KSBC election 
ಸುದ್ದಿಗಳು

[ಕೆಎಸ್‌ಬಿಸಿ ಚುನಾವಣೆ] ತಾಲ್ಲೂಕು, ಜಿಲ್ಲಾ ಕೇಂದ್ರಗಳ ಮತಪತ್ರ ಮಿಶ್ರಣ ಮಾಡಿ ಎಣಿಕೆ ನಡೆಸಲು ಹೇಮಂತ ರಾಜು ಮನವಿ

“ಆಯಾ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳ ಬೂತ್‌ ಮತಪತ್ರಗಳನ್ನು ಪ್ರತ್ಯೇಕಿಸಿ ಎಣಿಕೆ ಮಾಡಬಾರದು. ಈ ರೀತಿ ಬೂತ್‌ವಾರು ಎಣಿಕೆ ನಡೆಸುವುದರಿಂದ ಸಂಸ್ಥೆಯಲ್ಲಿ ಗುಂಪುಗಾರಿಕೆ, ಸ್ವಜನಪಕ್ಷಪಾತವನ್ನು ಉತ್ತೇಜಿಸಿದಂತಾಗುತ್ತದೆ” ಎಂದು ವಿವರಣೆ.

Bar & Bench

“ಕರ್ನಾಟಕ ರಾಜ್ಯ ವಕೀಲರ ಪರಿಷತ್‌ (ಕೆಎಸ್‌ಬಿಸಿ) ಚುನಾವಣೆಯ ಮತ ಎಣಿಕೆಯಲ್ಲಿ ರಾಜ್ಯದ ಎಲ್ಲ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳ ಮತಪತ್ರಗಳನ್ನು ಮಿಶ್ರಣ ಮಾಡಿ ಎಣಿಕೆ ಪ್ರಕ್ರಿಯೆ ನಡೆಸಬೇಕು, ಬೂತ್‌ವಾರು ನಡೆಸಬಾರದು” ಎಂದು ಅಭ್ಯರ್ಥಿಯೂ ಆದ ವಕೀಲ ಆರ್ ಹೇಮಂತ ರಾಜು ಮನವಿ ಮಾಡಿದ್ದಾರೆ.

ಚುನಾವಣಾ ಅಧಿಕಾರಿ ನಿವೃತ್ತ ಹೈಕೋರ್ಟ್‌ ನ್ಯಾಯಮೂರ್ತಿ ಸುಭಾಷ್ ಬಿ. ಅಡಿ ಅವರಿಗೆ ಪತ್ರ ಬರೆದಿದ್ದು, “ಆಯಾ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳ ಬೂತ್‌ ಮತಪತ್ರಗಳನ್ನು ಪ್ರತ್ಯೇಕಿಸಿ ಎಣಿಕೆ ಮಾಡಬಾರದು. ಈ ರೀತಿ ಬೂತ್‌ವಾರು ಎಣಿಕೆ ನಡೆಸುವುದರಿಂದ ಸಂಸ್ಥೆಯಲ್ಲಿ ಗುಂಪುಗಾರಿಕೆ, ಸ್ವಜನಪಕ್ಷಪಾತವನ್ನು ಉತ್ತೇಜಿಸಿದಂತಾಗುತ್ತದೆ” ಎಂದು ಹೇಳಿದ್ದಾರೆ.

“ಭಾರತೀಯ ವಕೀಲರ ಪರಿಷತ್‌ ಅಧ್ಯಾಯ 5ರ ಉಪನಿಯಮ 10 (ಡಿ) ಅಡಿಯಲ್ಲಿ ವಿವರಿಸಲಾಗಿರುವ; ರಾಜ್ಯ ವಕೀಲರ ಪರಿಷತ್‌ ಮತ್ತು ಭಾರತೀಯ ವಕೀಲರ ಪರಿಷತ್‌ ಚುನಾವಣೆ ಪ್ರಕ್ರಿಯೆ, ನೀತಿ ಸಂಹಿತೆ, ಅರ್ಹತೆ ಮತ್ತು ಅನರ್ಹತೆಗೆ ಸಂಬಂಧಿಸಿದ ನಿಯಮ–2023ರಲ್ಲಿ ಬೂತ್‌ವಾರು ಮತ ಎಣಿಕೆಯನ್ನು ವರ್ಜಿಸುವಂತೆ ಪ್ರತಿಪಾದಿಸಲಾಗಿದೆ. ಆದ್ದರಿಂದ, ಎಲ್ಲ ಮತಪತ್ರಗಳನ್ನು ಮಿಶ್ರಣ ಮಾಡಿ ಎಣಿಕೆ ಪ್ರಕ್ರಿಯೆ ನಡೆಸಬೇಕು” ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ರಾಜ್ಯ ವಕೀಲರ ಪರಿಷತ್‌ಗೆ ಮಾರ್ಚ್‌ 11ರಂದು ಚುನಾವಣೆ ನಡೆದಿದ್ದು, ಮತ ಎಣಿಕೆ ಸೋಮವಾರದಿಂದ (ಮಾರ್ಚ್‌ 23) ಆರಂಭವಾಗಿದೆ.