನು ಕಳೆದ ತಿಂಗಳು (ಮಾರ್ಚ್‌) ಹೈಕೋರ್ಟ್ ಪುರಸ್ಕರಿಸಿತ್ತು. ಹೀಗಾಗಿ ಮುಸ್ಲಿಂ ಪಕ್ಷಕಾರರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಮುಸ್ಲಿಂ ಪಕ್ಷಕಾರರು ಸಲ್ಲಿಸಿದ್ದ ಮೇಲ್ಮನವಿಯ ಮೇರೆಗೆ ಸುಪ್ರೀಂ ಕೋರ್ಟ್ ಏಪ್ರಿಲ್ 4 ರಂದು ಹಿಂದೂ ಪಕ್ಷಗಳಿಗೆ ನೋಟಿಸ್ ನೀಡಿತ್ತು . ಇಂದು ಈ ಪ್ರಕರಣ ವಿಚಾರಣೆಗೆ ಬಂದಾಗ, ಮುಸ್ಲಿಂ ಪಕ್ಷಕಾರರ ಮನವಿ ತಪ್ಪು ಗ್ರಹಿಕೆಗಳಿಂದ ಕೂಡಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

"ಈ ಅರ್ಜಿ ಸಂಪೂರ್ಣವಾಗಿ ತಪ್ಪು. ಮೊಕದ್ದಮೆಗೆ ಕಕ್ಷಿದಾರರನ್ನು ಸೇರಿಸಲು ಹೈಕೋರ್ಟ್ ತಿದ್ದುಪಡಿಗೆ ಅವಕಾಶ ನೀಡಲೇಬೇಕಿತ್ತು" ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಅಂತಿಮವಾಗಿ ನ್ಯಾಯಾಲಯ ಮುಸ್ಲಿಂ ಕಡೆಯವರಿಗೆ ತನ್ನ ಲಿಖಿತ ಹೇಳಿಕೆ ಸಲ್ಲಿಸಲು ಸಮಯ ನೀಡಿ ವಿಚಾರಣೆ ಮುಂದೂಡಿತು.